ಕನ್ನಡ ಚಿತ್ರರಂಗದ ಹಾಸ್ಯನಟರಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವ ಶರಣ್ ಸಂಭಾವನೆ ಎಷ್ಟು ಗೊತ್ತೇ? ಬರೋಬ್ಬರಿ ಏಳೂವರೆ ಲಕ್ಷ ರೂಪಾಯಿಗಳಂತೆ. ಇಂತಹ ಮಹತ್ವದ ಬೆಳವಣಿಗೆಗೆ ಕಾರಣವಾಗಿರುವುದು 'ಎರಡನೇ ಮದುವೆ'.
ಅನಂತ್‌ನಾಗ್, ಸುಹಾಸಿನಿ ಮುಂತಾದವರಿದ್ದ ದಿನೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ತನ್ನ ನಟನೆ ಜನಮೆಚ್ಚುಗೆ ಪಡೆಯುತ್ತಿದ್ದಂತೆ ಶರಣ್ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ. ಅದು 'ಮತ್ತೊಂದು ಮದುವೆನಾ?' ಚಿತ್ರದಿಂದ ಜಾರಿಗೆ ಬಂದಿದೆ.
ಶರಣ್ ಅಮೋಘ ಹಾಸ್ಯನಟ ಎಂಬುದರಲ್ಲಿ ಎರಡು ಮಾತಿಲ್ಲ. ಅಳುವುದು ಅಥವಾ ಆಕ್ಷನ್‌ಗಳಿಗಿಂತ ನಗಿಸುವ ಕೆಲಸ ಕಷ್ಟ. ಇಲ್ಲಿ ಟೈಮಿಂಗ್ ಎನ್ನುವುದು ಪ್ರಮುಖ ಅಂಶವಾಗಿರುತ್ತದೆ. ಅದರಲ್ಲಿ ಅದ್ಭುತ ಹಿಡಿತ ಹೊಂದಿರುವ ಶರಣ್ ಸಂಭಾವನೆ ಹೆಚ್ಚು ಕೇಳುವುದರಲ್ಲಿ ತಪ್ಪೇನಿಲ್ಲ ಎಂಬ ವಾದವೂ ಇದೆ.
ಆದರೆ ಇಲ್ಲೂ ಶರಣ್ ತಗಾದೆ ಎಬ್ಬಿಸಿದ್ದಾರಂತೆ. 'ಮತ್ತೊಂದು ಮದುವೆನಾ?' ಚಿತ್ರದಲ್ಲಿ ಕೇಳಿದಷ್ಟು ಸಂಭಾವನೆಯನ್ನು ನಿರ್ಮಾಪಕ ಉಮೇಶ್ ಬಣಕಾರ್ ಕೊಟ್ಟರೂ, ಟಿಡಿಎಸ್ ಕಡಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಡಬ್ಬಿಂಗ್ ಮಾಡಲು ಕೂಡ ನಿರಾಕರಿಸಿದ್ದರು ಎಂದೂ ಹೇಳಲಾಗುತ್ತಿದೆ.
ಟಿಡಿಎಸ್ ಕಡಿತಗೊಂಡ ಮೊತ್ತವನ್ನು ಬಣಕಾರ್ ನೀಡಿದ ನಂತರವೇ ಶರಣ್ ಡಬ್ಬಿಂಗ್ ಮಾಡಿದ್ದಾರೆ. ಅಷ್ಟರಲ್ಲಿ ನಿರ್ದೇಶಕ ದಿನೇಶ್ ಬಾಬು ಮತ್ತು ನಿರ್ಮಾಪಕರು ಸುಸ್ತಾಗಿ ಹೋಗಿದ್ದಾರೆ.
ಸಾಮಾನ್ಯವಾಗಿ ದಿನೇಶ್ ಬಾಬು ಚಿತ್ರಗಳೆಂದರೆ ಹದಿನೈದು ದಿನಗಳಲ್ಲಿ ರೀಲು ಸುತ್ತಿ ಬಿಡುತ್ತಾರೆ. ಆದರೆ ಈ ಹೊಸ ಚಿತ್ರದಲ್ಲಿ ವಿಳಂಬವಾಗಿದೆ. ಬರೋಬ್ಬರಿ 18 ದಿನಗಳು ಬಾಬುಗೆ ಬೇಕಾಯಿತು. ಇದರಲ್ಲಿ ಶರಣ್ ಪಾತ್ರವೂ ಇದೆಯೇ ಎನ್ನುವುದು ತಿಳಿದು ಬಂದಿಲ್ಲ.