ದಕ್ಷಿಣ ಭಾರತದ ಸೆಕ್ಸಿ ತಾರೆ ನಮಿತಾ ಕನ್ನಡದಲ್ಲಿ 'ಬೆಂಕಿ ಬಿರುಗಾಳಿ'ಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆಯೇ ನಿಮ್ಮ ವೆಬ್‌ದುನಿಯಾ ಹೇಳಿತ್ತು. ಅದಕ್ಕೀಗ ಸಲೋನಿ ಕೂಡ ಸೇರ್ಪಡೆಯಾಗುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಈ ಹಿಂದೆ ಬುದ್ಧಿವಂತ, ದುಬೈ ಬಾಬು ಮತ್ತು ಮಿ. ತೀರ್ಥ ಚಿತ್ರಗಳಲ್ಲಿ ನಟಿಸಿರುವ ಮುಂಬೈ ಮೂಲದ ಚತುರ್ಭಾಷಾ ನಟಿ ಸಲೋನಿಗೆ ಬೆಂಕಿ ಬಿರುಗಾಳಿ ನಾಲ್ಕನೇ ಕನ್ನಡ ಸಿನಿಮಾ.
ಭರಪೂರ ಆಸ್ತಿಯ ನಮಿತಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನೀಲಕಂಠ, ಹೂ ಚಿತ್ರಗಳಲ್ಲಿ ಉರುಳು ಸೇವೆ ಮಾಡಿದ್ದವರು. ದರ್ಶನ್ ನಾಯಕತ್ವದ ಇಂದ್ರದಲ್ಲೂ ನಟಿಸಿದ್ದರು. 'ನಮಿತಾ ಐ ಲವ್ ಯೂ' ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಕಿ ಬಿರುಗಾಳಿ ಮತ್ತೊಂದು ಸೇರ್ಪಡೆ.
ವಿಶೇಷವೆಂದರೆ ಈ ಇಬ್ಬರೂ ನಟಿಯರು ದಕ್ಷಿಣ ಭಾರತದವರು ಆಗಿಲ್ಲದೇ ಇರುವುದು ಮತ್ತು ಇಬ್ಬರೂ ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು. ಹಿಂದಿ ಚಿತ್ರಗಳಲ್ಲೂ ನಟಿಸಿದ ದಾಖಲೆ ಹೊಂದಿದ್ದಾರೆ.
ಇವರಿಬ್ಬರಿಗೆ ನಾಯಕ ರಿಷಿ. ಹೊಸ ಹುಡುಗ. ಇಬ್ಬರು ತಾರೆಯರ ನಡುವೆ ಈ ರಿಷಿ ಯಾವ ರೀತಿಯಲ್ಲಿ ಏಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಸುಮಾರು 20 ವರ್ಷಗಳ ಹಿಂದೆ ಕನ್ನಡದಲ್ಲಿ ಬಂದಿದ್ದ ಬೆಂಕಿ ಬಿರುಗಾಳಿಗೂ, ಈ ಬಿರುಗಾಳಿಗೂ ಯಾವುದೇ ಸಂಬಂಧವಿಲ್ಲ. ಅಂದು ವಿಷ್ಣುವರ್ಧನ್ ಮತ್ತು ಶಂಕರ್‌ನಾ ಬೆಂಕಿ ಬಿರುಗಾಳಿಯಾಗಿ ಸಂಚಲನ ಮೂಡಿಸಿದ್ದರು.
ತೆಲುಗಿನಲ್ಲಿ 'ಅಲ್ಲರಿ, ಅಲ್ಲರಿ' ಎಂದು ನಿರ್ದೇಶಿಸಿದ್ದ ಎಸ್.ಕೆ. ಬಶೀದ್ 'ಬೆಂಕಿ ಬಿರುಗಾಳಿ'ಯ ಸೂತ್ರಧಾರರು. ನಿರ್ಮಾಪಕರು ಕೂಡ ಪರಭಾಷೆಯವರು. ಒಟ್ಟಾರೆ ಪರಭಾಷೆಯವರೇ ತುಂಬಿಕೊಂಡಿದ್ದರೂ, ಗೆಲುವು ಸಾಧಿಸುವ ವಿಶ್ವಾಸ ಅವರದ್ದು.
'ಇದು ನನಗೆ ಕನ್ನಡದ ಮೊದಲ ಸಿನಿಮಾ. ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಮಿಲಿತಗೊಂಡ ಈ ಹೊಸ ಸಿನಿಮಾದಲ್ಲಿ ಹೊಸ ಫಾರ್ಮುಲಾ ಇದೆ' ಎಂದಿರುವ ನಿರ್ದೇಶಕ ಬಶೀದ್, ಕನ್ನಡ ಚಿತ್ರಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ನೀಡುತ್ತೇನೆ; ಆರಂಭದಿಂದ ಕಡೆ ತನಕ ಕುತೂಹಲ ಇರುವಂತಹ ಸಿನಿಮಾ ಇದಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.