ಮೊನ್ನೆ ನ.ರಾ. ಕಾಲೋನಿಯ ಎಪಿಎಸ್ ಮೈದಾನದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಗಣೇಶೋತ್ಸವ ಆಚರಣೆಯಲ್ಲಿ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು ಎಂದು ಸಹ ಹೇಳಲಾಗುತ್ತಿದೆ. ಇದೇನು ವಿಶೇಷ ಅಂದುಕೊಂಡಿರಾ. ಹೌದು, ಅಲ್ಲಿಗೆ ಸಂಗೀತ ಸಂಜೆ ನಡೆಸಿಕೊಡಲು ಜನಪ್ರಿಯ ಗಾಯಕ ಸೋನು ನಿಗಮ್ ಬಂದಿದ್ದರು.
ವಿಶೇಷ ಅಂದರೆ, ಬೆಂಗಳೂರಿನಲ್ಲಿ ಗಣೇಶೋತ್ಸವ ಸಮಾರಂಭದಲ್ಲಿ ಇವರು ಇದೇ ಮೊದಲ ಬಾರಿಗೆ ಹಾಡಿದರು. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಎದುರು ಸ್ಟೇಜ್ ಶೋ ನಡೆಸಿಕೊಟ್ಟ ಇವರು ಹಾಡಿದ 20ಕ್ಕೂ ಹೆಚ್ಚು ಹಾಡಿನಲ್ಲಿ ಜನಪ್ರಿಯ ಕನ್ನಡ ಗೀತೆಗಳು ಸಾಕಷ್ಟು ಸಂಖ್ಯೆಯಲ್ಲಿ ಇತ್ತು.
ನೆಚ್ಚಿನ ಗಾಯಕ ಹಾಡಲು ಬರುತ್ತಾನೆ ಎನ್ನುವ ವಿಷಯ ತಿಳಿದು ವಾರದ ಹಿಂದೆಯೆ ಪಾಸ್ ಸಂಗ್ರಹಿಸಿ ಕಾದಿದ್ದ ಪ್ರೇಕ್ಷಕರು ಅಂದು ಸಂಜೆ 5 ಗಂಟೆಗೆಲ್ಲಾ ಮೈದಾನದತ್ತ ದೌಡಾಯಿಸಲು ಆರಂಭಿಸಿದ್ದರು. ರಾತ್ರಿ 8.45ಕ್ಕೆ ಎಂಟ್ರಿಕೊಟ್ಟ ಸೋನು ಕೊನೆಗೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಗಣೇಶನ ಪಕ್ಕದಲ್ಲೇ ಹಾಕಿದ್ದ ಸ್ಟೇಜ್ ಮೇಲೆ ಹಾಡಿ ಕುಣಿದರು.
ಇವರು ಎರಡೂಕಾಲು ಗಂಟೆ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಹಲವು ಹಿಂದಿ ಹಾಡುಗಳೂ ಸೇರಿದ್ದವು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಚಪ್ಪಾಳೆ, ಸಿಳ್ಳೆ ಹಾಗೂ ಕೇಕೆ ಹಾಕುವ ಮೂಲಕ ತಮ್ಮ ನೆಚ್ಚಿನ ಗಾಯಕನನ್ನು ಹುರಿದುಂಬಿಸಿದರು. ಜನರ ತುಂಬಾ ಒತ್ತಾಯದ ನಂತರ 'ನನಗೆ ಕನ್ನಡ ಸರಿಯಾಗಿ ಬರಲ್ಲ, ತಪ್ಪಾದಲ್ಲಿ ಮನ್ನಿಸಿ' ಎಂದು ಹೇಳಿ 'ನಿನ್ನಿಂದಲೆ, ನಿನ್ನಿಂದಲೆ ಕನಸೊಂದು ಶುರುವಾಗಿದೆ...', 'ಅನಿಸುತಿದೆ ಯಾಕೋ ಇಂದು...', 'ಈ ಸಂಜೆ ಯಾಕಾಗಿದೆ...' ಮತ್ತಿತರ ಹಾಡನ್ನು ಹಾಡಿದರು. ಸೇರಿದ್ದ ಅಭಿಮಾನಿಗಳಿಗೆ ಮನಸ್ಸು ತುಂಬಿ ಬರುವಷ್ಟು ಹಾಡು ಹೇಳಿ, ನೃತ್ಯ ಮಾಡಿದ ನಂತರವೇ ಇವರು ವೇದಿಕೆಯಿಂದ ಕೆಳಗಿಳಿದರು.