ಇಷ್ಟು ಸುಂದರ ಪಕ್ಕದ್ಮನೆ ಹುಡುಗಿಯಂತಿರುವ ಬೆಡಗಿ ಯಾರಪ್ಪಾ ಅಂತ ತಲೆಕೆರೆದುಕೊಳ್ಳುವ ಅಗತ್ಯವೇ ಇಲ್ಲ. ಈಕೆ ಒಂದಾನೊಂದು ಕಾಲದಲ್ಲಿ ಎಲ್ಲರ ಮನೆಯಲ್ಲೂ ಮನೆಮಗಳಂತೆ ಇದ್ದವಳು. ಓಡಿ ಆಡಿ ನಲಿದವಳು. ಅಷ್ಟು ಪುಟಾಣಿಯಾಗಿದ್ದ ಈಕೆ ಎಲ್ಲರೊಂದಿಗೆ ಭುಜ ತಾಗಿಸಿ ನಿಲ್ಲುವಷ್ಟು ಎತ್ತರ ಬೆಳೆದಿದ್ದಾಳೆ. ತೆಳ್ಳಗೆ ಬೆಳ್ಳಗೆ ಆಕರ್ಷಕವಾಗಿಯೂ ಕಾಣುತ್ತಿದ್ದಾಳೆ.
ಯಾರಿವಳು? ಅಂತ ಈಗಲಾದರೂ ಅರ್ಥವಾಗಿರಬಹುದು. ಹೌದು. ಈಕೆ ಅದೇ ಬೇಬಿ ಶ್ಯಾಮಿಲಿ. 90ರ ದಶಕದಲ್ಲಿ ಮತ್ತೆ ಹಾಡಿತು ಕೋಗಿಲೆ, ಭೈರವಿ, ಶಾಂಭವಿ, ಶ್ವೇತಾಗ್ನಿ, ಕರಳಿನ ಕುಡಿ, ಹೂವು ಹಣ್ಣು... ಹೀಗೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿ ಮನೆಮಾತಾದ ಪುಟ್ಟ ಹುಡುಗಿ. ಆದರೆ ಈಗ ಈಕೆ ಬೇಬಿಯಲ್ಲ. ಕೇವಲ ತನ್ನ ನಾಲ್ಕನೇ ವಯಸ್ಸಿನಲ್ಲೇ ಮಣಿರತ್ನಂ ಅವರ ಅಂಜಲಿ ಚಿತ್ರದಲ್ಲಿ ಪ್ರೇಕ್ಷಕರಲ್ಲಿ ಕಣ್ಣೀರಧಾರೆಯೇ ಹರಿಯುವಷ್ಟು ಮನೋಜ್ಞವಾಗಿ ನಟಿಸಿ ಮನೆಮಾತಾದ ಬೇಬಿ ಶ್ಯಾಮಿಲಿ ಮತ್ತೆ ಕನ್ನಡ, ತಮಿಳು ತೆಲುಗು, ಮಲಯಾಳಂಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಮನೆಮಗಳೇ ಆದಳು. ಈಗ ಮತ್ತೆ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗದಲ್ಲಿ ನೆಲೆಯೂರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ಇತ್ತೀಚೆಗಷ್ಟೇ ಬಿಡುಗಡೆ ಕಂಡ ತೆಲುಗು ಚಿತ್ರ ಓಯ್ ಬಗ್ಗೆ ಪ್ರೇಕ್ಷಕರವರ್ಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ಯಾಮಿಲಿ ಅಭಿನಯದ ಬಗ್ಗೆಯೂ. ಅಷ್ಟೇ ಅಲ್ಲ. ಚಿತ್ರದ ಹಾಡುಗಳೂ ಈಗ ಎಲ್ಲೆಡೆ ತನ್ನ ಝೇಂಕಾರ ಮೊಳಗಿಸುತ್ತಿದೆ. ಹೀಗಾಗಿ ಸದ್ಯ ಶ್ಯಾಮಿಲಿ ದಿಲ್ ಖುಷ್.
WD
ಇಂತಿಪ್ಪ ಶ್ಯಾಮಿಲಿ ತನ್ನ ಚಿತ್ರದ ಬಗ್ಗೆ ಹೇಳೋದು ಹೀಗೆ. ಓಯ್ ಚಿತ್ರ ನನ್ನ ಜೀವಮಾನದ ಮತ್ತೊಂದು ಉತ್ತಮ ಅನುಭವ. ಚಿತ್ರದಲ್ಲಿ ನನಗೆ ಸಂಪ್ರದಾಯಸ್ಥ ಹುಡುಗಿಯ ಪಾತ್ರ. ಚಿತ್ರದ ನಾಯಕ ನಟ ಸಿದ್ಧಾರ್ಥ್ ಪ್ರತಿ ಕ್ಷಣವೂ ಚಿತ್ರದ ದೃಶ್ಯ ಹೇಗಿರುತ್ತದೆಯೆಂದು ಶೂಟಿಂಗ್ ಸಮಯದಲ್ಲಿ ವಿವರಿಸುತ್ತಿದ್ದರು. ಸಿದ್ಧಾರ್ಥ್ ಜತೆಗೆ ನಟಿಸುವುದೇ ಒಂದು ಉತ್ತಮ ಅನುಭವ. ಆತ ನಟನಾಗುವುದಕ್ಕಿಂತಲೂ ನಿರ್ದೇಶಕನಾದರೆ ಉತ್ತಮ. ಆತನಲ್ಲಿ ಅಗಾಧ ಪ್ರತಿಭೆಯಿದೆ ಎಂದು ವಿವರಿಸುತ್ತಾಳೆ ಈ ಶ್ಯಾಮಿಲಿ.
ನಾಲ್ಕರ ಹರೆಯದಿಂದಲೇ ಕ್ಯಾಮರಾ ಎದುರಿಸಿದ ಅನುಭವ ಹೊಂದಿದ ನಿಮಗೆ ಕ್ಯಾಮರಾ ಎದುರಿಸೋದು ದೊಡ್ಡ ವಿಷಯವೇ ಆಗಿರಲಿಕ್ಕಿಲ್ಲ ಎಂದರೆ, ಶ್ಯಾಮಿಲಿ ಇಲ್ಲಪ್ಪ ಎನ್ನುತ್ತಾ ಹುಬ್ಬೇರಿಸುತ್ತಾಳೆ. ಈಗ ಆಕೆ ನೀಡುವ ವಿವರಣೆಯೇ ಬೇರೆ. ಬಾಲನಟಿಯಾಗಿ ಹಲವು ವರ್ಷಗಳಿಂದ ಚಿತ್ರರಂಗವನ್ನು ನೋಡಿದ್ದೇನೆ ನಿಜ. ಆದರೆ, ಕ್ಯಾಮರಾ ಎದುರಿಸದೆ ಹೆಚ್ಚುಕಡಿಮೆ ದಶಕವೇ ಕಳೆದಿದೆ. ಇದರಿಂದ ನನಗೆ ಕ್ಯಾಮರಾ ಎದುರಿಸುವುದು ಹೊಸ ಅನುಭವದಂತೆ ಭಾಸವಾಯಿತು ಎನ್ನುತ್ತಾಳೆ.
WD
ಅಷ್ಟೇ ಅಲ್ಲ. ಬಾಲನಟಿಯಾಗಿರುವಾಗ ನಾನು ಯಾವತ್ತೂ ನನ್ನ ಸೌಂದರ್ಯದ ಬಗ್ಗೆ ಯೋಚಿಸಿರಲಿಲ್ಲ. ನನ್ನನ್ನು ರೆಡಿ ಮಾಡಿ ಕ್ಯಾಮರಾ ಎದುರು ನಿಲ್ಲಿಸಿದರೆ ನಟನೆಯಷ್ಟೇ ನನಗೆ ಗೊತ್ತು. ಆದರೆ, ಈಗ ಹಾಗಲ್ಲ. ನಾನು ನಾಯಕ ನಟಿ. ಹೀಗಾಗಿ ಪ್ರತಿಕ್ಷಣವೂ ಚಿತ್ರದಲ್ಲಿ ನನ್ನ ಲುಕ್ ಬಗ್ಗೆ ಯೋಚಿಸುತ್ತೇನೆ. ನಟನೆಯ ಜತೆಗೆ ಲುಕ್ ಬಗ್ಗೆ ಗಮನ ಹರಿಸಬೇಕಾದ ಅಗತ್ಯವೂ ಈಗಿದೆ ಎಂದು ಪ್ರೌಢವಾಗಿ ಮಾತನಾಡುತ್ತಾಳೆ ಈ ಶ್ಯಾಮಿಲಿ. ಆದರೂ ಈಗಿನ ಪ್ರೌಢತೆಯೊಂದಿಗೆ ಅಂದಿನ ಮುದ್ದು ಮುಖದ ಬೇಬಿ ಶ್ಯಾಮಿಲಿಯ ಮುಖದ ನೆರಳೂ ಹಾದುಹೋಗುತ್ತದೆ.
ಅದೆಲ್ಲಾ ಹಾಗಿರಲಿ. ತಮಿಳಿನಿಂದಲೇ ಬಾಲನಟಿಯಾಗಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಶ್ಯಾಮಿಲಿಗೆ ತಮಿಳು ಚಿತ್ರರಂಗದಲ್ಲಿ ಭಾರೀ ಅಭಿಮಾನಿ ಬಳಗ ಹೊಂದಿದ್ದರೂ, ತೆಲುಗಿಗೆ ವಲಸೆ ಹೋಗೋ ಅನಿವಾರ್ಯತೆ ಏಕಿತ್ತು ಎಂದರೆ ಶ್ಯಾಮಿಲಿ, ತೆಲುಗಿನಿಂದಲೇ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಉಮೇದು ಇರಲಿಲ್ಲ. ಕಾಲೇಜು ದಿನಗಳಲ್ಲೇ ನನಗೆ ಚಿತ್ರರಂಗದಿಂದ ಹಲವು ಅವಕಾಶಗಳು ಬಂದಿದ್ದವು. ಆದರೆ ಆಗ ನಾನು ಕೇವಲ ನನ್ನ ಓದಿಗೆ ಗಮನ ಕೊಟ್ಟೆ. ಅದೇ ಸಂದರ್ಭ ಓಯ್‌ನಲ್ಲಿ ಅವಕಾಶ ಬಂತು. ಚಿತ್ರದ ಕಥೆ ಚೆನ್ನಾಗಿದೆ ಅನಿಸಿತು. ಹಾಗಾಗಿ ಒಪ್ಪಿಕೊಂಡೆ ಅಷ್ಟೆ ಎನ್ನುತ್ತಾಳೆ.
ಒಂದು ಕಾಲದಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಈ ಶಾಮಿಲಿ ಬೇಬಿಗೆ ಮನೆಯಲ್ಲೇ ಚಿತ್ರರಂಗದ ವಾತಾವರಣವಿದ್ದರೂ, ತಾನು ಸ್ಪರ್ಧೆಯಿಂದ ಮಾತ್ರ ದೂರ ಎನ್ನುತ್ತಾಳೆ. ಉತ್ತಮ ಅವಕಾಶ ಬಂದರೆ ನಟಿಸುತ್ತೇನೆ. ನಂಬರ್ ಗೇಮ್ ನನಗೆ ಬೇಡ. ನನಗೆ ನನ್ನದೇ ಆದ ವ್ಯಕ್ತಿತ್ವವಿದೆ. ಅದನ್ನು ಬಿಟ್ಟು ಕ್ಷುಲ್ಲಕವಾಗಲು ನನಗೆ ಇಷ್ಟವಿಲ್ಲ ಎಂದು ಖಡಕ್ ಆಗಿಯೂ ಮಾತಾಡುತ್ತಾಳೆ.
WD
ಪುಟ್ಟಹುಡುಗಿಯಾಗಿದ್ದಾಗ ಮನೆಮಗಳಂತೆ ಕಂಡ ಈ ಶ್ಯಾಮಿಲಿ ಎಂಬ ಪೋರಿ ಈಗ ಬೆಳೆದು ದೊಡ್ಡವಳಾದರೂ, ಪಕ್ಕದ ಮನೆಯ ಹುಡುಗಿಯಂತಹ ಇಮೇಜನ್ನು ಮೊದಲ ಚಿತ್ರ ಓಯ್‌ನಲ್ಲೂ ಹಾಗೆಯೇ ಉಳಿಸಿಕೊಂಡಿದ್ದಾಳೆ. ಓಯ್ ಚಿತ್ರದಲ್ಲಿ ಎಲ್ಲೂ ಕಡಿಮೆ ಬಟ್ಟೆಯಲ್ಲಿ ಸೊಂಟ ಕುಲುಕಿಸಿಲ್ಲ. ಅಪ್ಪಟ್ಟ ಸಂಪ್ರದಾಯಸ್ಥ ಹುಡುಗಿಯಂತೆ ಕಂಗೊಳಿಸಿದ್ದಾಳೆ. ಹಾಗಾದರೆ, ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳೋದಿಲ್ವಾ ಎಂದರೆ, ಶ್ಯಾಮಿಲಿ, ಹಾಗೇನೂ ಇಲ್ಲ. ಗ್ಲ್ಯಾಮರಸ್ ಆಗಿ ಕಾಣೋದು ಕೂಡಾ ನನಗಿಷ್ಟವಿಲ್ಲ ಎಂದಲ್ಲ. ಪಾಶ್ಚಾತ್ಯ ಉಡುಪುಗಳನ್ನು ತೊಡಲು ನನಗೇನೂ ಅಡ್ಡಿಯಿಲ್ಲ. ಆದರೆ ಅದರಲ್ಲಿ ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ. ನನ್ನ ವ್ಯಕ್ತಿತ್ವಕ್ಕೆ ಕುಂದುಬರದಂತೆ ಧರಿಸುತ್ತೇನೆ. ನಾನು ಸ್ಕ್ರೀನ್ ಹೊರಗೆ ಜೀನ್ಸ್, ಟೀಶರ್ಟ್ ಧರಿಸೋದನ್ನು ಇಷ್ಟಪಡುತ್ತೇನೆ. ಚಿತ್ರದಲ್ಲೂ ಇಂಥದ್ದೆಲ್ಲ ಒಕೆ. ಮಿತಿ ದಾಟದಿದ್ದರೆ ಪರವಾಗಿಲ್ಲ. ಆದರೆ ಎಲ್ಲದಕ್ಕೂ ಕಥೆ ಉತ್ತಮವಾಗಿರಬೇಕು ಎನ್ನುತ್ತಾಳೆ.
ಹಾಗಾದರೆ ಇತ್ತೀಚೆಗಷ್ಟೇ ಶ್ಯಾಮಿಲಿ ತನ್ನ ಅಕ್ಕ ಶಾಲಿನಿಯ ಗಂಡ, ನಟ ಅಜಿತ್ ಜತೆಗೆ ತಮಿಳಿನಲ್ಲಿ ನಟಿಸಲು ಅವಕಾಶ ಬಂದರೆ ಒಪ್ಪುತ್ತೀರಾ ಎಂದರೆ, ಅಯ್ಯೋ ಇಲ್ಲಪ್ಪ. ಅಜಿತ್ ಜತೆಗೆ ನಾನು ನಟಿಸಲು ಸಾಧ್ಯವೇ ಇಲ್ಲ. ಅಜಿತ್ ನನಗೆ ಅಣ್ಣನಿದ್ದಂತೆ. ಆತನಿಗೂ ನಾನೊಬ್ಬ ಪುಟ್ಟ ತಂಗಿಯಿದ್ದಂತೆ. ಆತನ ಜತೆಗೆ ಸಿನಿಮಾದಲ್ಲಿ ಮರ ಸುತ್ತೋದಾ..? ಸಾಧ್ಯವೇ ಇಲ್ಲ. ಅಜಿತ್ ಜತೆಗೆ ಚಿತ್ರದಲ್ಲಿ ನಟಿಸೋದು ಎಂದಿಗೂ ಸಾಧ್ಯವಾಗದ ಮಾತು. ಅಜಿತ್‌ಗೂ ಇದು ಇಷ್ಟವಿಲ್ಲ ಎನ್ನುತ್ತಾಳೆ.
ಹಾಗಾದರೆ, ವಿಜಯ್ ಜತೆಗೆ ಯಾವುದೋ ಚಿತ್ರದಲ್ಲಿ ನಟಿಸುತ್ತಿದ್ದೀರಿ ಎಂಬ ಸುದ್ದಿಯಿದೆಯಲ್ಲ ಎಂದರೆ, ಇದು ಸುಳ್ಳು ಸುದ್ದಿ. ಸದ್ಯದವರೆಗೆ ವಿಜಯ್ ಜತೆಗೆ ಯಾವುದೇ ಚಿತ್ರಕ್ಕೂ ಸಹಿ ಮಾಡಿಲ್ಲ ಎನ್ನುತ್ತಾಳೆ ಶ್ಯಾಮಿಲಿ.
WD
ಇಷ್ಟೆಲ್ಲಾ ಹೇಳುವ ಶ್ಯಾಮಿಲಿಯ ಬೆಸ್ಟ್ ಫ್ರೆಂಡ್ ಯಾರಪ್ಪಾ ಎಂದರೆ, ಅಕ್ಕ ಶಾಲಿನಿ ಅಂತ ಒಂದೇ ಉಸಿರಿಗೆ ಹೇಳುತ್ತಾಳೆ. ಶಾಲಿನಿ ನನ್ನನ್ನು ಸಣ್ಣವಳಿದ್ದಾಗಿನಿಂದಲೂ ತಾನು ಹೋಗುವ ಶೂಟಿಂಗ್ ಸ್ಥಳಕ್ಕೆ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದಳು. ನನಗೆ ತುಂಬ ಗೆಳೆಯ ಗೆಳತಿಯರಿದ್ದರೂ, ಏನೇ ವಿಚಾರವಿದ್ದರೂ ಮೊದಲು ಅಕ್ಕನಿಗೆ ಹೇಳಬೇಕೆನಿಸುತ್ತದೆ. ಅವಳು ನನಗೆ ಬೆಸ್ಟ್ ಫ್ರೆಂಡ್ ಎನ್ನುತ್ತಾಳೆ ಶ್ಯಾಮಿಲಿ. ನನಗೆ ಶಾರುಖ್ ಖಾನ್ ಎಂದರೆ ಪಂಚಪ್ರಾಣ. ನಾನು ಆತನ ದೊಡ್ಡ ಅಭಿಮಾನಿ. ಸಣ್ಣವಳಿರುವಾಗಿನಿಂದಲೂ. ಆಗೊಮ್ಮೆ ಅಕ್ಕ ಶಾಲಿನಿ ಜತೆಗೆ ಶಾರುಖ್‌ನನ್ನು ಜೀವಮಾನದಲ್ಲಿ ಒಮ್ಮೆ ಭೇಟಿಯಾಗಬೇಕೆಂದು ಹೇಳಿದ್ದೆ. ಶಾಲಿನಿ ಮದುವೆಯಾದ ಮೇಲೂ ನಾನು ಸಣ್ಣವಳಿದ್ದಾಗ ಹೇಳಿದ್ದನ್ನು ನೆನಪಿಟ್ಟುಕೊಂಡು, ಭಾವ ಅಜಿತ್‌ಗೆ ಹೇಳಿ ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ಶಾರುಖ್‌ರನ್ನು ಭೇಟಿ ಮಾಡಿಸಿದಳು. ಇದೊಂದು ಅಪೂರ್ವ ಅನುಭವ ಎನ್ನುತ್ತಾಳೆ ಶ್ಯಾಮಿಲಿ.
ಸದ್ಯಕ್ಕೆ ಶ್ಯಾಮಿಲಿಗೆ ತಮಿಳಿನಿಂದ ಸಾಕಷ್ಟು ಅವಕಾಶ ಬರುತ್ತಿದೆ. ಮಳಯಾಳಂನಿಂದಲೂ ಅವಕಾಶಗಳಿಗೇನೂ ಕಡಿಮೆಯಿಲ್ಲ. ಆದರೆ ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಶ್ಯಾಮಿಲಿಗೆ ಕನ್ನಡದಲ್ಲಿ ನಟಿಸಲು ಮಾತ್ರ ಅವಕಾಶ ಇನ್ನೂ ಬಂದಿಲ್ಲ. ಈಕೆಯನ್ನು ಯಾರು ಕನ್ನಡಕ್ಕೆ ಕರೆತರುತ್ತಾರೋ ನೋಡಬೇಕು.