ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತುಳು ಚಿತ್ರದಲ್ಲಿ ಮುತ್ತಪ್ಪ ರೈ; ಡಾನ್ ಅಲ್ಲ, ಸಮಾಜ ಸೇವಕ! (Muthappa Rai | Kanchilda Bale | Krishnappa Uppuru | Kumbra Raghunath Rai)
ಸುದ್ದಿ/ಗಾಸಿಪ್
Bookmark and Share Feedback Print
 
ಮುತ್ತಪ್ಪ ರೈ ಅಂದರೆ ಅಂತಾರಾಷ್ಟ್ರೀಯ ಫಿಗರ್. ಒಂದು ಕಾಲದಲ್ಲಿ ಭೂಗತ ಜಗತ್ತನ್ನು ಮುಷ್ಠಿಯಲ್ಲಿಟ್ಟುಕೊಂಡಿದ್ದ ರೈ ಈಗ ಸಾದಾ ಸೀದಾ ವ್ಯಕ್ತಿ. ಆಗಿರುವ ಕೊಳೆಯನ್ನು ತೊಳೆದುಕೊಳ್ಳಲು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರು.

ಅವರು ಕೊನೆಗೂ ನಟಿಸಲು ಮನಸ್ಸು ಮಾಡಿದರೇ? ಹೌದು, ಅವರ ಇಚ್ಛೆಯಂತೆಯೇ ಎಲ್ಲವೂ ನಡೆದಿದೆ. ನಟಿಸುವುದಾದರೆ ತನ್ನ ನೆಲದ ಭಾಷೆ ತುಳುವಿನಲ್ಲೇ ಮೊದಲು ಎಂದುಕೊಂಡಿದ್ದರು. ಅದಕ್ಕೆ ಪೂರಕವಾಗಿ 'ಕಂಚಿಲ್ದ ಬಾಲೆ' (ತೊಟ್ಟಿಲ ಮಗು) ಎಂಬ ಚಿತ್ರದ ಆಹ್ವಾನವೂ ಬಂದಿತ್ತು.
PR

ಆರಂಭದಲ್ಲಿ ರೈ ನಿರಾಕರಿಸಿದ್ದರಾದರೂ, ನಿರ್ಮಾಪಕ ಕುಂಬ್ರ ರಘುನಾಥ ರೈ ಅವರ ಒತ್ತಾಯಕ್ಕೆ ಮಣಿದು 'ಹೂಂ' ಎಂದಿದ್ದಾರೆ. ಮುತ್ತಪ್ಪ ರೈಯವರು ಈ ಚಿತ್ರದಲ್ಲಿ ನಾಯಕರಲ್ಲ, ಖಳನೂ ಅಲ್ಲ; ಸಮಾಜ ಸೇವಕನ ಪಾತ್ರ. ಅದೂ ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುವಂತದ್ದು.

ಹಾಗಿದ್ದರೂ ಮಹತ್ವದ ಪಾತ್ರವಂತೆ. ಹೀಗೆ ಬಂದು ಹಾಗೆ ಹೋಗುವ ಪಾತ್ರವಾದರೂ, ಊರಿಗೆ ಉಪಕಾರಿ ಎಂದು ಬಿಂಬಿತಗೊಳ್ಳುವ ಪಾತ್ರ. ಚಿತ್ರದಲ್ಲಿ, ಊರಿನ ಆಸ್ಪತ್ರೆಯೊಂದಕ್ಕೆ ಶಂಕು ಸ್ಥಾಪನೆ ಮಾಡಿ, ತುಳುನಾಡಿನ ಬಗ್ಗೆ ಭಾಷಣ ಮಾಡಲಿದ್ದಾರೆ. ಈ ಚಿತ್ರೀಕರಣ ಇದೇ ವಾರ ನಡೆಯಲಿದೆ.

'ಕಂಚಿಲ್ದ ಬಾಲೆ' ದೈವ-ದೇವರ ಬಗೆಗಿನ ಚಿತ್ರ. ಸಾಮಾಜಿಕ ಮೌಲ್ಯವನ್ನು ಸಾರುವ ಅಂಶಗಳೇ ಇಲ್ಲಿ ಪ್ರಮುಖವಾಗಿರುತ್ತವೆ. ಇದಕ್ಕೆ ಪೂರಕವಾಗಿ ಮುತ್ತಪ್ಪ ರೈಯವರಿಗೆ ಕೆಲವು ಡೈಲಾಗ್‌ಗಳೂ ಇವೆ.

ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಕೃಷ್ಣಪ್ಪ ಉಪ್ಪೂರು. 14 ವರ್ಷಗಳ ಹಿಂದೆ 'ಮಾರಿ ಬಲೆ' ಎಂಬ ಚಿತ್ರದಲ್ಲಿ ಉಪ್ಪೂರು ಮತ್ತು ರಘುನಾಥ ರೈ ಜತೆಯಾಗಿ ಕೆಲಸ ಮಾಡಿದವರು. 'ಕಲಾಭೈರವ ಕ್ರಿಯೇಷನ್ಸ್, ಬೆಂಗಳೂರು' ಹೆಸರಿನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಮುತ್ತಪ್ಪ ರೈಯವರ ಗತಕಾಲದ ಜೀವನವನ್ನು ಬೆಳ್ಳಿತೆರೆಗೆ ತರಬೇಕು, ಅದರಲ್ಲಿ ಸ್ವತಃ ಮುತ್ತಪ್ಪ ರೈಯವರೇ ನಟಿಸಬೇಕು ಎಂದು ದುಂಬಾಲು ಬಿದ್ದವರಿಗೆ ಲೆಕ್ಕವಿಲ್ಲ. ಈ ಎಲ್ಲಾ ಆಹ್ವಾನಗಳನ್ನು ಇದುವರೆಗೆ ನಿರಾಕರಿಸುತ್ತಾ ಬಂದವರು ಇವರು. ಮುಂದೆಯೂ ಅಷ್ಟೇ, ಸಿಕ್ಕಸಿಕ್ಕ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

ಆದರೂ ತನ್ನ ಬದುಕಿನ ಚಿತ್ರಣವನ್ನು ತೆರೆಗೆ ತರುವ ಹುಮ್ಮಸ್ಸು ಅವರಲ್ಲಿದೆ. ಅದಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ಗತಕಾಲದ ಬದುಕಿನ ವೈಭವೀಕರಣಕ್ಕಿಂತ, ಸಾಮಾಜಿಕ ಮೌಲ್ಯಗಳು ಎಷ್ಟು ಮುಖ್ಯ ಎಂಬುದನ್ನು ಬಿಂಬಿಸುವ ಯತ್ನ ನಡೆಯಲಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುತ್ತಪ್ಪ ರೈ, ಕಂಚಿಲ್ದ ಬಾಲೆ, ಕೃಷ್ಣಪ್ಪ ಉಪ್ಪೂರು, ಕುಂಬ್ರ ರಘುನಾಥ ರೈ