ಬಾಲಿವುಡ್ ಬೆಡಗಿಯರು ಹಾಗೂ ಕ್ರಿಕೆಟಿಗರ ನಡುವೆ ಹುಟ್ಟುವ ಗಾಸಿಪ್ಪು ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸದ ಸಾಕ್ಷಿಯೇ ಇದೆ. ಈಗ ಈ ಸಾಲಿನಲ್ಲಿ ಸೇರಿಕೊಳ್ಳಲು ಶಿಲ್ಪಾ ತಂಗಿ ಶಮಿತಾಳೂ ಹೊರಟಂತಿದೆ ಎಂದು ಗುಸು ಗುಸು ಶುರವಾಗಿದೆ. ಅದು ನೇರವಾಗಿ ದಕ್ಷಿಣ ಆಫ್ರಿಕಾದಿಂದ ಬಾಲಿವುಡ್ಡಿಗೂ ಪಸರಿಸಿದೆ. ಬಾಲಿವುಡ್ಡಿನಲ್ಲಿ ಅಂತಹ ಅವಕಾಶವೇನೂ ಇಲ್ಲದ ಶಮಿತಾ ಅಕ್ಕನಂತೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಮಾಡಲಿಲ್ಲವಾದರೂ, ಈಗ ಯಾಕೋ ಆಕೆಯ ನಸೀಬೂ ಖುಲಾಯಿಸುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಕಾರಣ ಶಮಿತಾ ಹಾಗೂ ಆಸ್ಟ್ರೇಲಿಯಾ ಮೂಲದ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನೆಯ ನಡುವಿನ ಹೊಸ 'ಸ್ನೇಹ'.!
ಅಕ್ಕ ಲಂಡನ್‌ಗೆ ಹಾರುವ ಸನ್ನಾಹದಲ್ಲಿರುವಾಗ ತಂಗಿ ಕೂಡಾ ಆಸ್ಟ್ರೇಲಿಯಾಕ್ಕೆ ಹಾರುವ ತವಕದಲ್ಲಿದ್ದಾಳಾ ಅಂತ ಕೇಳಿದರೆ ಇದುತೀರಾ ಅವಸರದ ಪ್ರಶ್ನೆಯಾದೀತು. ವಿಷಯ ಏನಪ್ಪಾ ಅಂದರೆ, ಶಮಿತಾ ಶೆಟ್ಟಿ ಅಕ್ಕ ಹಾಗೂ ಭಾವೀ ಭಾವ ರಾಜ್ ಕುಂದ್ರಾ ಒಡೆತನದ ರಾಜಸ್ತಾನ್ ರಾಯಲ್ಸ್ ತಂಡದ ಐಪಿಎಲ್ 20-20 ಪ್ರದರ್ಶನ ವೀಕ್ಷಿಸಲು ಅಕ್ಕ ಶಿಲ್ಪಾಳೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾಳೆ. ಆ ಮೊದಲು ಎಲ್ಲೋ ಒಮ್ಮೆಯಷ್ಟೆ ಭೇಟಿಯಾಗಿದ್ದ ಶಮಿತಾಳನ್ನು ಈಗ ಫುಲ್ ಟೈಂ ತನ್ನ ತಂಡದ ಜತೆ ಕಂಡು ಶೇನ್ ವಾರ್ನೆಗೆ ಶಮಿತಾಳ ಮೇಲೆ ಕಣ್ಣು ಬಿದ್ದಿದೆ. ಹೇಳಿ ಕೇಳಿ ಶೇನ್ ವಾರ್ನೆ ಸ್ತ್ರೀಲೋಲುಪತೆಗೆ ಇತಿಹಾಸವೇ ಇದೆ. ಈಗ ಆ ಇತಿಹಾಸಕ್ಕೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಸಿಕೊಳ್ಳುವ ತವಕದಲ್ಲಿ ಉಲ್ಲಾಸಿತನಾಗಿದ್ದಾನೆ ಶೇನ್.
ಇಷ್ಟೇ ಅಲ್ಲ. ಶೇನ್ ಹಾಗೂ ಶಮಿತಾ ನಡುವೆ 'ಗೆಳೆತನ'ದ ಬೆಸುಗೆ ಏರ್ಪಟ್ಟಿದೆ ಎಂದು ಮೈದಾನದಲ್ಲೂ ಹೊರಗೂ ಗುಸುಗುಸು ಕೇಳಿಬರುತ್ತಿದೆ. ಆದರೂ ಮೂಲಗಳ ಪ್ರಕಾರ, ತನ್ನತ್ತ ವಾಲುತ್ತಿರುವ ಶೇನ್ ವಾರೆನೋಟ ಶಮಿತಾಗೇನೂ ಅರ್ಥವಾಗದೆ ಇಲ್ಲ. ಆದರೆ ಆಕೆ ಮಾತ್ರ ಆತನೊಡನೆ ಚೆನ್ನಾಗಿ ಮಾತನಾಡುವ ಜತೆಜತೆಗೇ ಆತನಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾಳೆ ಅಂತಲೇ ಹೇಳಲಾಗುತ್ತಿದೆ.
IFM
ಇದಕ್ಕೆ ಕಾರಣವೂ ಇದೆ. ಶಮಿತಾಗೆ ಶೇನ್ ವಾರ್ನೆಯ ಹಳೆಯ ಪುರಾಣಗಳ ಕಂತೆ ತಿಳಿಯದೇನೂ ಇಲ್ಲ. ಹಾಗಾಗಿ ಆಯ್ಕೆ ದಕ್ಷಿಣ ಆಫ್ರಿಕಾದಲ್ಲಿ ಅಕ್ಕ ಹಾಗೂ ಭಾವೀ ಭಾವ ರಾಜ್ ಕುಂದ್ರಾ ಇರುವ ಹೋಟೆಲ್‌ನಲ್ಲೇ ಅವರಿಬ್ಬರ ಜತೆಗೆ ತಂಗಿದ್ದಾಳಂತೆ. ಆಟಗಾರರನ್ನು ಈ ಮೂರು ಮಂದಿ ಉಳಿದುಕೊಂಡ ಹೋಟೆಲ್‌ಗಿಂತಲೂ ದೂರ ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ.
ಆದರೂ ಕೆಲವು ಮೂಲಗಳ ಪ್ರಕಾರ, ಶಮಿತಾ ಹಾಗೂ ಶೇನ್ ವಾರ್ನೆ ಜತೆಯಾಗಿ ನೈಟ್ ಕ್ಲಬ್ಬಿನಲ್ಲಿ ಕಂಡಿದ್ದರು. ಆದರೆ ಮಾಧ್ಯಮದ ಮಂದಿ ಈ ಇಬ್ಬರು ಹೊಸ ಜೋಡಿಗಳ ಫೋಟೋ ತೆಗೆಯಲು ಪ್ರಯತ್ನಿಸಿದಾಗ ಶಮಿತಾ ಮೆಲ್ಲಗೆ ಕ್ಲಬ್ಬಿನ ಹಿಂದಿನ ಬಾಗಿಲಿಂದ ಮಾಯವಾಗಿದ್ದಾಳೆ. ಈ ಬಗ್ಗೆ ಶಮಿತಾಳನ್ನೇ ಕೇಳಿದರೆ, ''ಅದು ಕೇವಲ ತಂಡದ ಗೆಲುವಿನ ಸಲುವಾಗಿ ನಡೆಸಿದ ಪಾರ್ಟಿ. ಅಲ್ಲಿ ಕೇವಲ ನಾನು ವಾರ್ನೆ ಮಾತ್ರ ಇದ್ದಿದ್ದರೆ ನೀವು ಥಳಕು ಹಾಕವ ಲಿಂಕ್‌ಗೆ ಸ್ವಲ್ಪವಾದರೂ ಉತ್ತರ ಸಿಗುತ್ತಿತ್ತು. ಆದರೆ, ಅಲ್ಲಿ ತಂಡದ ಎಲ್ಲರೂ ಇದ್ದರು. ನಾನೂ ಕೂಡ ಎಲ್ಲರೊಂದಿಗೇ ಇದ್ದೆ. ಪ್ರತ್ಯೇಕವಾಗ ವಾರ್ನೆ ಜತೆಗೇನೂ ಬಂದಿರಲಿಲ್ಲ'' ಎಂದು ತಣ್ಣಗೆ ಉತ್ತರಿಸಿದ್ದಾಳೆ.
ಅಂದಹಾಗೆ ಶೇನ್ ವಾರ್ನೆಯ ಖಾಸಗಿ ಬದುಕು ಹಾಗೆ ಹೇಳಿಕೊಳ್ಳುವ ಸಭ್ಯತನದಿಂದೇನೂ ಇಲ್ಲ. ಆಸ್ಟ್ರೇಲಿಯಾದ 'ಬ್ಯಾಡ್ ಬಾಯ್' ಎಂಬ ಕಿರೀಟ ಹೊತ್ತುಕೊಂಡಿರುವ ವಾರ್ನೆ ಮೈದಾನದಲ್ಲಿ ಆಡಿರುವಂತೆಯೇ ವೈಯಕ್ತಿಕವಾಗಿಯೂ ಸಾಕಷ್ಟು ಆಡಿಯೇ ಬೆಳೆದಾತ. ಬ್ರಿಟನ್ ಪ್ರವಾಸದ ವೇಳೆಯಲ್ಲಿ 2000ನೇ ಇಸವಿಯಲ್ಲಿ ಬ್ರಿಟಿಶ್ ನರ್ಸ್ ಒಬ್ಬಳಿಗೆ ಅಶ್ಲೀಲ ಎಸ್‌ಎಂಎಸ್ ಕಳುಹಿಸುವ ಮೂಲಕ ಬ್ರಿಟೀಶ್ ಟ್ಯಾಬ್ಲಾಯ್ಡ್‌ಗಳಲ್ಲಿ ಸುದ್ದಿಯಾಗಿದ್ದ ವಾರ್ನೆ, ನಿಕೋಟಿನ್ ಹಗರಣದಲ್ಲೂ ಭಾಗಿಯಾದ ಬಗ್ಗೆ ವರದಿಗಳು ಹುಟ್ಟಿಕೊಂಡಿದ್ದವು. ಇದಲ್ಲದೆ 2005ರಲ್ಲಿ ವಾರ್ನೆಯ ವಿವಾಹೇತರ ಅಕ್ರಮ ಸಂಬಂಧಗಳೂ ಬೆಳಕಿಗೆ ಬಂದಿದ್ದವು. ಹಾಗಾಗಿ ವಾರ್ನೆಯ ಪತ್ನಿ ಆತನಿಂದ ದೂರಾಗಿದ್ದಳು.
ಇಷ್ಟೇ ಅಲ್ಲ. ವಾರ್ನೆ ಕೇವಲ ಒಳಚಡ್ಡಿಯಲ್ಲಿ 25ರ ಹರೆಯದ ಮಾಡೆಲ್ ಜತೆಗಿದ್ದ ಚಿತ್ರಗಳು ಬಿಡುಗಡೆಯಾಗಿ ಸುದ್ದಿ ಮಾಡಿದ್ದವು. ಜತೆಗೆ ವಾರ್ನೆ ಕಳುಹಿಸಿದ ಎಸ್‌ಎಂಎಸ್ ಎಂದು ಹೇಳಲಾದ ಕೆಲವು ಅಶ್ಲೀಲ ಮೆಸೇಜ್‌ಗಳೂ ವಾರ್ನೆಯ ಖಾಸಗಿ ಬದುಕಿನ ಸ್ಯಾಂಪಲನ್ನು ಸಾರ್ವಜನಿಕವಾಗಿಸಿದ್ದವು. ಇಷ್ಟೆಲ್ಲ ಕಥೆ ನಡೆದರೂ 2007ರಿಂದ ವಾರ್ನೆ ಹಾಗೂ ಆತನ ಪತ್ನಿ ಸಿಮೋನ್ ಮತ್ತೆ ಜತೆಯಾಗಿದ್ದಾರೆ ಎಂದೂ ಹೇಳಲಾಗಿದೆ.