ನಟ ನಿರ್ದೇಶಕ ದ್ವಾರಕೀಶ್ ಆಪ್ತರಕ್ಷಕ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಚಿತ್ರದಲ್ಲಿ ನಟಿಸುವಂತೆ ನಿರ್ಮಾಪಕರು ಆಹ್ವಾನಿಸಿದ್ದರಂತೆ. ಆದರೆ ಸೌಂದರ್ಯ ಇಲ್ಲದ ಚಿತ್ರದಲ್ಲಿ ನಟಿಸುವುದಾದರೂ ಹೇಗೆ ಸುಪರ್‌ಹಿಟ್ ಚಿತ್ರದ ಮುಂದುವರಿದ ಭಾಗ ಗೆಲ್ಲಲು ತುಂಬಾ ಅದೃಷ್ಟವಿರಬೇಕು ಎನ್ನುತ್ತಾರೆ ಅವರು.
ಹಾಗಾದರೆ ದ್ವಾರಕೀಶ್ ಏನು ಮಾಡುತ್ತಿದ್ದಾರೆ. ಸಧ್ಯಕ್ಕೆ ಅವರು ಕರ್ನಾಟಕ ಗತ ವೈಭವವನ್ನು ಮೆಲುಕು ಹಾಕುತ್ತಿದ್ದಾರೆ. ಹೌದು ಕರ್ನಾಟಕ ವೈಭವ ಎಂಬ ಬಹುದೊಡ್ಡ ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಸುದೀರ್ಘ ಅವಧಿಯ ಹೋಂವರ್ಕ್, ಸಂಶೋಧನೆ ಎಲ್ಲಕ್ಕಿಂತ ಮುಖ್ಯವಾಗಿ ಅದ್ದೂರಿ ಬಜೆಟ್ ಇದಕ್ಕೆ ಬೇಕು ಎನ್ನುತ್ತಾರೆ ಅವರು.
ಹಿಂದೊಮ್ಮೆ ಮದ್ರಾಸ್‌ನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ದ್ವಾರಕೀಶ್ ಈ ಸಿನಿಮಾ ಬಗ್ಗೆ ಚರ್ಚಿಸಿದ್ದರಂತೆ. ದ್ವಾರಕೀಶ್ ಬ್ಯಾನರ್‌ಗಾಗಿ ತಾವೇ ನಿರ್ದೇಶಿಸುವುದಾಗಿ ಹೇಳಿದ್ದರಂತೆ. ಆದರೆ ಯೋಜನೆ ಕೈಗೂಡಿಲ್ಲ. ಇದೀಗ ಚಿತ್ರ ಮಾಡಲು ಮುಂದಾಗಿದ್ದಾರೆ. ಚಿತ್ರ ನಿರ್ಮಿಸಲು ಗಾಂಧಿನಗರದ ನಿರ್ಮಾಪಕರು ಮುಂದಾದರೆ ತಮ್ಮ ಸೌಭಾಗ್ಯ ಎಂದು ಗಾಂಧಿನಗರದ ನಿರ್ಮಾಪಕರಿಗಾಗಿ ದ್ವಾರಕೀಶ್ ಕತೆ ಹಿಡಿದು ಕೂತಿದ್ದಾರೆ. ಯಾರು ಬರುತ್ತಾರೋ ಕಾದು ನೋಡಬೇಕು.