ನನ್ನ ಗಂಡ ಮುಗ್ಧ. ಆತ ಇಂತಹ ಕೆಲಸ ನಡೆಸುವುದಿಲ್ಲ ಎಂದು ನನಗೆ ನಂಬಿಕೆಯಿದೆ. ಹೀಗೆ ಹೇಳಿದ್ದು ಅತ್ಯಾಚಾರದ ಆರೋಪದಲ್ಲಿ ಬಂಧಿತನಾದ ಬಾಲಿವುಡ್ ನಟ ಶೈನಿ ಅಹುಜಾರ ಪತ್ನಿ ಅನುಪಮ್ ಅಹುಜಾ.
ನೊಯ್ಡಾದಿಂದ ಪತಿಯ ಬಂಧನದ ಸುದ್ದಿ ಅರಿತ ಪತ್ನಿ ಅನುಪಮ್ ಓಡೋಡಿ ಬಂದಿದ್ದಾರೆ. ಕಾರ್ಪೋರೇಟ್ ಎಕ್ಸಿಕ್ಯೂಟಿವ್ ಆಗಿದ್ದ ಶೈನಿ ಪತ್ನಿ ತನ್ನ ಕೆಲಸ ತ್ಯಜಿಸಿ ಈಗ ತನ್ನದೇ ಬ್ಯುಸಿನೆಸ್ ಹೊಂದಿದ್ದಾರೆ. ಇದು ತನ್ನ ಪತಿಯ ವಿರುದ್ಧ ನಡೆಸಿದ ಸಂಚು ಎಂದಿರುವ ಅನುಪಮ್, ಪೊಲೀಸರೂ ಕೂಡಾ ಶೈನಿ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳನ್ನು ಶುದ್ಧ ಅವಿವೇಕದ ವರದಿಗಳು ಎಂದು ತಳ್ಳಿಹಾಕಿದ್ದಾರೆ.
ಈವರೆಗೆ ಎಂದಿಗೂ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಪತ್ನಿ ಅನುಪಮ್ ಈ ಬಾರಿ ಮಾಧ್ಯಮಗಳಿಗೆ ತನ್ನ ಪತಿಯ ಬಂಧನದ ಕುರಿತು ಪ್ರತಿಕ್ರಿಯಿಸಿದ್ದಾರೆ. ತನ್ನ ಪತಿ ಮುಗ್ಧನೆಂದು ಹೇಳುವ ಜತೆಗೆ ನಾನು ಆತನನ್ನು ತುಂಬ ಪ್ರೀತಿಸುತ್ತೇನೆ. ನಮ್ಮ ಮಗಳಿಗೆ ಆತನೊಬ್ಬ ಅದ್ಭುತ ಅಪ್ಪ. ಜತೆಗೊಬ್ಬ ಅತ್ಯುತ್ತಮ ಸಂಗಾತಿ ಕೂಡ. ಚಿನ್ನದಂತಹ ಹೃದಯವಿರುವ ಪತಿ ಆತ. ನಮ್ಮ ಇಡೀ ಕುಟುಂಬ ಆತನ ಜತೆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶೈನಿ ತಾನು ಕೆಲಸದಾಕೆಯ ಸಹಮತಿಯಿಂದ ಲೈಂಗಿಕ ಸಂಪರ್ಕ ನಡೆಸಿದ್ದೇನೆ ಎಂದಿದ್ದು ಸುಳ್ಳು. ಅವರು ಅಂತಹ ಮನುಷ್ಯ ಅಲ್ಲ. ಜತೆಗೆ ಅವರು ತಮ್ಮ ವಕೀಲರಿಗೆ ತಾನು ಯಾವ ಹೇಳಿಕೆಗಳನ್ನೂ ನೀಡಿಲ್ಲ. ಇದೆಲ್ಲ ಪೊಲೀಸರ ಸುಳ್ಳು ಹೇಳಿಕೆಗಳು ಎಂದು ಶೈನಿ ಹೇಳಿದ್ದಾರೆ ಎಂದು ಅನುಪಮ್ ತಿಳಿಸಿದರು.
ಶೈನಿ ಜತೆ ಅನುಪಮ್ ಸಂಬಂಧ ಅಷ್ಟೇನೂ ಸರಿಯಿಲ್ಲ ಎಂಬ ವಾದಗಳನ್ನೂ ತಳ್ಳಿಹಾಕಿರುವ ಅನುಪಮ್ ನಾನು ಆತನ ಜತೆಗೇ ಮುಂಬೈ ಮನೆಯಲ್ಲಿ ವಾಸಿಸುತ್ತಿದ್ದೆ. ನಾನು ಅವರ ಜತೆಗೆ ಅಷ್ಟಾಗಿ ಹೊರಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ಬಗ್ಗೆಯೂ ಅವರಿಗೆ ಬೇಸರವಿದೆ. ಆದರೆ ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ. ಆದರೆ ಘಟನೆ ನಡೆದಿದೆ ಎಂದ ಸಂದರ್ಭ ಮಾತ್ರ ನಾನು ನೊಯ್ಡಾದಲ್ಲಿರುವ ಶೈನಿ ಕುಟುಂಬದ ಜತೆಗಿದ್ದೆ ಎನ್ನುತ್ತಾರೆ.
IFM
ಮಾಧ್ಯಮಗಳಲ್ಲಿ ಶೈನಿ ಸ್ವಲ್ಪ ಅಹಂಕಾರಿ, ಗರ್ವಿಷ್ಟ ಎಂದೇ ಬಿಂಬಿತವಾಗಿರುವ ಕುರಿತು ಪ್ರತಿಕ್ರಿಯಿಸಿದ ಅನುಪಮ್, ಶೈನಿಗೆ ಸರಳವಾಗಿ ಮಾತನಾಡಲು ಬರುವುದಿಲ್ಲ. ಹಾಗಾಗಿ ಅವರು ಹಾಗೆ ಅನಿಸುತ್ತಾರೆ. ಆದರೆ ಗುಣ ಮಾತ್ರ ಚಿನ್ನದಂಥದ್ದು ಎಂದರು.
ನಾವು ನ್ಯಾಯ ಪಡೆದೇ ತೀರುತ್ತೇವೆ. ಶೈನಿ ಅಂತಹ ಕೆಲಸ ಮಾಡಿರಲು ಸಾಧ್ಯವೇ ಇಲ್ಲ. ಆತನೊಬ್ಬ ಅಂತರ್ಮುಖಿ ಹಾಗೂ ಸ್ವಲ್ಪ ನಾಚಿಕೆಯ ಸ್ವಭಾವದ ವ್ಯಕ್ತಿ ಎಂದು ಅನುಪಮ್ ತಿಳಿಸಿದರು.
ಶೈನಿ ಅವರ ತಂದೆ ಕರ್ನಲ್ ಎಸ್.ಪಿ.ಅಹುಜಾ ಮಾತ್ರ ಮಗನ ಬಂಧನನ ವಿಷಯ ಕೇಳಿದರೆ ಕಣ್ಣೀರಾಗುತ್ತಾರೆ. ಸತ್ಯ ಸದ್ಯವೇ ಹೊರಬೀಳಲಿದೆ. ನಾನೇನೂ ಹೇಳುವುದಿಲ್ಲ. ನಮ್ಮನ್ನು ದಯವಿಟ್ಟು ನಮ್ಮಷ್ಟಕ್ಕೆ ಬಿಡಿ ಎಂದು ಮಾಧ್ಯಮಗಳಿಗೆ ಗೋಗರೆಯುತ್ತಾರೆ.
ಶೈನಿ ವಾಸಿಸುವ ಲೋಖಂಡವಾಲಾದ ತಾರಾಪುರ್ ಟವರ್ಸ್ ಅಪಾರ್ಟ್‌ಮೆಂಟ್ ಓಶಿವಾರಾ ಪೊಲೀಸ್ ಠಾಣೆಗೆ ತುಂಬ ಹತ್ತಿರದಲ್ಲೇ ಇದೆ. ತಾರಾಪುರ್ ಟವರ್ಸ್‌ನ ಇತರ ನಿವಾಸಿಗಳನ್ನು ಕೇಳಿದರೆ, ಅವರಿಗೆ ಈ ಕೆಲಸದಾಕೆಯ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಒಬ್ಬ ನಿವಾಸಿ ಹೇಳುವ ಪ್ರಕಾರ, ತಾರಾಪುರ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರರಿಗೆ ಐಡೆಂಟಿಟಿ ಪಾಸ್ ನೀಡುತ್ತಿದ್ದೆವು. ಆದರೆ ಈ ಹುಡುಗಿ ನೇರವಾಗಿ ಶೈನಿಯ ಕುಟುಂಬದಿಂದ ಆಯ್ಕೆಯಾಗಿ ಸೇರಿಕೊಂಡಿದ್ದಳು. ಆಕೆ ಪಾಸ್ ಹೊಂದಿರಲಿಲ್ಲ. ಅಲ್ಲದೆ, ಆಕೆ ಅಪಾರ್ಟ್‌ಮೆಂಟ್ ಒಳಗೆ ಬರಲು ವಿಸಿಟರ್ಸ್ ಬುಕ್‌ನಲ್ಲಿ ಹೆಸರು ನೊಂದಾಯಿಸಿ ದಿನವೂ ಕೆಲಸಕ್ಕೆ ಬರುತ್ತಿದ್ದಳು. ಆದರೆ ಭಾನುವಾರ ನಡೆದ ಘಟನೆ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಈವರೆಗೆ ಶೈನಿ ಬಗ್ಗೆ ಅಪಾರ್ಟ್‌ಮೆಂಟ್‌ನಲ್ಲಿ ಯಾವ ದೂರೂ ಬಂದಿರಲಿಲ್ಲ. ಅವರು ಸಭ್ಯರಾಗಿದ್ದರು ಎನ್ನುತ್ತಾರೆ.
ಶೈನಿಯವರ ಆಪ್ತ ಸಲಹೆಗಾರ ಸುಧೀರ್ ಮಿಶ್ರಾ ಕೂಡಾ ಶೈನಿ ಅವರ ಬಗ್ಗೆ ಚಿತ್ರದ ಶೂಟಿಂಗ್ ವೇಳೆಯೂ ಈವರೆಗೆ ಸೆಟ್‌ನಿಂದ ನನಗೆ ಯಾವುದೇ ದೂರುಗಳೂ ಬಂದಿರಲಿಲ್ಲ. ಅವರ ಬಗ್ಗೆ ಎಲ್ಲೂ ಕೆಟ್ಟ ಅಭಿಪ್ರಾಯಗಳು ಇರಲಿಲ್ಲ ಎನ್ನುತ್ತಾರೆ.