ವಿತರಕರೊಬ್ಬರಿಗೆ ಹಳೆ ಬಾಕಿ ಉಳಿಸಿಕೊಂಡ ಕಾರಣವನ್ನು ಮುಂದೊಡ್ಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಕಿಚ್ಚ ಸುದೀಪ್ ನಿರ್ದೇಶನ-ನಾಯಕತ್ವದ 'ಕೆಂಪೇಗೌಡ' ಚಿತ್ರ ಬಿಡುಗಡೆಗೆ ತಡೆಯೊಡ್ಡಿದ್ದು, ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗವೂ ವರದಿಯಾಗಿದೆ.
2007ರಲ್ಲಿ ಬಿಡುಗಡೆಯಾಗಿದ್ದ 'ನಂ.73, ಶಾಂತಿ ನಿವಾಸ' ಚಿತ್ರಕ್ಕೆ ಸಂಬಂಧಪಟ್ಟ ವಿವಾದವೇ ಈಗ 'ಸಿಂಗಂ' ರಿಮೇಕ್ ಕನ್ನಡ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿರುವುದು. ಸುದೀಪ್ ತಂದೆ ಸರೋವರ್ ಸಂಜೀವ್ ನಿರ್ಮಾಣದ ಈ ಚಿತ್ರವನ್ನು ಸ್ವತಃ ಸುದೀಪ್ ನಿರ್ದೇಶಿಸಿ, ನಟಿಸಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ತೋಪೆದ್ದು ಹೋದರೂ, ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು.
ಈ ಸಿನಿಮಾ ಫ್ಲಾಪ್ ಆಗಿದ್ದರಿಂದ ಕರಾರಿನಂತೆ ವಿತರಕ ಚಂದ್ರಪ್ಪ ಎಂಬವರಿಗೆ ಸುದೀಪ್ ಐದು ಲಕ್ಷ ರೂಪಾಯಿ ಕೊಡಬೇಕಿತ್ತು. ಸುದೀಪ್ ಅದನ್ನು ಪಾವತಿ ಮಾಡದೇ ನಿರಾಕರಿಸಿದಾಗ, ಚಂದ್ರಪ್ಪ ಕೆಎಫ್‌ಸಿಸಿಗೆ ದೂರು ನೀಡಿದ್ದರು. ಅದರಂತೆ ಎರಡೂ ಕಡೆಯವರನ್ನು ಕರೆಸಿ ಸಂಧಾನ ನಡೆಸುವ ಯತ್ನಕ್ಕೆ ಕೆಎಫ್‌ಸಿಸಿ ಮುಂದಾಗಿತ್ತು. ಆದರೆ ಸುದೀಪ್ ತಪ್ಪಿಸಿಕೊಂಡಿದ್ದರು.
ಸಂಧಾನ ಸಭೆಗೆ ಸುದೀಪ್ ಬರದೇ ಇದ್ದುದರಿಂದ, ಏಕಪಕ್ಷೀಯ ಕ್ರಮಕ್ಕೆ ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿಯು, ಚಂದ್ರಪ್ಪ ಅವರಿಗೆ ಸುದೀಪ್ ಐದು ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಆದೇಶ ನೀಡಿತು. ಪ್ರಸಕ್ತ ಸುದೀಪ್ ನಿರ್ದೇಶನ-ನಟನೆಯ 'ಕೆಂಪೇಗೌಡ' ಬಿಡುಗಡೆಯಾಗಬೇಕಾದರೆ, ಆ ಬಾಕಿಯನ್ನು ಚುಕ್ತಾ ಮಾಡಿ ಎಂದು ಷರತ್ತು ಹಾಕಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು.
PR
ಕೊನೆಗೂ ಬಂದ ಸುದೀಪ್... ಚಲನಚಿತ್ರ ವಾಣಿಜ್ಯ ಮಂಡಳಿಯು ಸಂಧಾನಕ್ಕಾಗಿ ಕರೆದಾಗ ಬರದೇ ದೂರವೇ ಉಳಿದಿದ್ದ ಸುದೀಪ್, ತನ್ನ ಚಿತ್ರಕ್ಕೆ ತೊಂದರೆಯಾಗುತ್ತಿದೆ ಎನ್ನುವುದು ಅರಿವಿಗೆ ಬಂದಾಗ ಕೆಎಫ್‌ಸಿಸಿ ಕಚೇರಿಗೆ ಬಂದರು. ಆದರೆ ಕೆಎಫ್‌ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಬರಲೇ ಇಲ್ಲ.
ಈ ಹಿನ್ನೆಲೆಯಲ್ಲಿ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಮುಂತಾದ ಇತರ ಚಿತ್ರರಂಗದ ಪ್ರಮುಖರ ಜತೆ ಸುದೀಪ್ ಮಾತುಕತೆ ನಡೆಸಿದರು. ಸಂಜೆಯ ಹೊತ್ತಿಗೆ ಬಸಂತ್ ಕುಮಾರ್ ಪಾಟೀಲ್ ಅವರು ಮಾತುಕತೆಗಾಗಿ ಕಚೇರಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳ ಬೆಂಬಲ... ಇಷ್ಟೆಲ್ಲ ನಡೆಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು, ಕೆಂಪೇಗೌಡ ಚಿತ್ರಕ್ಕೆ ಒಡ್ಡಿರುವ ತಡೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಅಲ್ಲದೆ, ಸುದೀಪ್‌ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
'ಸುದೀಪ್ ಕೀ ಜೈ' ಎಂದು ಉನ್ಮಾದಗೊಂಡಿದ್ದ ಅಭಿಮಾನಿಗಳು ಘೋಷಣೆ ಕೂಗಿದರು. ಸ್ಥಳದಲ್ಲಿ ಒಂದು ರೀತಿಯ ಉದ್ವಿಗ್ನ ವಾತಾವರಣವೂ ನೆಲೆಸಿತ್ತು. ಸ್ಥಳದಲ್ಲೇ ಇದ್ದ ಸುದೀಪ್ ಅಭಿಮಾನಿಗಳನ್ನು ಸಂತೈಸಿದರಾದರೂ, ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು.
ನಿರ್ಮಾಪಕರ ಆಕ್ರೋಶ... 'ಕೆಂಪೇಗೌಡ' ಚಿತ್ರವನ್ನು ನಿರ್ಮಿಸುತ್ತಿರುವುದು ಸುದೀಪ್ ಅಲ್ಲ, ಅದು ಶಂಕರೇಗೌಡರು. ಹಾಗಾಗಿ ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ.
ಇದನ್ನೇ ನಿರ್ಮಾಪಕ ಶಂಕರೇಗೌಡ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ನಾಯಕ ಮತ್ತು ನಿರ್ದೇಶಕ ಮಾತ್ರ. ಅವರಿಗೆ ಇತರ ಯಾವುದೇ ಸಂಬಂಧ ಇಲ್ಲ. ಅವರು ಬಾಕಿ ಇಟ್ಟಿರುವುದಕ್ಕೆ ನಮ್ಮನ್ನು ಯಾಕೆ ಬಾಧ್ಯಸ್ಥರನ್ನಾಗಿ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಬಸಂತ್ ಕ್ಷಮೆ ಕೇಳಬೇಕಂತೆ... ನನ್ನ ವಿರುದ್ಧ ಆಪಾದನೆಗಳನ್ನು ಮಾಡುವ ಮೂಲಕ ನನಗೆ ಅಪಮಾನ ಮಾಡಿರುವ ಕೆಎಫ್‌ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಕ್ಷಮೆ ಯಾಚಿಸಬೇಕು ಎಂದು ಸುದೀಪ್ ಆಗ್ರಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ವಿಶ್ವ ಕನ್ನಡ ಸಮ್ಮೇಳನದ ಕುರಿತು ಚರ್ಚೆ ನಡೆಸಲು ಕರೆದಿದ್ದ ಸಭೆಯ ನಂತರ ಸುದೀಪ್ ವಿಚಾರ ಪ್ರಸ್ತಾಪವಾಗಿತ್ತು. ವಿತರಕರೊಬ್ಬರಿಗೆ ಬಾಕಿ ಇಟ್ಟಿರುವ ಹಣವನ್ನು ಸುದೀಪ್ ಪಾವತಿ ಮಾಡಬೇಕು ಎಂದು ಹಲವು ನಿರ್ಮಾಪಕರ ಎದುರೇ ಬಸಂತ್ ಹೇಳಿದ್ದರು.
ಇದು ಸುದೀಪ್‌ಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಬಸಂತ್ ಕ್ಷಮೆ ಕೇಳಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಕರಣ ಸುಖಾಂತ್ಯ... ಇತ್ತೀಚಿನ ಮಾಹಿತಿಗಳ ಪ್ರಕಾರ 'ಕೆಂಪೇಗೌಡ' ಚಿತ್ರದ ಬಿಡುಗಡೆ ಸಂಬಂಧ ಉದ್ಭವಿಸಿದ್ದ ವಿವಾದ ಸುಖಾಂತ್ಯಗೊಂಡಿದೆ. ಬಸಂತ್ ಕುಮಾರ್ ಪಾಟೀಲ್, ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ್ದಾರೆ.
ಕೆಂಪೇಗೌಡ ಚಿತ್ರದ ಬಿಡುಗಡೆಗೆ ಯಾವುದೇ ಅಡ್ಡಿಯಿಲ್ಲ. ಸಮಸ್ಯೆಗಳು ಪರಿಹಾರ ಕಂಡಿವೆ ಎಂದು ಬುಧವಾರ ಸಂಜೆ ನಡೆದ ಸಭೆಯ ನಂತರ ಸುದೀಪ್ ಹೇಳಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.