ಇತ್ತೀಚೆಗೆ ಭಾರತೀಯ ದಂಡ ಸಂಹಿತೆ 420ಪ್ರಕರಣದಡಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಬೇಕಾಗಿದ್ದ 'ಗನ್' ಚಿತ್ರದ ನಟ, ನಿರ್ದೇಶಕ ಹರೀಶ್ ರಾಜ್ ಬಂಧನಕ್ಕೊಳಗಾಗಿದ್ದಾರೆ. 'ಗನ್' ಚಿತ್ರದ ಹಕ್ಕನ್ನು ನಿರ್ಮಾಪಕರಿಗೆ ಗೊತ್ತಿಲ್ಲದೆ ಉದಯ ಚಾನಲ್‌ಗೆ ಮಾರಿ ನಯಾ ಪೈಸೆಯನ್ನೂ ಕೊಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕ ಮುರಳಿ ದೂರು ದಾಖಲಿಸಿದ್ದರು. ಕಳೆದ ಎರಡು ವಾರಗಳಿಂದ ತಲೆಮರೆಸಿಕೊಂಡಿದ್ದ ಹರೀಶ್ ರಾಜ್‌ನನ್ನು, ವಸಂತ ನಗರದ ಮನೆಯಲ್ಲಿ ಗುರುವಾರ ಅಪರಾಹ್ನ ಬಂಧಿಸಿರುವ ಪೊಲೀಸರು, ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.
ಗನ್ ಚಿತ್ರ ನಿರ್ಮಾಣ ಸಂದರ್ಭದಲ್ಲಿ ಹರೀಶ್ ರಾಜ್‌ಗೆ ಹಣಕಾಸಿನ ಅಗತ್ಯವಿದ್ದುದರಿಂದ ಒಪ್ಪಂದದ ಮೇರೆಗೆ ನಿರ್ಮಾಪಕ ಮುರುಳಿ ಅವರು 30ಲಕ್ಷ ರೂ. ಸಾಲ ನೀಡಿದ್ದರು. ಈ ಕುರಿತು ಮಾಡಿಕೊಂಡ ಒಪ್ಪಂದದ ದಾಖಲೆಯನ್ನೂ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾಗಿದೆ.
ಚಿತ್ರ ಬಿಡುಗಡೆಯಾದ ನಂತರ ಅಷ್ಟೇನೂ ಹಣ ಗಳಿಸಲಿಲ್ಲ. ಇದರಿಂದ ಸಾಕಷ್ಟು ನಷ್ಟಕ್ಕೊಳಗಾಗಿದ್ದ ಸಹ ನಿರ್ಮಾಪಕ ಮುರುಳಿ ಅವರ ಗಮನಕ್ಕೂ ತರದೇ ಚಿತ್ರದ ಹಕ್ಕನ್ನು ಖಾಸಗಿ ವಾಹಿನಿಯೊಂದಕ್ಕೆ ಮಾರಾಟ ಮಾಡಿದ ಹರೀಶ್ ರಾಜ್ ನಿರ್ಮಾಪಕರಿಗೆ ವಂಚಿಸಿದ್ದರು.
ಸಾಕಷ್ಟು ಬಾರಿ ಹಣದ ಬಗ್ಗೆ ಪ್ರಸ್ತಾಪಿಸಿದರೂ ನಟ ಹರೀಶ್ ರಾಜ್‌ರಿಂದ ಹಣ ಒದಗಿಸಲು ಸಾಧ್ಯವಾಗಿಲ್ಲ. ಹಾಗೂ ಈ ಕುರಿತು ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲೂ ಮುರಳಿ ದೂರು ಕೊಟ್ಟಿದ್ದರು. ಅಲ್ಲಿಯೂ ಈಗ ನನ್ನ ಬಳಿ ಹಣ ಇಲ್ಲ ನಂತರ ಕೊಡುತ್ತೇನೆ ಎಂದಿದ್ದ ಹರೀಶ್ ರಾಜ್, ಕೆಲ ದಿನಗಳ ನಂತರ ಯಾವುದೇ ಮಾಹಿತಿ ನೀಡದೆ ಚಿತ್ರದ ಹಕ್ಕನ್ನು ಮಾರಿ, ಅದರಿಂದ ಬಂದ ಹಣದಲ್ಲಿ ತನ್ನ ಹಳೆಯ ಸಾಲ ತೀರಿಸಿದ್ದರು.
ಈ ವಿಚಾರ ತಿಳಿದು ಸಿಟ್ಟಿಗೆದ್ದ ಮುರಳಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದರು. ಬಂಧನದ ವಿಷಯ ತಿಳಿದ ಹರೀಶ್‌ರಾಜ್ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಗುರುವಾರ ಮುಂಜಾನೆ ಹರೀಶ್ ರಾಜ್ ಬೆಂಗಳೂರಿನ ವಸಂತನಗರದ ಮನೆಗೆ ಬಂದಿರುವುದಾಗಿ, ಹಾಗೂ ಆ ಮನೆಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ವಿಚಾರ ತಿಳಿದ ನಿರ್ಮಾಪಕ ಮುರಳಿ, ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಸಂತನಗರದಲ್ಲಿರುವ ಆತನ ಮನೆಯ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.
ಓಡಲು ಯತ್ನಿಸಿದ್ದ ಹರೀಶ್ ರಾಜ್.... ಏಕಾಏಕಿ ಮನೆ ಮೇಲೆ ದಾಳಿನಡೆಸಿದಾಗ ದಿಕ್ಕುತೋಚದಂತಾದ ಹರೀಶ್ ರಾಜ್ ಕಾಂಪೌಂಡ್ ಏರಿ ತಪ್ಪಿಸಲು ಯತ್ನಿಸಿದ್ದ, ಈ ವೇಳೆ ಆತನನ್ನು ಹಿಡಿಯಲು ಯತ್ನಿಸುವಾಗ ನನ್ನ ಕೈಗೂ ಸಣ್ಣಪುಟ್ಟ ಗಾಯವಾಗಿದೆ ಎಂದಿರುವ ನಿರ್ಮಾಪಕ ಮುರಳಿ, ನಾನು ಆತನಿಗೆ ಸಹಾಯ ಮಾಡಿದ್ದೇನೆ, ಒಳ್ಳೆಯದೇ ಮಾಡಿದ್ದೇನೆ. ನಾನೆಂದೂ ಆತನಿಗೆ ಕೆಟ್ಟದ್ದು ಬಯಸಿದವನಲ್ಲ. ಆದರೂ ಆತ ನನಗೇಕೆ ವಂಚಿಸುತ್ತಿದ್ದಾನೆ ಎಂದು ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮುರಳಿ ನನ್ನ ಮೇಲೆ ಹಲ್ಲೆನಡೆಸಿದ್ದಾರೆ.... ಪೊಲೀಸರಿಂದ ಬಂಧನಕ್ಕೊಳಗಾಗಿ ವಾಹನ ಏರಲು ಹೋಗುವ ವೇಳೆ ಪ್ರತಿಕ್ರಿಯಿಸಿದ ಹರೀಶ್ ರಾಜ್, ಮುರಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ಕಲ್ಲೆತ್ತಿಹಾಕಲು ಬಂದಿದ್ದರು, ಎಲ್ಲಾ ವಿಷಯ ಬಂದ ಮೇಲೆ ಹೇಳುತ್ತೇನೆ ಎಂದು ವರದಿಗಾರರಿಗೆ ತಿಳಿಸಿ ಪೊಲೀಸ್ ವಾಹನವನ್ನೇರಿದರು. ಗುರುವಾರ ಸಂಜೆ ಹರೀಶ್ ರಾಜ್‌ನನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಷಯ ಹೊರಬೀಳಲಿದೆ.
ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರ ಬಿಡುಗಡೆ ಮಾಡಲು ತಾವು ಅಭಿನಯಿಸಿದ ಚಿತ್ರವನ್ನು ಸಂತೋಷ್ ಚಿತ್ರ ಮಂದಿರದಿಂದ ಎತ್ತಂಗಡಿ ಮಾಡಲಾಗುತ್ತದೆ ಎಂದು ಆಪಾದಿಸಿ ಚಿತ್ರ ಮಂದಿರದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ ಹರೀಶ್ ರಾಜ್ ವಿವಾದ ಸೃಷ್ಟಿಸಿದ್ದರು. ಆ ಸಂದರ್ಭದಲ್ಲಿ ಸಹ ನಿರ್ಮಾಪಕ ಮುರುಳಿ ಹರೀಶ್ ರಾಜ್ ಬೆಂಬಲಕ್ಕೆ ನಿಂತಿದ್ದರು.
ಬಂಧಮುಕ್ತ.... ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇರೆಗೆ ಬಿಡುಗಡೆಯಾದ ಹರೀಶ್ ರಾಜ್, ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.