'ಕೆಂಪೇಗೌಡ'ಕ್ಕೆ ತಡೆ ಸುಳ್ಳುಸುದ್ದಿ: ಸುದೀಪ್, ಬಸಂತ್ ಕುಮಾರ್!
ಶುಕ್ರವಾರ, 25 ಫೆಬ್ರವರಿ 2011( 19:09 IST )
ರಿಮೇಕ್ 'ಕೆಂಪೇಗೌಡ' ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಡೆಯೊಡ್ಡಿದೆ ಎಂಬ ಸುದ್ದಿಯೇ ಸುಳ್ಳು, ಈ ಪತ್ರಕರ್ತರಿಗೆ ಕೆಲಸವಿಲ್ಲ ಎಂಬಂತೆ ಸುದೀಪ್ ಮತ್ತು ಬಸಂತ್ ಕುಮಾರ್ ಪಾಟೀಲ್ ವರ್ತಿಸುತ್ತಿದ್ದಾರೆ. ನೀವು ಮಾಡಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಚಿತ್ರ ಬಿಡುಗಡೆಗೆ ಥಿಯೇಟರುಗಳನ್ನು ಆಯ್ಕೆಗೊಳಿಸುವ ಸಂಬಂಧ ನಾವು ನಡೆಸಿದ್ದೆವು ಎಂದು ತೇಪೆ ಹಚ್ಚುತ್ತಿದ್ದಾರೆ.
ರಾಗಿಣಿ ನಾಯಕಿಯಾಗಿರುವ, ಸುದೀಪ್ ನಟಿಸಿ-ನಿರ್ದೇಶಿಸಿರುವ ತಮಿಳಿನ 'ಸಿಂಗಂ' ಕನ್ನಡ ಆವೃತ್ತಿ 'ಕೆಂಪೇಗೌಡ'ಕ್ಕೆ ಅಡ್ಡಿಯಾಗಿದ್ದು ಸುದೀಪ್ ಈ ಹಿಂದೆ 'ನಂ.73, ಶಾಂತಿನಿವಾಸ' ಚಿತ್ರದಲ್ಲಿ ವಿತರಕರೊಬ್ಬರಿಗೆ ಕೊಡಬೇಕಾಗಿದ್ದ ಬಾಕಿ ಹಣದ ವಿವಾದ. ಜತೆಗೆ 'ವಿಷ್ಣುವರ್ಧನ' ಶೀರ್ಷಿಕೆ ಸಂಬಂಧ ದ್ವಾರಕೀಶ್ ಜತೆ ಸೇರಿಕೊಂಡು ಸುದೀಪ್ ಕೆಎಫ್‌ಸಿಸಿ ವಿರುದ್ಧ ತೊಡೆ ತಟ್ಟಿದ್ದರು ಎಂಬ ಅಂಶಗಳು ಕೂಡ ಕೆಲಸ ಮಾಡಿವೆ ಎಂದು ಹೇಳಲಾಗಿತ್ತು.
PR
ಆದರೆ ಕೆಎಫ್‌ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅಂತಹ ಯಾವುದೇ ಪ್ರಸಂಗಗಳು ನಡೆದಿರುವುದನ್ನು ತಳ್ಳಿ ಹಾಕಿದ್ದಾರೆ. ಇದು ಮಾಧ್ಯಮಗಳದ್ದೇ ಸೃಷ್ಟಿ. ನಾನು ಸುದೀಪ್ ಅವರನ್ನು ಅವಮಾನಿಸುವ ಯಾವುದೇ ಮಾತುಗಳನ್ನು ಆಡಿಲ್ಲ. ಟಿವಿ ಮಾಧ್ಯಮಗಳು ಪದೇ ಪದೇ ಸುಳ್ಳು ಸುದ್ದಿಯನ್ನು ಬಿತ್ತರಿಸಿ ಸುದೀಪ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿದವು. ವಾಸ್ತವದಲ್ಲಿ ವಾಣಿಜ್ಯ ಮಂಡಳಿಯಲ್ಲಿ ಬುಧವಾರ ನಡೆದ ಸಭೆ ಚಿತ್ರದ ಬಿಡುಗಡೆಗೆ ಅಗತ್ಯವಿರುವ ಚಿತ್ರಮಂದಿರಗಳ ಕುರಿತಾಗಿ. ಗೊಂದಲ ಸೃಷ್ಟಿಗೆ ಮಾಧ್ಯಮಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಅನಗತ್ಯವಾಗಿ ಕೆಎಫ್‌ಸಿಸಿಗೆ ಬರಬೇಡಿ. ಏನಾದರೂ ಸುದ್ದಿಯಿದ್ದರೆ ನಾವೇ ನಿಮಗೆ ಹೇಳುತ್ತೇವೆ ಎಂದು ಈ ಎಲ್ಲಾ ನಾಟಕವನ್ನು ಕಣ್ಣಾರೆ ಕಂಡ ಪತ್ರಕರ್ತರಿಗೆ ಬಸಂತ್ ಕುಮಾರ್ ಪಾಟೀಲ್ ಬುದ್ಧಿಮಾತು ಹೇಳಿದರು. ವಾಸ್ತವದಲ್ಲಿ ಸುದೀಪ್ ಮತ್ತು ಪಾಟೀಲ್ ನಡುವಿನ ಮುಸುಕಿನ ಗುದ್ದಾಟವನ್ನು ಭಾಮಾ ಹರೀಶ್ ಸೇರಿದಂತೆ ಹಲವು ಚಿತ್ರ ನಿರ್ಮಾಪಕರು ಮತ್ತು ಕೆಎಫ್‌ಸಿಸಿ ಸಿಬ್ಬಂದಿಗಳೇ ಬಹಿರಂಗಪಡಿಸಿದ್ದರು.
ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಚಿತ್ರರಂಗದ ಪಾಲು ಕುರಿತು ಚರ್ಚೆ ನಡೆಸಲು ಕರೆದಿದ್ದ ಸಭೆಯ ನಂತರ ಸ್ವತಃ ಪಾಟೀಲ್ ಅವರೇ ಸುದೀಪ್ ಅವರನ್ನು ಟೀಕಿಸಿದ್ದರು. ಸುದೀಪ್ ಅವರನ್ನು ಅಪಮಾನಿಸುವ ರೀತಿಯಲ್ಲಿ ಮಾತನಾಡಿದ್ದರು. ಆ ಹೊತ್ತಿಗೆ ಪಾಟೀಲ್ ಅವರ ಟೀಕೆಗಳಿಗೆ ಕೆಲವು ನಿರ್ಮಾಪಕರು ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅದನ್ನು ಪತ್ರಕರ್ತರ ಜತೆ ಹೇಳಿಕೊಂಡಿದ್ದರು ಕೂಡ. ಆದರೆ ಅದ್ಯಾವುದೂ ನಿಜವಲ್ಲ ಎಂದು ಈಗ ಪಾಟೀಲ್ ಕಥೆ ಕಟ್ಟಿದ್ದಾರೆ.
ಸಭೆಯ ನಂತರ ಸುದೀಪ್ ಕೂಡ ಇದೇ ಮಾತುಗಳನ್ನಾಡಿದ್ದಾರೆ. ವಿವಾದವನ್ನು ಬಗೆ ಹರಿಸಲಾಗಿದೆ. ಆದರೆ ಸುದ್ದಿವಾಹಿನಿಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾದುದು ಎಂದು ತಿಪ್ಪೆ ಸಾರಿಸಿದ್ದಾರೆ.
ವಾಸ್ತವದಲ್ಲಿ ಸಾವಿರಾರು ಅಭಿಮಾನಿಗಳೊಂದಿಗೆ ಆಕ್ರೋಶಭರಿತರಾಗಿ ಕಾಣಿಸಿಕೊಂಡದ್ದು ಇದೇ ಸುದೀಪ್. ಈಗ ಮಾತ್ರ ಪ್ರಶ್ನೆಗಳಿಂದ ನುಣುಚಿಕೊಂಡು ಬೇರೆಯದೇ ಉತ್ತರಗಳನ್ನು ನೀಡುತ್ತಿದ್ದಾರೆ.
ಈ ಅಭಿಮಾನಿಗಳನ್ನು ಅಲ್ಲಿ ಸೇರಿಸಿದ್ದು ಯಾರು? ಇದು ಕೆಂಪೇಗೌಡ ಚಿತ್ರದ ಪ್ರಚಾರಕ್ಕಾಗಿ ಮಾಡಲಾಗಿರುವ ಅಗ್ಗದ ಗಿಮಿಕ್ ಆಗಿರಬಹುದೇ ಎಂಬ ಹಲವು ಪ್ರಶ್ನೆಗಳು ಕೂಡ ಈಗ ಹುಟ್ಟಿಕೊಂಡಿವೆ.
ಕೆಂಪೇಗೌಡ ಬಿಡುಗಡೆ ಮಾರ್ಚ್ 10ಕ್ಕೆ... ಹೀಗೆಂದು ಸ್ವತಃ ಸುದೀಪ್ ತನ್ನ ಟ್ವಿಟ್ಟರ್ ಪುಟದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಚಿತ್ರದ ಮೇಲಿನ ಕೆಲವರ ಕೆಂಗಣ್ಣಿನಿಂದಾಗಿ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಮಾರ್ಚ್ 10ಕ್ಕೆ ಬಿಡುಗಡೆ ಆಗೇ ಆಗುತ್ತದೆ. ಮತ್ತೆ ಮುಂದೂಡಲ್ಪಡುವುದಿಲ್ಲ ಎಂದಿದ್ದಾರೆ.