ಜಾನ್ ಅಬ್ರಾಹಂನ ಮನದನ್ನೆ, ಬಾಲಿವುಡ್‌ನ ಕಪ್ಪು ಸುಂದರಿ, ಹಾಟ್ ಬಿಪಾಶಾ ಬಸು ಈಗ ಹಿಂದೆ ಬಿದ್ದಿದ್ದಾಳೋ ಗೊತ್ತಿಲ್ಲ. ಒಟ್ಟಾರೆ ಆಕೆಯ ಕೈಯಲ್ಲಿ ಈಗ ಹೇಳಿಕೊಳ್ಳುವಂತಹ ಚಿತ್ರಗಳೇನೂ ಇಲ್ಲ. ಆಕೆಯ ಬಹುನಿರೀಕ್ಷಿತ 'ಆ ದೇಖೇ ಝರಾ' ಬಿಡುಗಡೆಯಾದ ನಂತರ ಹೆಚ್ಚು ಸುದ್ದಿ ಮಾಡಲಿಲ್ಲ. ಅಷ್ಟೇ ಆಗಿದ್ದರೆ ಸರಿ. ಆದರೆ ಈಗ ಬಿಪಾಶಾಗೆ 'ರೇಸ್' ಚಿತ್ರದಿಂದಲೂ ಆಹ್ವಾನ ಬಂದಿಲ್ಲ. ಇದು ಆಕೆಯನ್ನಲ್ಲದಿದ್ದರೂ ಆಕೆಯ ಅಭಿಮಾನಿ ವರ್ಗವನ್ನು ದಿಕ್ಕೆಡಿಸಿದೆ.
ಈ ಹಿಂದೆ 'ರೇಸ್' ಚಿತ್ರದಲ್ಲಿ ಬಿಪಾಶಾ ಅಭಿನಯಿಸಿದ್ದರು. ಆದರೆ ಈಗ 'ರೇಸ್ 2' ಬರುತ್ತಿದೆ. ಆದರೆ ಇದಕ್ಕೆ ಬಿಪಾಶಾಗೆ ಆಫರ್ ಬಂದಿಲ್ಲ. ಅಷ್ಟೇ ಆಲ್ಲ 'ಮಿ.ಫ್ರಾಡ್' ಚಿತ್ರವೂ ಅರ್ಧಕ್ಕೇ ನಿಂತಿತ್ತು. ಈ ಎಲ್ಲವುಗಳಿಂದ ಬಿಪಾಶಾ ಮಾತ್ರ ವಿಚಲಿತಳಾಗಿಲ್ಲ. ''ರೇಸ್ ಚಿತ್ರದಿಂದ ನನಗೆ ಆಹ್ವಾನ ಬಂದಿಲ್ಲ ನಿಜ. 'ರೇಸ್-1'ರಲ್ಲಿ ಅಭಿನಯಿಸಿದ ಮಾತ್ರಕ್ಕೆ 'ರೇಸ್-2'ನಿಂದ ಆಫರ್ ಬರಬೇಕೆಂದೇನೂ ಇಲ್ಲವಲ್ಲ. ಬರದಿದ್ದರೂ ಅಂಥದ್ದೇನಿದೆ ಇದರಲ್ಲಿ ದೊಡ್ಡ ವಿಚಾರ?'' ಎಂದು ಬಿಪಾಶಾ ಗತ್ತಿನಿಂದಲೇ ಕೇಳುತ್ತಾಳೆ.
''ಮಿ.ಫ್ರಾಡ್ ಚಿತ್ರ ಮತ್ತೆ ಗರಿಗೆದರಿದೆ ಎಂಬ ಸುದ್ದಿಯೂ ಬಂದಿದೆ. ಚಿತ್ರದಿಂದ ನನ್ನ ಡೇಟ್ಸ್‌ಗಾಗಿ ಕರೆ ಬಂದರೆ ನಾನು ಖಂಡಿತ ನನ್ನ ಡೇಟ್ಸ್ ನೀಡಲು ಕುಷಿಪಡುತ್ತೇನೆ'' ಎಂದು ಘಂಟಾಘೋಷವಾಗಿ ಹೇಳುತ್ತಾಳೆ ಬಿಪಾಶಾ.
IFM
ಆದರೂ, 'ಬಾಲಿವುಡ್‌ನಲ್ಲಿ ಪ್ರತಿ ಬಾರಿಯೂ ಒಂದು ಚಿತ್ರದ ಎರಡೇ ಭಾಗ ಮತ್ತೆ ಹೊರಬರುತ್ತಿದ್ದರೆ ನಟಿಯರನ್ನು ಬದಲಿಸುತ್ತಾರೆ. ಆದರೆ ನಟರನ್ನು ಉಳಿಸಿಕೊಳ್ಳುತ್ತಾರೆ' ಎಂಬ ವಾದವನ್ನು ಬಿಪಾಶಾರೂ ಒಪ್ಪುತ್ತಾರೆ. ''ಹೌದು. ಹೀಗೆ ಮಾಡುತ್ತಾರೆ ನಿಜ. ಅಂದು 'ರಾಝ್' ಚಿತ್ರದಲ್ಲಿ ಮಾಡಿದಾಗ ಅದು ಹಿಟ್ ಆಯಿತು. ಮತ್ತೆ 'ರಾಝ್- 2' ಬಂದಾಗ ನನಗೆ ಆಫರ್ ಬರಲಿಲ್ಲ. ಬೇರೆ ತಂಡ ಕಟ್ಟಿ ಮಾಡಿದರು. ಇದರಿಂದ ನನಗೇನೂ ಬೇಸರವಿಲ್ಲ. ಮಾಡಲಿ ಬಿಡಿ. ನನಗೆ ನಟನೆಯೊಂದೇ ಇರಬೇಕು ಎಂದು ನಾನು ಯಾರ ಜತೆಗೂ ಸ್ಪರ್ಧೆಗೆ ಇಳಿಯುವುದಿಲ್ಲ. ನನ್ನ ಪ್ರತಿಭೆಗೆ ತಕ್ಕಷ್ಟು ಅಭಿನಯಿಸುತ್ತೇನೆ. ಸಿಕ್ಕ ಅವಕಾಶಗಳಲ್ಲಿ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ'' ಎಂದು ತಣ್ಣಗೆ ಹೇಳುತ್ತಾರೆ.
''ಮಿ.ಫ್ರಾಡ್ ಚಿತ್ರ ಒಂದು ಕಾಮಿಡಿ. ಇದರಲ್ಲಿ ಮುಂದುವರಿಯುತ್ತೇನೆ. ಇದರಲ್ಲಿ ಅಜಯ್ ಹಾಗೂ ಸಂಜಯ್ ನನ್ನ ಸಹನಟರು. ಆಲ್ ದಿಬೆ ಸ್ಟ್ ಕೂಡಾ ನಾನು ನಟಿಸುವ ಇನ್ನೊಂದು ಕಾಮಿಡಿ ಸಿನಿಮಾ. ಇಷ್ಟವಾಯಿತು. ನಟಿಸುತ್ತಿದ್ದೇನೆ. ಇಂಥದ್ದೇ ಬರಬೇಕು, ಅಂಥದ್ದೇ ಬರಬೇಕು ಎಂದೆಲ್ಲ ಅಂದುಕೊಳ್ಳುವುದಿಲ್ಲ. ಯಾವುದಾದರೂ ಸರಿ. ಸಿಗದಿದ್ದುದಕ್ಕೆ ಅಳುತ್ತಾ ಕೂರುವ ಜಾಯಮಾನ ನನ್ನದಲ್ಲ'' ಎನ್ನುತ್ತಾಳೆ.
ಅಂದಹಾಗೆ, ಈ ವರ್ಷ ಬಿಪಾಶಾ ಸಹಿ ಮಾಡಿದ್ದು ಕೇವಲ ಒಂದೇ ಸಿನಿಮಾಕ್ಕೆ. ಹಾಗಾದರೆ ಅವಕಾಶ ಸಿಗುತ್ತಿಲ್ಲವೇ ಎಂದು ಕೇಳಿದರೆ, ''ಅವಕಾಶ ಸಿಕ್ಕರೆ ಸಿಗಲಿ. ನಟಿಸುತ್ತೇನೆ. ಇಲ್ಲದಿದ್ದರೆ ನನಗೆ ಬೇಸರವೇ ಇಲ್ಲ. ನನಗೆ ನೂರಾರು ಇತರ ಕೆಲಸಗಳಿವೆ. ನಾಲ್ಕು ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುತ್ತೇನೆ. ಸ್ಟೇಜ್ ಶೋ ನೀಡುತ್ತೇನೆ. ಬ್ಯುಸಿಯಾಗಿರಲು ಇನ್ನೇನು ಬೇಕು?'' ಎಂದು ಹುಬ್ಬುಹಾರಿಸುತ್ತಾಳೆ. ಆದರೂ ಮನದ ಮೂಲೆಯಲ್ಲೆಲ್ಲೂ ಹೊಸಬರ ದಾಳಿಗೆ ತನ್ನ ಖದರ್ ಕಳೆದುಹೋಗುತ್ತರುವ ಬಗ್ಗೆ ದುಃಖವಿತ್ತಾ... ಗೊತ್ತಾಗಲಿಲ್ಲ. ಎಷ್ಟಾದರೂ ಬಾಲಿವುಡ್‌ನ ಪ್ರತಿಭಾವಂತ ನಟಿಯಲ್ಲವೇ!