ಕನ್ನಡ ಚಿತ್ರರಂಗಕ್ಕೆ ಅವಳಿ ಸಹೋದರರು ಪರಿಚಯವಾಗಿದ್ದಾರೆ. ನೋಡೋದಕ್ಕೆ ಒಂದೇ ರೀತಿ ಇರುವ ಇವರು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಹುಶಃ ಮೊಟ್ಟ ಮೊದಲಿಗರು ಅಂತ ಹೇಳಬಹುದೇನೋ. ಇವರ ಹೆಸರು ಚಂದನ್ ಮತ್ತು ಚೇತನ್. ಈ ಅವಳಿ ಜೋಡಿಗಳು ಇತ್ತೀಚೆಗಷ್ಟೆ ಬಿಡುಗಡೆಯಾದ ಕಾರಂಜಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನೋಡಲು ಥೇಟ್ ಒಂದೇ ತರ ಇರುವ ಈ ಅವಳಿ ಸಹೋದರರ ಗುಣ, ನಡವಳಿಕೆ ಕೂಡ ಒಂದೇ ರೀತಿಯಂತೆ. ಇವರು ಹುಟ್ಟಿ, ಬೆಳೆದಿದ್ದು ಹಾಸನದಲ್ಲಿ. ಪಿಯುಸಿ ಮುಗಿಸಿ ಸಿನಿಮಾ ಆಸಕ್ತಿಯಿಂದ ಬೆಂಗಳೂರಿಗೆ ಬಂದ ಇವರು ಆದರ್ಶ್ ಇನ್ಸ್ಟಿಟ್ಯೂಟ್‌ನಲ್ಲಿ ನಟನೆ ಕಲಿತುಕೊಂಡಿದ್ದಾರೆ. ನಂತರ ನಿರ್ದೇಶಕ ದೊರೈ ಭಗವಾನ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಕೂಡ ಇದೆ.
ಅಷ್ಟೆ ಅಲ್ಲ, ಸಂಗೀತ ಮತ್ತು ವಿವಿಧ ತಾಂತ್ರಿಕ ವಿಭಾಗಗಳಲ್ಲೂ ಇವರು ಅನುಭವ ಪಡೆದುಕೊಂಡಿದ್ದಾರೆ. ಚಂದನ್‌ಗೆ ನಿರ್ದೇಶನದಲ್ಲಿ ಹೆಚ್ಚು ಆಸಕ್ತಿ ಇದ್ದರೆ ಚೇತನ್‌ಗೆ ಸಂಕಲನದಲ್ಲಿ ಹೆಚ್ಚು ಒಲವಿದೆಯಂತೆ. ಬಿ. ಸುರೇಶ್ ನಿರ್ದೇಶನದ ಗುಬ್ಬಚ್ಚಿಗಳು ಚಿತ್ರದಲ್ಲಿ ಅವಳಿ ಸಹೋದರರು ನಟಿಸುತ್ತಿದ್ದಾರೆ. ಅವಳಿ ಸಹೋದರರು ಚಿತ್ರರಂಗದಲ್ಲಿ ಎಷ್ಟರ ಮಟ್ಟಿಗೆ ಛಾಪು ಮೂಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.