ತನ್ನ ಬಹುನಿರೀಕ್ಷಿತ 'ಸೂಪರ್' ಚಿತ್ರದ ಬಗ್ಗೆ ಮಾತಿಗಿಳಿದಿರುವ ನಿರ್ದೇಶಕ, ನಟ ಉಪೇಂದ್ರ, ತಾನು ಯಾವತ್ತೂ ಗಿಮಿಕ್ ಮಾಡಿಲ್ಲ. ಜನ ಚಿತ್ರದ ಬಗ್ಗೆ ಮಾತನಾಡಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಆದರೂ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡಲು ಅವರು ನಿರಾಕರಿಸಿದ್ದಾರೆ.
ನಿರೂಪನೆಯಲ್ಲಿ ನಾನು ಕೆಲವು ಹೊಸ ವಿಧಾನಗಳನ್ನು ಅನುಸರಿಸಿದ್ದೇನೆ. ಆದರೆ ಅದನ್ನು ಈಗ ಬಹಿರಂಗಪಡಿಸಲಾರೆ ಎಂದಿರುವ ಉಪ್ಪಿ, ಸಮಾಜ ಮತ್ತು ವ್ಯವಸ್ಥೆಯ ಮೇಲೆ ಈ ಚಿತ್ರದಲ್ಲಿ ದಾಳಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ವ್ಯತಿರಿಕ್ತ ಉತ್ತರ ನೀಡಿದ್ದಾರೆ.
ನಿಮಗೆ ಅಂತಹ ಭಾವನೆ ಬಂದಿರಬಹುದು. ಆದರೆ ನನ್ನ ಪ್ರಕಾರ ನಾನು ಅದನ್ನು ತೆರೆಯ ಮೇಲೆ ತರುತ್ತೇನೆ, ಅಷ್ಟೇ. ಇಲ್ಲಿ ಯಾವುದೇ ಬಲವಂತ ಅಥವಾ ಅದನ್ನು ಸಮಾಜದ ಮೇಲೆ ಹೇರಲು ನಾನು ಹೋಗಿಲ್ಲ ಎಂದರು.
PR
ಉಪೇಂದ್ರ ಯಾವತ್ತೂ ಸಸ್ಪೆನ್ಸ್ ಕಾಯ್ದುಕೊಳ್ಳುವುದು ಮತ್ತು ಗಿಮಿಕ್‌ಗಳನ್ನು ಮಾಡುತ್ತಾರೆ ಎಂಬ ಪ್ರಶ್ನೆಗೂ ಭಿನ್ನ ಉತ್ತರ ಬಂದಿದೆ.
ನಾನು ನನ್ನ ಹಿಂದಿನ ಚಿತ್ರಗಳ ವಿವರಗಳನ್ನು ಕೂಡ ಬಹಿರಂಗಪಡಿಸಿರಲಿಲ್ಲ. 'ಎ' ಸಿನಿಮಾದಲ್ಲಿ ನಾಯಕನಾದ ಹೊತ್ತಿನಿಂದಲೂ ನಾನು ಎಲ್ಲವನ್ನೂ ನನ್ನಲ್ಲೇ ಇಟ್ಟುಕೊಂಡವನು. ಚಿತ್ರದ ಬಗ್ಗೆ ಜನ ಮಾತನಾಡಬೇಕು ಎಂದು ಬಯಸುವವನು ನಾನು. ಅದನ್ನು ಗಿಮಿಕ್ ಎಂದು ಕರೆಯುವುದು ಸರಿಯಲ್ಲ. ಇದು ಹೊಸ ವಿಚಾರಗಳತ್ತ ಗಮನ ಹರಿಸುವ ಯತ್ನ ಮಾತ್ರ ಎಂದರು.
ಜನ ನನ್ನ ಚಿತ್ರವನ್ನು ನೋಡಲು ಬರುವಾಗ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಬರಬೇಕು. ಸಿನಿಮಾವನ್ನು ನೋಡಿ. ಅದು ಕೆಟ್ಟದಾಗಿದೆ ಅಥವಾ ಒಳ್ಳೆಯದಿದೆ ಎಂಬ ನಿಮ್ಮ ಯಾವುದೇ ಅಭಿಪ್ರಾಯವನ್ನು ನಾನು ಸ್ವೀಕರಿಸುತ್ತೇನೆ. ಚಿತ್ರ ನೋಡುಗರಿಗೆ ನಾನು ವಯಸ್ಸಿನ ಮಿತಿಯನ್ನು ಹಾಕಲು ಕೂಡ ಇಷ್ಟಪಡುವುದಿಲ್ಲ. ಎಲ್ಲಾ ವಯೋಮಾನದವರೂ ಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದು ಉಪ್ಪಿ ಹೇಳಿದ್ದಾರೆ.
ಸ್ತ್ರೀ ವಿರೋಧಿ ಎಂಬ ಭಾವನೆ ತಮ್ಮ ಹಿಂದಿನ ಚಿತ್ರಗಳಲ್ಲಿ ಬಿಂಬಿತವಾಗಿದೆಯಲ್ಲವೇ? ನಿಮ್ಮದೇ ಹೆಸರಿನ ಚಿತ್ರದಲ್ಲಿ ಇದು ಭಾರೀ ಸುದ್ದಿ ಮಾಡಿತ್ತು. ಈ ಬಾರಿ ನೀವು ಏನು ಹೇಳಲು ಹೊರಟಿದ್ದೀರಿ ಎಂಬ ಪ್ರಶ್ನೆಗೆ, 'ನೀವು ಹಿಂದೆ ಆಗಿ ಹೋಗಿರುವುದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಮುಂದೆ ನಾನೇನು ಮಾಡುತ್ತಿದ್ದೇನೆ ಎಂಬುದನ್ನು ನೋಡಿ' ಎಂದರು.
ನಿನ್ನೆ, ಇಂದು ಮತ್ತು ನಾಳೆಯ ಚಿತ್ರವಿದು... ಹೀಗೆಂದು ಹೇಳಿರುವುದು ಚಿತ್ರದ ಕ್ಯಾಮರಾಮ್ಯಾನ್ ಅಶೋಕ್ ಕಶ್ಯಪ್. 'ಸೂಪರ್' ಚಿತ್ರವು ಸಮಕಾಲೀನ ಮತ್ತು ಭವಿಷ್ಯದ ವಿಚಾರಗಳನ್ನು ಒಳಗೊಂಡಿದೆ. ಇಂತಹ ಕಲ್ಪನೆಯ ಮೇಲೆ ಕೆಲಸ ಮಾಡಲು ಉಪೇಂದ್ರರಂತಹ ಜೀನಿಯಸ್‌ಗಳಿಂದ ಮಾತ್ರ ಸಾಧ್ಯ ಎಂದು ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದ ಕನ್ನಡ ಅವತರಣಿಕೆಯ ಡಬ್ಬಿಂಗ್ ಬೆಂಗಳೂರಿನಲ್ಲೇ ನಡೆಯುತ್ತಿದೆ. ತೆಲುಗಿನ ಡಬ್ಬಿಂಗ್ ಹೈದರಾಬಾದ್‌ನಲ್ಲಿ ಹಾಗೂ ತಮಿಳು ಚೆನ್ನೈಯಲ್ಲಿ ನಡೆಯುತ್ತಿದೆ. ತಮಿಳು ಚಿತ್ರರಂಗದ ತಂತ್ರಜ್ಞರ ಪ್ರಕಾರ ಈ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗ ಹೆಮ್ಮೆಪಡಬೇಕು. ಹಾಗಿದೆ ಚಿತ್ರ ಎಂದು ಹೇಳುತ್ತಿದ್ದಾರೆ ಎಂದು ಕಶ್ಯಪ್ ವಿವರಣೆ ನೀಡಿದರು.
ಸಿನಿಮಾದಲ್ಲಿ ತಾಜಾ ನಿರೂಪನೆ ಮತ್ತು ಕಲ್ಪನೆಯಿರುವುದು ಅವರಿಗೆ ಅಚ್ಚರಿಯನ್ನುಂಟು ಮಾಡಿದೆ. ಖಂಡಿತಾ ಇದು ಜನರ ಮನಸೂರೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಚಿತ್ರ ಬಹುಶಃ ಡಿಸೆಂಬರ್ ಮೊದಲ ವಾರದಲ್ಲಿ (ಡಿಸೆಂಬರ್ 3) ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ (ತೆಲುಗು) ಬಿಡುಗಡೆಯಾಗಲಿದೆ. ತೆಲುಗು ಆವೃತ್ತಿಯು ವಿದೇಶಗಳಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗುತ್ತದೆ.