ಗೊಂದಲಕ್ಕೀಡಾಗಿದ್ದೀರಾ? ವಿಷಯ ಇಷ್ಟೇ, 'ಸಂಜು ವೆಡ್ಸ್ ಗೀತಾ' ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ರದ್ದಾಗಿದೆ. ಅತ್ತ 'ಜಾನಿ ಮೇರಾ ನಾಮ್' ಚಿತ್ರದ್ದು ಆರಂಭವಾಗಿದೆ. ಎರಡೂ ಚಿತ್ರಗಳಲ್ಲಿ ರಮ್ಯಾ ಹೀರೋಯಿನ್. ಒಂದು ದೋಣಿ ಮುಂದೆ ಹೋಗದೇ ಇದ್ದಾಗ, ಮತ್ತೊಂದು ದೋಣಿಗೆ ಹಾರಿದ್ದಾರೆ.
ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ'ದಲ್ಲಿ ಶ್ರೀನಗರ ಕಿಟ್ಟಿಗೆ ರಮ್ಯಾ ಜೋಡಿ. ಇತ್ತೀಚೆಗಷ್ಟೇ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದ ಚಿತ್ರೀಕರಣ ಇಸ್ತಾನ್‌ಬುಲ್‌ನಲ್ಲಿ ನಡೆಯಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಯೋಜನೆಗಳು ಬದಲಾಗಿವೆ.
ನಾವು ಟರ್ಕಿಯಲ್ಲಿ ಹಾಡೊಂದರ ಚಿತ್ರೀಕರಣ ನಡೆಸಲು ಉದ್ದೇಶಿಸಿದ್ದೆವು. ಆದರೆ ಅಲ್ಲಿನ ವಾತಾವರಣದ ಕಾರಣದಿಂದಾಗಿ ನವೆಂಬರ್ 30ರಂದು ನಾವು ಚಿತ್ರೀಕರಣ ರದ್ದುಗೊಳಿಸಲು ನಿರ್ಧರಿಸಿದೆವು. ಬೇರೆಲ್ಲಾ ಚಿತ್ರೀಕರಣ ಮುಗಿದಿದೆ. ಕೇವಲ ಒಂದು ಹಾಡನ್ನು ಸೇರಿಸಲು ಬಾಕಿಯಿದೆ. ಜನವರಿಯಲ್ಲಿ ಚಿತ್ರ ತೆರೆಗೆ ಬರುತ್ತಿದೆ ಎಂದು ನಾಗಶೇಖರ್ ತಿಳಿಸಿದ್ದಾರೆ.
ಚಿತ್ರತಂಡ ಬೆಂಗಳೂರಿನಿಂದ ಹೊರಟಿಲ್ಲವಾದರೂ, ರಮ್ಯಾ ಮೊದಲೇ ಟರ್ಕಿಯಲ್ಲಿದ್ದರು. ಈಗ ಅವರು ಕೂಡ ವಾಪಸ್ಸಾಗಿದ್ದಾರೆ.
ಅತ್ತ ಪ್ರೀತಂ ಗುಬ್ಬಿ ನಿರ್ದೇಶನದ 'ಜಾನಿ ಮೇರಾ ನಾಮ್' ಚಿತ್ರೀಕರಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆರಂಭವಾಗಿದೆ. ಈ ಚಿತ್ರದಲ್ಲಿ ಕರಿಚಿರತೆ ವಿಜಯ್ ನಾಯಕ. ಹಾಡಿನ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ. ರಮ್ಯಾ ಇವರನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗುಬ್ಬಿ ತಿಳಿಸಿದ್ದಾರೆ.
ಗುಬ್ಬಿಯವರ ವಿಭಿನ್ನ ಚಿತ್ರಕಥೆ ವಿಜಯ್‌ರಿಗೆ ಅಚ್ಚರಿಯನ್ನುಂಟು ಮಾಡಿದೆ. ಭಿನ್ನ ಚಿತ್ರ ಎಂದಿದ್ದಾರೆ ಅವರು. ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿ. ಹರಿಕೃಷ್ಣ. ಎಸ್. ಕೃಷ್ಣ ಕ್ಯಾಮರಾ ಹಿಡಿದಿದ್ದಾರೆ.