ಪ್ರಜ್ವಲ್ ಕೈಯಲ್ಲಿ 'ಭದ್ರ'ಳಾಗುತ್ತಿದ್ದಾಳೆ ಮುಂಬೈ ಬೆಡಗಿ ಡೈಸಿ
ಮುಂಬೈ ಬೆಡಗಿ ಡೈಸಿ ಶಾ ಮರಳಿದ್ದಾರೆ. ಈ ಹಿಂದೆ 'ಎನ್‌ಕೌಂಟರ್ ದಯಾನಾಯಕ್'ನಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಮುದ್ದು ಮುಖದ ಈ ಬೆಡಗಿ ಈಗ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಗೇಶ್ ಕುಮಾರ್ ನಿರ್ದೇಶಿಸುತ್ತಿರುವ
ಪ್ರಜ್ವಲ್ ದೇವರಾಜ್ ನಾಯಕರಾಗಿರುವ 'ಭದ್ರ' ಚಿತ್ರದಲ್ಲಿ ಡೈಸಿ ಶಾ ನಾಯಕಿ.
PR
ಅತಿ ಶೀಘ್ರದಲ್ಲೇ ಸೆಟ್ಟೇರಲಿರುವ ಭದ್ರ ಚಿತ್ರವನ್ನು ಎನ್. ಕುಮಾರ್ ನಿರ್ಮಿಸುತ್ತಿದ್ದಾರೆ. ತೆಲುಗಿನ ಯಶಸ್ವಿ ಚಿತ್ರ 'ರಣಂ' ರಿಮೇಕ್ ಚಿತ್ರವಿದು. ನವೀನ್ ಕೃಷ್ಣಾರವರ 'ಧಿಮಾಕು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಗೇಶ್ ಕುಮಾರ್ ಇದನ್ನು ಒಪ್ಪಿಕೊಳ್ಳುವುದರೊಂದಿಗೆ ಎರಡನೇ ರಿಮೇಕ್ ಚಿತ್ರ ನಿರ್ದೇಶಿಸುತ್ತಿದ್ದಾರೆ.
'ಎನ್‌ಕೌಂಟರ್ ದಯಾನಾಯಕ್' ನಂತರ ಕನ್ನಡ ಚಿತ್ರರಂಗ ಡೈಸಿಗೆ ಅವಕಾಶಗಳನ್ನು ಹರಿಸಿತ್ತಾದರೂ, ತನ್ನದೇ ಧಿಮಾಕಿನಿಂದ ಅವರು ಎಲ್ಲವನ್ನೂ ಕಳೆದುಕೊಂಡಿದ್ದರು. ಕನ್ನಡ ಚಿತ್ರರಂಗದ ಸೀಮಿತ ಮಾರುಕಟ್ಟೆಯನ್ನು ಗಣನೆಗೆ ತೆಗೆದುಕೊಳ್ಳದೆ, ತನ್ನ ಬೇಡಿಕೆಗಳನ್ನು ಮುಂದಿಟ್ಟಿದ್ದರಿಂದ ಅವಕಾಶಗಳಿಂದ ಡೈಸಿ ವಂಚಿತರಾಗಿದ್ದರು.
ಅಂತಹ ಪ್ರಮುಖ ಅವಕಾಶ ಅವರಿಗೆ ಸಿಕ್ಕಿದ್ದು ದರ್ಶನ್ ನಾಯಕರಾಗಿದ್ದ 'ಚಿಂಗಾರಿ'ಯಲ್ಲಿ. ಹರ್ಷ ನಿರ್ದೇಶಿಸಿದ್ದ ಚಿತ್ರದಲ್ಲಿ ಡೈಸಿ ನಾಯಕಿಯಾಗಬೇಕಿತ್ತು. ಆದರೆ ಅವರದ್ದೇ ಆದ ತಪ್ಪುಗಳಿಂದಾಗಿ ಅವಕಾಶವನ್ನು ಕಳೆದುಕೊಂಡಿದ್ದರು.
ಈ ನಡುವೆ ಯೋಗೀಶ್ ಹುಣಸೂರು ನಿರ್ಮಿಸುತ್ತಿರುವ ಮಗೇಶ್ ಅವರ 'ಮುರಳಿ ಮೀಟ್ಸ್ ಮೀರಾ' ಡಬ್ಬಿಂಗ್ ಮುಗಿದಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ-ನಿರ್ದೇಶಕರು ಹೇಳಿಕೊಂಡಿದ್ದಾರೆ.