ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ (Leela Baipadithaya | Yakshagana | Yakshagana Academy Award)
ಹಿಂದಿನದು|ಮುಂದಿನದು
ಕಾಳಿಂಗ ನಾವಡರ ಜತೆಗೆ...
ಇನ್ನೂ ಒಂದು ಉಲ್ಲೇಖಿಸಲೇಬೇಕಾದ ವಿಷಯವೊಂದಿದೆ. ಬಡಗು ತಿಟ್ಟಿನ ಮಹಾನ್ ಕಲಾವಿದರಾಗಿ, ಇಂದಿನ ಯುವ ಭಾಗವತರಿಗೆಲ್ಲರಿಗೂ ಅನುಕರಣಯೋಗ್ಯವಾಗಿ ಅಕಾಲ ಮರಣವನ್ನಪ್ಪಿದ್ದ ದಿವಂಗತ ಕಾಳಿಂಗ ನಾವಡರ ಜತೆಗೂ ಅವರು ಕಾರ್ಯಕ್ರಮ ನೀಡಿದ್ದಾರೆ! ಹೌದು. ನನಗಾಗ ಬಹುಶಃ ಏಳೆಂಟು ವರ್ಷ ಇದ್ದಿರಬೇಕು. ಶೃಂಗೇರಿಯಲ್ಲಿ ನಡೆದ ಆ ಕಾರ್ಯಕ್ರಮದ ನೆನಪು ಬಾರದಿದ್ದರೂ, ನಾವಡರು ಅಂದು ಲೀಲಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟುತ್ತಿದೆ. ಆ ಹಾಲ್‌ನಲ್ಲಿ ಕಾಳಿಂಗ ನಾವಡರ ಹಾಡಿಗೆ ಎಷ್ಟು ಶಿಳ್ಳೆ, ಚಪ್ಪಾಳೆ ಬಿದ್ದಿತ್ತೋ, ಅಷ್ಟೇ ಬಲವಾದ ಮೆಚ್ಚುಗೆ ಲೀಲಾ ಹಾಡಿಗೂ ಬಂದಿತ್ತು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೆ! ನಂತರವೂ ಮುಂಬೈಯಲ್ಲಿ ಕಾಳಿಂಗ ನಾವಡರು ಮತ್ತು ಲೀಲಾ ಒಂದೇ ವೇದಿಕೆಯಲ್ಲಿ ಹಾಡಿದ್ದರು.

ಇನ್ನು, ಈಗಿನ ಯಕ್ಷಗಾನ ಪ್ರಸಂಗಗಳು, ಯಕ್ಷಗಾನೀಯವಲ್ಲದ ನಾಟಕೀಯ ಮತ್ತು ಸಿನಿಮೀಯ ಶೈಲಿಗಳು ಲೀಲಾ ಅವರಿಗೆ ನೋವು ತಂದಿವೆ. ಅವರು ಇದನ್ನು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ ಇದೆ. ಹಾಗೆಯೇ ನಾಟಕಕ್ಕೂ ಇದೆ, ಸಿನಿಮಾಕ್ಕೂ ಇದೆ. ಅವುಗಳು ಆಯಾ ಕ್ಷೇತ್ರಗಳಲ್ಲೇ ವರ್ಧನೆಯಾಗಲಿ, ಅದು ಬಿಟ್ಟು ಯಕ್ಷಗಾನ ಹೋಗಿ ನಾಟಕವಾದರೆ, ಅಥವಾ ಭಾಗವತರು ಸಿನಿಮಾದಂತೆ ಹಾಡುಗಳನ್ನು ಹಾಡಿದರೆ, ಯಕ್ಷಗಾನದ ಆ ಕರ್ಣಾನಂದಕರವಾದ ಇಂಪು, ಸೊಗಡು ಇನ್ನೆಲ್ಲಿ? ಟಿವಿ, ಸಿನಿಮಾಗಳು ಹಾಗೂ ಆಧುನಿಕತೆಯ ಋಣಾತ್ಮಕ ಪ್ರಭಾವದಿಂದಾಗಿ ಯಕ್ಷಗಾನ ಪ್ರದರ್ಶನದ ಇಂದಿನ ಅವಧಿಯು ಕೂಡ ಕಿರಿದಾಗಿದೆ. ಆದರೆ, ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ಸವಿಯನ್ನು ಬಲ್ಲವರೇ ಬಲ್ಲರು, ಅಲ್ಲವೇ?

ಸನ್ಮಾನಗಳ ಮಹಾಪೂರ...
ಲೀಲಾ ಅವರನ್ನು ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರಿಯುತ್ತಾರೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ. ವಿಶೇಷವಾಗಿ ಮುಂಬೈಯಲ್ಲಿ ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗಳು, ತಾಲೂಕು ಪ್ರಶಸ್ತಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅವರ ಕಲಾನೈಪುಣ್ಯವನ್ನು. ಅವರ ಮನೆಗೊಮ್ಮೆ ಹೋಗಿ ನೋಡಿದರೆ, ಗೋಡೆಗಳನ್ನೆಲ್ಲಾ ಸನ್ಮಾನ ಪತ್ರಗಳು, ಸ್ಮರಣಿಕೆಗಳು ಮುಚ್ಚಿವೆ! ಮುಂಬಯಿಯಲ್ಲಿ, ದೆಹಲಿಯಲ್ಲಿ, ಬರೋಡದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ ಲೀಲಾ ಅವರಿಗೆ. ಮಂಗಳೂರು ಆಕಾಶವಾಣಿಯಲ್ಲಿ ಅವರ ಧ್ವನಿ ಎಂಬತ್ತರ ದಶಕದಲ್ಲೇ ಕೇಳಿಬರುತ್ತಿತ್ತು.

ಇನ್ನೊಂದು ನೋವಿನ ಸಂಗತಿ ಹೇಳಲೇಬೇಕು. ಅದು ಈ-ಟಿವಿ ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ. ಅದರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತೀರ್ಪು ನೀಡಲೆಂದು ಗಾಯನ ಲೋಕದ ದಿಗ್ಗಜರನ್ನು ಕರೆಸುತ್ತಾರಷ್ಟೇ? ಹಾಗೆ ಬಂದಿದ್ದ ಭಾಗವತರೊಬ್ಬರು, ಎಸ್‌ಪಿಬಿ ಅವರು 'ಯಕ್ಷಗಾನ ಹಾಡುಗಾರಿಕೆಯಲ್ಲಿ ಮಹಿಳೆಯರು ಯಾರೂ ಇಲ್ಲವೇ' ಎಂದು ಕೇಳಿದಾಗ ನಕಾರಾತ್ಮಕ ಉತ್ತರ ನೀಡಿದ್ದು! ಅಂತಹಾ ಅದೆಷ್ಟೋ ಸಂಗತಿಗಳನ್ನು, ಎಲ್ಲ ಕ್ಷೇತ್ರದಲ್ಲಿಯೂ ಇರುವಂತಹಾ ಮಾತ್ಸರ್ಯಗಳನ್ನು, ದಬ್ಬಾಳಿಕೆಗಳನ್ನು, ಉಡಾಫೆಯ ವರ್ತನೆಗಳನ್ನು, ಸಹಿಸಿಕೊಂಡು, ತಾನಾಯಿತು, ತನ್ನ ಯಕ್ಷಗಾನವಾಯಿತು ಎನ್ನುತ್ತಲೇ ನಿರ್ಲಕ್ಷಿಸಿ, ದಿಟ್ಟವಾಗಿ ಮೇಲೆ ಬಂದವರು ಲೀಲಾ.

ನಿವೃತ್ತಿ ಇಲ್ಲದ ಏಕೈಕ ವೃತ್ತಿಯೆಂದರೆ ಅದು ಕಲೆ. ಹೀಗಾಗಿ ಈ ಇಳಿ ಹರೆಯದಲ್ಲಿ ಅವರ ಭಾಗವತಿಕೆಯನ್ನು, ಸಾಂಪ್ರದಾಯಿಕ ಯಕ್ಷಗಾನದ ಸೊಗಡನ್ನು ಗುರುತಿಸಿದವರು ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಕರೆಯುತ್ತಿರುತ್ತಾರೆ. ಇತ್ತೀಚೆಗೆ ತೆಂಕು ಭಾಗದವರಂತೆಯೇ ಬಡಗು ಭಾಗದವರಿಗೂ ಅವರ ಹಾಡುಗಾರಿಕೆ ಬಹುವಾಗಿ ಇಷ್ಟವಾಗಿದೆ. ಬಡಗು ತಿಟ್ಟಿನ ಕಲಾವಿದರೇ ಹೇಳಿದ ಮಾತು - ನಮ್ಮಲ್ಲಿ ಇಂತಹವರು ಇಲ್ಲವಲ್ಲಾ ಅಂತ! ಹೀಗಾಗಿ ಆ ಕಡೆಯಿಂದ ಹೆಚ್ಚು ಹೆಚ್ಚು ಆಹ್ವಾನಗಳು, ಸನ್ಮಾನಗಳು ದೊರೆಯುತ್ತಿವೆ. ಬೆಂಗಳೂರಿನಲ್ಲಿಯೂ ಕೆಲವೊಂದು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಪುಟ್ಟ ಮಕ್ಕಳಿಗೆ ಭಾಗವತಿಕೆ ಪಾಠ ಮಾಡುತ್ತಾರೆ, ಹೆಣ್ಣು ಮಕ್ಕಳ ಯಕ್ಷಗಾನ ತಂಡಕ್ಕೆ ಆಧಾರ ಸ್ತಂಭವೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆ ಬಳಿಯ ತಲಕಳ ಎಂಬ ಊರಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಅವರ ಕಲಾ ಸೇವೆ ನಿರಂತರವಾಗಿದೆ. ಇವಿಷ್ಟು ಇಲ್ಲಿ ಹೇಳಲೇಬೇಕಾಯಿತೇಕೆ ಎಂದರೆ, ಲೀಲಾ ಬೈಪಾಡಿತ್ತಾಯರು ನನ್ನ ಹೆಮ್ಮೆಯ ಅಮ್ಮ!
ಹಿಂದಿನದು|ಮುಂದಿನದು