ಕನ್ನಡ ಚಿತ್ರರಂಗದಲ್ಲಿ ಇತರ ಭಾಷೆ ಚಿತ್ರಗಳ ಹಾವಳಿ ಖಂಡಿಸಿ ಡಿ.1ರಿಂದ ಅನಿರ್ದಿಷ್ಟಾವಧಿ ಚಿತ್ರೋದ್ಯಮ ಬಂದ್ ಮಾಡುವ ಹೇಳಿಕೆ ನೀಡಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರ ಪರ-ವಿರೋಧದ ಧ್ವನಿ ಎದ್ದಿದ್ದು, ಈಗ ಅವರ ಅಧ್ಯಕ್ಷಗಾದಿಗೆ ಕುತ್ತು ಬಂದಿದೆ.
ಸಿಡಿದೆದ್ದ ಮಂಡಳಿ ಸದಸ್ಯರು ಅಧ್ಯಕ್ಷರಿಗೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಇಲ್ಲ. ಅವರು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಗೌರವ ಕೊಡಬೇಕು. ಅದನ್ನೇ ಮರೆತಿದ್ದಾರೆ. ಆದ್ದರಿಂದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಹಕ್ಕು ಅವರು ಕಳೆದುಕೊಂಡಿದ್ದಾರೆ ಎಂದು ಬಂಡಾಯ ಎದ್ದಿರುವ ಸದಸ್ಯರು ತೀವ್ರ ಟೀಕೆ ಮಾಡಿದ್ದಾರೆ.
ಮಂಡಳಿಯ 9 ಬೇಡಿಕೆಗಳನ್ನು ಪೂರೈಸದಿದ್ದರೆ ಬಂದ್ ಖಂಡಿತ ಎಂದಿರುವ ಅಧ್ಯಕ್ಷರ ಹೇಳಿಕೆಗೆ ಪರ ಹಾಗೂ ವಿರೋಧ ವ್ಯಕ್ತಪಡಿಸಿರುವ ಪದಾಧಿಕಾರಿಗಳು, ಸದಸ್ಯರು ಅಧಿಕೃತವಾಗಿ ಬಂಡಾಯ ಎದ್ದಿದ್ದು ಮಂಡಳಿಯೇ ಒಡೆದುಹೋಗುವ ಹಂತಕ್ಕೆ ತಲುಪಿದೆ.
ಅಧ್ಯಕ್ಷರ ಈ ಏಕಪಕ್ಷೀಯ ಹೇಳಿಕೆಯನ್ನು ಮಂಡಳಿಯ ಕಾರ್ಯದರ್ಶಿಯೂ ಆಗಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಟ ರವಿಚಂದ್ರನ್, ಕಲಾವಿದರ ಸಂಘದ ಅಧ್ಯಕ್ಷ ನಟ ಅಂಬರೀಶ್ ಮೊದಲಾದವರು ಪಾಟೀಲರ ನಿರ್ಧಾರವನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಅಲ್ಲದೆ, ಅಧ್ಯಕ್ಷರು ಕರೆದಿರುವ ಬಂದ್ಗೆ ಅವಕಾಶ ನೀಡುವುದಿಲ್ಲ. ಆದರೆ, ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸುವ ಹಿನ್ನೆಲೆ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಚಿತ್ರರಂಗ ಬಂದ್‌ನಿಂದ ಯಾರಿಗೆ ಲಾಭ? ಇದರಿಂದ ನಷ್ಟ ಅನುಭವಿಸುವವರೂ ನಾವೇ. ಇಂತಹ ಕನಿಷ್ಠ ಜ್ಞಾನವೂ ಅಧ್ಯಕ್ಷರಿಗೆ ಇಲ್ಲ ಎಂದು ರಾಕ್‌ಲೈನ್ ಖೇದ ವ್ಯಕಪಡಿಸಿದರು.
20 ಮಂದಿ ರಾಜೀನಾಮೆ: ಬುಧವಾರ ಮಧ್ಯರಾತ್ರಿ ಹೊತ್ತಿಗೆ ನಿರ್ಮಾಪಕರ ವಲಯದ ಬಹುತೇಕ ಮಂದಿ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಜಯಣ್ಣ, ಸಾರಾ ಗೋವಿಂದು, ಮೋಹನ್‌ಕುಮಾರ್, ಗಂಗಾಧರ್, ಕೆ. ಮಂಜು, ರಮೇಶ್ ಯಾದವ್, ವಿ. ನಾಗರಾಜ್, ಕೆಸಿಎನ್ ಕುಮಾರ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ 20 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ.