ಕಿರುತೆರೆಯಲ್ಲಿ ಒಂದಷ್ಟು ಯಶಸ್ಸು ಗಳಿಸಿದವರು ಬೆಳ್ಳಿತೆರೆಗೆ ಬರುತ್ತಿರುವುದು ಇದೇ ಮೊದಲಲ್ಲ. ಆದರೆ ರಿಯಾಲಿಟಿ ಶೋದಲ್ಲಿ ಮಿಂಚಿದವರು ತೆರೆಗೆ ಬಂದಿರುವುದು ಅಪರೂಪವೇ. ಆ ಸಾಲಿಗೆ ಈಗ ಹಳ್ಳಿ ಹೈದ ರಾಜೇಶ ಸೇರ್ಪಡೆಯಾಗುತ್ತಿದ್ದಾನೆ.
ಸುವರ್ಣ ಮನರಂಜನೆ ವಾಹಿನಿಯ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಕಾರ್ಯಕ್ರಮದ ವಿಜೇತ ರಾಜೇಶನ ಭಾರೀ ಜನಪ್ರಿಯತೆಯನ್ನು ಬಳಸಿಕೊಂಡು ಚಿತ್ರ ನಿರ್ಮಿಸಲು ಹೊರಟಿರುವವರು ರವಿ ಎಂಬ ನಿರ್ದೇಶಕರು. ಇವರ ಬೆನ್ನಿಗೆ ಮೂವರು ನಿರ್ಮಾಪಕರಿದ್ದಾರಂತೆ.
PR
ತನ್ನ ಮುಗ್ಧ ಮಾತುಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ರಾಜೇಶನಿಗೆ ಆತನ ಮೆಂಟರ್ ಐಸೂ ಆಲಿಯಾಸ್ ಐಶ್ವರ್ಯಾಳೇ ಹೀರೋಯಿನ್ ಎಂಬುದು ಖಚಿತವಾಗಿಲ್ಲ.
'ಇದು ಪಕ್ಕಾ ಮಾಸ್ ಸಿನಿಮಾ. ದುನಿಯಾ ಚಿತ್ರದ ಛಾಯೆಯನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಹಳ್ಳಿ ಹುಡುಗನೊಬ್ಬ ಪೇಟೆಗೆ ಬರುವ ಕಥೆಯಿದು. ಸಾಕಷ್ಟು ಆಕ್ಷನ್, ಸೆಂಟಿಮೆಂಟ್, ಹಾಸ್ಯವಿರುತ್ತದೆ' ಎಂದು ಚಿತ್ರತಂಡ ಹೇಳಿಕೊಂಡಿದೆ.
ಚಿತ್ರಕ್ಕೆ ಇಡಲಾಗಿರುವ ಹೆಸರು 'ಐಶ್ ಲವ್ಸ್ ರಾಜ್'.
ಡಿಸೆಂಬರಿನಲ್ಲಿ ಸೆಟ್ಟೇರಲಿರುವ ಹಳ್ಳಿ ಹೈದನ ಚಿತ್ರಕ್ಕೆ ರಾಜು ತಾಳಿಕೋಟೆ, ರಂಗಾಯಣ ರಘು, ಶೋಭರಾಜ್ ಮುಂತಾದವರಿರುತ್ತಾರೆ. ತಂತ್ರಜ್ಞರ ಆಯ್ಕೆ ಶೀಘ್ರದಲ್ಲೇ ನಡೆಯಲಿದೆ.
'ದುನಿಯಾ' ಚಿತ್ರದ ಹೀರೋ ವಿಜಯ್ ಹಳ್ಳಿಯವರಾದರೂ, ಅವರು ಮೊದಲೇ ನಟರಾಗಿದ್ದವರು. ಸಾಹಸ ಕಲಾವಿದನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ಆದರೆ ರಾಜೇಶ ಹಳ್ಳಿ ಗಮಾರ. ಆತನಿಗೆ ಚಿತ್ರರಂಗದ ಯಾವುದೇ ಕಸರತ್ತುಗಳು ಗೊತ್ತಿಲ್ಲ. ಹೇಗೆ ಚಿತ್ರ ಮಾಡುತ್ತೀರಿ ಎಂಬ ಪ್ರಶ್ನೆ ನಿರ್ದೇಶಕ ರವಿಯವರನ್ನು ಕೇಳಲಾಯಿತು.
ಹೌದು, ನೀವು ಹೇಳೋದು ಸರಿ. ರಾಜೇಶನಿಗೆ ಅಭಿನಯ ಗೊತ್ತಿಲ್ಲ. ಸಾಹಸ ಮಾಡುವುದು ಸಾಧ್ಯವಿಲ್ಲ. ಆದರೆ ಇವೆಲ್ಲಕ್ಕೂ ತರಬೇತಿ ನೀಡಿ, ಆತನನ್ನು ತಯಾರು ಮಾಡುತ್ತೇವೆ ಎಂದು ನಿರ್ದೇಶಕರು ಹೇಳುತ್ತಾರೆ.
ನೆನಪಿಡಿ, ಇದು ರಾಜೇಶನನ್ನೇ ಕೇಂದ್ರವಾಗಿಟ್ಟುಕೊಂಡು ಹೆಣೆಯಲಾಗಿರುವ ಕಥೆ. ರಿಯಾಲಿಟಿ ಶೋದ ಆರಂಭದಲ್ಲೇ ಗಮನ ಸೆಳೆದಿದ್ದ ಹುಡುಗನನ್ನು ಕಲ್ಪಿಸಿಕೊಂಡು ಕಥೆ ಸಿದ್ಧ ಮಾಡುತ್ತಿದ್ದಂತೆ ಅತ್ತ ಶೋದಲ್ಲಿಯೂ ಆತ ಗೆದ್ದ. ಎರಡೂ ಸರಿ ಹೋಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇದೆಲ್ಲ ಸರಿ, ಆದ್ರೆ ರಾಜೇಶ ನಟಿಸಲು ಒಪ್ಪಿಕೊಂಡಿದ್ದಾನಾ?
ಆರಂಭದಲ್ಲಿ 'ನಾನ್ ಮಾಡಲ್ಲಪ್ಪ.. ನನ್ ಕೈಲಾಗಲ್ಲ' ಎಂದೇ ಹೇಳುತ್ತಿದ್ದ. ಮೈಸೂರಿನ ಕಾಕನಕೋಟೆ ಸಮೀಪದ ಬಳ್ಳೇಹಾಡಿ ಎಂಬ ಕಾಡು ಪ್ರದೇಶಕ್ಕೆ ಹೋಗಿ ಆತನಿಗೆ ಕಥೆ ಹೇಳಿದೆ. ಸಾಕಷ್ಟು ದಿನ ಆತನ ಜತೆಗಿದ್ದು ಕೊನೆಗೂ ಒಪ್ಪಿಸಿದ್ದೇನೆ. ಅಷ್ಟರಲ್ಲಿ ಸಾಕಪ್ಪಾ ಸಾಕು ಎಂಬ ಅನುಭವ ನಿರ್ದೇಶಕರಿಗೆ ಆಗಿದೆಯಂತೆ.