ಹಿರಿಯ ನಟ, 'ನಾಗರಹಾವು' ಚಿತ್ರದ 'ಚಾಮಯ್ಯ ಮೇಷ್ಟ್ರು' ಖ್ಯಾತಿಯ ಕೆ.ಎಸ್.ಅಶ್ವತ್ಥ್ ಅವರು ಇಂದು ನಗರದ ಬಸಪ್ಪ ಮೆಮೊರಿಯಲ್ ಆಸ್ಪತ್ರೆಯಲ್ಲಿ ತಡರಾತ್ರಿ 1.45ಕ್ಕೆ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗಷ್ಟೆ ಜ.11ರಂದು ಅಶ್ವತ್ಥ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಸ್ವತಃ ತನ್ನ ಪತ್ನಿಯನ್ನೇ ಗುರುತಿಸಲಾಗದಷ್ಟು ಆರೋಗ್ಯ ಹದಗೆಟ್ಟಿತ್ತು. ಆದರೆ ನಂತರ ಕೊಂಚ ಸುಧಾರಣೆ ಕಂಡಿದ್ದು, ವೈದ್ಯರ ಹತೋಟಿಗೆ ಬಂದಿತ್ತು. ಆದರೆ ಭಾನುವಾರದ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅಶ್ವತ್ಥ್ ಅವರ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. 1925ರಲ್ಲಿ ಹಾಸನ ಜಿಲ್ಲೆಯ ಕರಗನಹಳ್ಳಿಯಲ್ಲಿ ಜನಿಸಿದ ಅಶ್ವತ್ಥ್ ಮೈಸೂರಿನ ಸರಸ್ವತೀಪುರಂನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ವಿಷ್ಣುವರ್ಧನ್ ಜೊತೆಗೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅಶ್ವತ್ಥ್ ಸುಮಾರು 370 ಚಿತ್ರಗಳಲ್ಲಿ ನಟಿಸಿದ್ದರು. ಪ್ರಬುದ್ಧ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದ ಅಶ್ವತ್ಥ್ ಕುಟುಂಬದ ಹಿರಿಯನ ಪಾತ್ರಕ್ಕೇ ಹೇಳಿ ಮಾಡಿಸಿದಂತಿದ್ದರು. ಕೆಲವು ವರ್ಷಗಳ ಹಿಂದೆ ಭೂಪತಿ ಚಿತ್ರದಲ್ಲಿ ನಟಿಸಿದ ನಂತರ ಅವರು ಮತ್ತೆ ನಟನೆಗೆ ಮರಳಿರಲಿಲ್ಲ. ಅತ್ಯಂತ ಶಿಸ್ತಿನ, ಪ್ರಾಮಾಣಿಕ ನಟನಾಗಿದ್ದ ಅಶ್ವತ್ಥ್ 1942ರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಲ್ಗೊಂಡಿದ್ದರು.
ಮೈಸೂರಿನ ಸರಸ್ವತೀಪುರಂನ 9ನೇ ಮುಖ್ಯರಸ್ತೆಯಲ್ಲಿರುವ ಜವರೇಗೌಡ ಪಾರ್ಕ್ ಎಂದರೆ ಅಶ್ವತ್ಥ್ ಅವರಿಗೆ ತುಂಬಾ ಇಷ್ಟ. ಹಾಗಾಗಿ ಶವವನ್ನು ಅಲ್ಲಿಗೆ ಕರೆತರಲಾಗಿದೆ. ಪಾರ್ಕಿನಲ್ಲಿ ಸಂಜೆ ಮೂರು ಗಂಟೆವರೆಗೆ ಸಾರ್ವಜನಿಕ ವೀಕ್ಷಣೆಗೆ ಗಾಜಿನ ಪೆಟ್ಟಿಗೆಯಲ್ಲಿ ಶವವನ್ನು ಇಡಲಾಗಿದೆ. ಸರತಿ ಸಾಲಿನಲ್ಲಿ ಸಾರ್ವಜನಿಕರು ಬಂದು ಅವರ ದರ್ಶನ ಮಾಡಿ ತೆರಳುವ ಸೌಲಭ್ಯ ಏರ್ಪಡಿಸಲಾಗಿದೆ. ಈಗಾಗಲೇ ಅಶ್ವತ್ಥ್ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜವರೇಗೌಡ ಪಾರ್ಕಿನಲ್ಲಿ ನೆರೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ದೇಶನದಂತೆ ಮೈಸೂರಿಗೆ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿದ್ದು, ಅಂತ್ಯಸಂಸ್ಕಾರಕ್ಕೂ ಹಾಜರಾಗಲಿದ್ದಾರೆ. ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಶ್ವತ್ಥ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಕಾಶಿಯಾತ್ರೆಗೆ ಹೋಗೋದು ಅಶ್ವತ್ಥ್ ಅವರ ಕೊನೆಯಾಸೆಯಾಗಿತ್ತು. ಅದನ್ನು ತಮ್ಮ ಪುತ್ರಿ ವಿಜಯಾಮೂರ್ತಿಯ ಬಳಿ ಹೇಳಿಕೊಂಡಿದ್ದರು. ಹಾಗಾಗಿ ಮನೆ ಮಂದಿ ಸೇರಿ ಕಾಶಿಯಾತ್ರೆಗೆ ಇತ್ತೀಚೆಗಷ್ಟೆ ಕರೆದುಕೊಂಡು ಹೋಗಿದ್ದರು.
ಚಿತ್ರರಂಗದಲ್ಲಿನ ಇವರ ಸೇವೆಗೆ ತುಮಕೂರು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅಶ್ವತ್ಥ್ ಭಾಜನರಾಗಿದ್ದರು. ಡಾ.ವಿಷ್ಣುವರ್ಧನ್ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಅಶ್ವತ್ಥ್, ವಿಷ್ಣು ಅವರ್ನನು ಬಹಳ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಡಾ.ವಿಷ್ಣು ಅವರ ನಿಧನದಿಂದ ಅವರಿಗೆ ಆಘಾತವಾಗಿತ್ತಲ್ಲದೆ, ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗಿದೆ.