ಅಂತಿಮ ಹಾಡಿನ ಚಿತ್ರೀಕರಣಕ್ಕೆಂದು ಚೀನಾದ ಮಕಾವೋ ದ್ವೀಪಕ್ಕೆ ಹಾರಿರುವ ಪ್ರೇಮಿಸಂ ಚಿತ್ರತಂಡ ಅಲ್ಲೇ ಬೀಡು ಬಿಟ್ಟು ಶೂಟಿಂಗ್ ಕಾರ್ಯದಲ್ಲಿ ನಿರತವಾಗಿದೆ.
ಈ ಚಿತ್ರದ ನಿರ್ದೇಶಕರು ರತ್ನಜ. ನೆನಪಿರಲಿ ಹಾಗೂ ಹೊಂಗನಸುವಿನಂತಹ ಉತ್ತಮ ಚಿತ್ರಗಳನ್ನು ರತ್ನಜ ನೀಡಿದ್ದಾರೆ. ಹೊಂಗನಸು ನುಚ್ಚುನೂರಾಗಿ ಸೋತುಹೋದರೆ, ಮೊದಲ ಪ್ರಯತ್ನದ ನೆನಪಿರಲಿ ಚಿತ್ರ ಐದು ಫಿಲಂಫೇರ್ ಮತ್ತು ಮೂರು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೇ ತಂಡ ಈಗ ಪ್ರೇಮಿಸಂ ಚಿತ್ರ ಮಾಡಲು ಹೊರಟಿದೆ ಎಂಬುದು ನಿಮಗೆ ನೆನಪಿರಲಿ.
ಅಮೂಲ್ಯಳಿಗೆ ಇದು ಮೂರನೇ ಚಿತ್ರ ಈ ಚಿತ್ರದ ಯಶಸ್ಸು ಕೂಡಾ ಆಕೆಗೆ ಅಮೂಲ್ಯವೇ ಸರಿ. ಇತ್ತೀಚೆಗಷ್ಟೆ ಅಪ್ಪನ ಸಾವಿನಿಂದ ತೀವ್ರ ಕಂಗೆಟ್ಟಿದ್ದ ಈ ಹುಡುಗಿ ಅಮೂಲ್ಯ ಈಗಷ್ಟೆ ಸ್ವಲ್ಪ ಆ ನೋವಿನಿಂದ ಹೊರಬಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಾಯಕ ನಟರಾಗಿ ಪಿಯುಸಿ ಚಿತ್ರದ ನಾಯಕ ಚೇತನ್ ಚಂದ್ರ ಹಾಗೂ ಕೊಡಗಿನ ಹುಡುಗ ವರುಣ್ ನಟಿಸುತ್ತಿದ್ದಾರೆ. ತಿಂಗಳ ಹಿಂದೆ, ಪ್ರೇಮಿಸಂ ಚಿತ್ರ ತಂಡ ಛತ್ತೀಸ್ಘಡದ ನಕ್ಸಲ್ ಪೀಡಿತ ಪ್ರದೇಶಕ್ಕೆ ತೆರಳಿ ಯಶಸ್ವಿಯಾಗಿ ಶೂಟಿಂಗ್ ಮುಗಿಸಿಕೊಂಡು ಮರಳಿದೆ. ಸದ್ಯದಲ್ಲೇ ಬರಲಿರುವ ಪ್ರೇಮಿಸಂ ತನ್ನ ಪ್ರತಾಪವನ್ನು ತೆರೆಯಲ್ಲಿ ತೋರಿಸಲಿದೆ.