ಅಪರೂಪಕ್ಕೆಂಬಂತೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ನಾವೇ ಆರಿಸಿ ಕಳುಹಿಸಿದ ಈ ಭ್ರಷ್ಟ ಬಿಜೆಪಿ ಸರಕಾರ ಹೋಗಲೇಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕನ್ನಡ-ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವುದರ ಹೊರತಾಗಿಯೂ ಕರ್ನಾಟಕದ ರಾಜಕಾರಣದ ಬಗ್ಗೆ ಗಮನ ಹರಿಸಿರುವ ರಮ್ಯಾ, ದಿನಕ್ಕೊಂದರಂತೆ ಹೊರ ಬರುತ್ತಿರುವ ಹಗರಣಗಳಿಂದ ರೋಸಿ ಹೋದಂತಿದೆ. ಬಹುಶಃ ಪಕ್ಕದ ರಾಜ್ಯಗಳಿಗೆ ಹೋಗುವಾಗ ಕರ್ನಾಟಕದ ರಾಜಕಾರಣದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೋ, ಏನೋ?!
ಈ ಸಂಬಂಧ ತನ್ನ ಟ್ವಿಟ್ಟರ್ ಪುಟದಲ್ಲಿ ಹಾಕಿರುವ ಸಂದೇಶದಲ್ಲಿ ಬಿಜೆಪಿ ಸರಕಾರ ಹೋಗಲೇಬೇಕು ಎಂದಿದ್ದಾರೆ. ಕರ್ನಾಟಕದ ಬಿಜೆಪಿ ಸರಕಾರದ ಪ್ರತಿ ತಿಂಗಳು ಹೊಸ ಹೊಸ ಹಗರಣಗಳಿಂದ ಸುದ್ದಿಯಾಗುತ್ತಿದೆ. ಇದು ವಾಕರಿಕೆ ಹುಟ್ಟಿಸುವಂತದ್ದು. ಈ ಸರಕಾರಕ್ಕೆ ಮತ ಹಾಕಿದ ನಮಗೀಗಲಾದರೂ ನಾಚಿಕೆಯಾಗಬೇಕು ಎಂದು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವೇನಿದೆ ಎನ್ನುವುದು ಅವರಿಗೂ ಮನದಟ್ಟಾಗಿದೆ. ಜನರಿಂದ ಸರಕಾರವಿದೆ, ಜನರಿಂದಲೇ ರಾಜಕಾರಣಿಗಳಿದ್ದಾರೆ, ಅಂದ ಮೇಲೆ ಭ್ರಷ್ಟಾಚಾರ ಕೂಡ ಜನರಿಂದಲೇ ತಾನೇ ಸೃಷ್ಟಿಯಾಗಿರೋದು? ಹಾಗಾಗಿ ಲಂಚ ನೀಡುವ ಜನರನ್ನು ಕೂಡ ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ನಡುವೆ ತನ್ನ 'ಸಂಜು ವೆಡ್ಸ್ ಗೀತಾ' ಚಿತ್ರದ ಆಡಿಯೋ ಬಿಡುಗಡೆಯಾಗಿರುವ ಬಗ್ಗೆ ಕೂಡ ಮಾಹಿತಿ ನೀಡಿರುವ ರಮ್ಯಾ, ಪೈರಸಿ ವಿರುದ್ಧ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿಡಿ ಖರೀದಿಸಿ ಅಥವಾ ಅಧಿಕೃತ ಕಂಪನಿಗಳಿಂದ ಡೌನ್‌ಲೋಡ್ ಮಾಡಿಕೊಳ್ಳಿ. ಆದರೆ ಎಲ್ಲೋ ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡುವುದು ಅಥವಾ ನಕಲಿ ಸಿಡಿಗಳಿಗೆ ಮೊರೆ ಹೋಗುವುದನ್ನು ಮಾಡಬೇಡಿ ಎಂದಿದ್ದಾರೆ.