ಶಿವರಾಜ್ ಕುಮಾರ್ 100ನೇ ಚಿತ್ರ ಪ್ರೇಮ್ ನಿರ್ದೇಶನದ 'ಜೋಗಯ್ಯ' ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಈಗ 101ನೇ ಚಿತ್ರವೂ ಘೋಷಣೆಯಾಗಿದೆ. ಹೆಸರಿಡದ ಈ ಚಿತ್ರಕ್ಕೆ ನಾಯಕಿ ಬಹುಭಾಷಾ ತಾರೆ ಪ್ರಿಯಾಮಣಿ.
ಕನ್ನಡದಲ್ಲಿ ಪ್ರಿಯಾಮಣಿ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿರುವುದು ವಿಶೇಷ.
ಪುನೀತ್ ರಾಜ್‌ಕುಮಾರ್ 'ರಾಮ್' ಚಿತ್ರದ ಮೂಲಕ ಕನ್ನಡಕ್ಕೆ ಬಂದು, ಗೋಲ್ಡನ್ ಸ್ಟಾರ್ ಗಣೇಶ್ 'ಏನೋ ಒಂಥರಾ' ಮೂಲಕ ಗಮನ ಸೆಳೆದು, ಸುದೀಪ್ 'ವಿಷ್ಣುವರ್ದನ' ಚಿತ್ರದಲ್ಲಿ ನಟಿಸುತ್ತಿರುವ ಪ್ರಿಯಾಮಣಿ, ಶಿವಣ್ಣ ಜತೆಗಿನ ಚಿತ್ರಕ್ಕೆ ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಜತೆ ಹೆಜ್ಜೆ ಹಾಕುವ ಅವಕಾಶವನ್ನು ಹಿಂದೆ ಮುಂದೆ ನೋಡದೆ ಬಗಲಿಗೆ ಹಾಕಿಕೊಂಡಿದ್ದಾರೆ.
ಶಿವಣ್ಣನ ನೂತನ ಚಿತ್ರವನ್ನು ನಿರ್ದೇಶಿಸುತ್ತಿರುವುದು ಈ ಹಿಂದೆ 'ಸತ್ಯ ಇನ್ ಲವ್' ಮೂಲಕ ಹ್ಯಾಟ್ರಿಕ್ ಹೀರೋಗೆ ಭಿನ್ನ ಗೆಟಪ್ ನೀಡಿದ್ದ ರಾಘವ್ ಲೋಕಿ. ಕ್ರಾಂತಿಕಾರಿ ಕಥೆಯಿದು, ಶಿವಣ್ಣ ಅವರದ್ದು ವಿಶಿಷ್ಟ ಪಾತ್ರ ಎಂದಷ್ಟೇ ನಿರ್ದೇಶಕರು ಹೇಳಿದ್ದಾರೆ.
ಈ ಹಿಂದೆ ಸತ್ಯ ಇನ್ ಲವ್ ಚಿತ್ರಕ್ಕೆ ಸೂಪರ್ ಹಿಟ್ ಸಂಗೀತ ನೀಡಿದ್ದ ಗುರುಕಿರಣ್ ಇಲ್ಲೂ ಇದ್ದಾರೆ. ಅವರ ಸಾರಥ್ಯದಲ್ಲಿ ನವೆಂಬರ್ 26ರಿಂದ ಹಾಡುಗಳ ರೆಕಾರ್ಡಿಂಗ್ ನಡೆಯಲಿದೆ.
ಡಿಸೆಂಬರ್ 14ರಿಂದ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಜನವರಿ 3ರಿಂದ ಅಧಿಕೃತವಾಗಿ ಶೂಟಿಂಗ್ ಆರಂಭವಾಗುತ್ತದೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದು.
ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿರುವವರು ಆಂಧ್ರಪ್ರದೇಶದ ರವಿ ಮತ್ತು ಭಾಸ್ಕರ್. ತಾರಾಗಣದಲ್ಲಿ ರಂಗಾಯಣ ರಘು, ಅವಿನಾಶ್, ದಿಲೀಪ್ ಮತ್ತು ಕೋಮಲ್ ಮಂತಾದವರಿರುತ್ತಾರೆ.