ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್‌ಡಿಎಯಿಂದ ಯುಪಿಎ ಕಲಿಯಬೇಕಾದುದೇನಿಲ್ಲ: ಸಿಂಗ್ (Prime Minister | Manmohan Singh | Pakistan | Balochistan)
 
PTI
ಈಜಿಪ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರೊಂದಿಗೆ ನೀಡಿದ ಜಂಟಿ ಹೇಳಿಕೆಯನ್ನು ಸಂಸತ್ತಿನಲ್ಲಿ ಬುಧವಾರ ಸಮರ್ಥಿಸಿಕೊಂಡ ಪ್ರಧಾನಿ ಮನಮೋಹನ್ ಸಿಂಗ್, ಇಸ್ಲಾಮಾಬಾದ್ ಬಲೂಚಿಸ್ಥಾನ ಕುರಿತು ಯಾವುದೇ ಮಾಹಿತಿ ಕಡತ ನೀಡಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ನಡೆಸಿರುವ ಉಗ್ರವಾದಿ ಕೃತ್ಯದಲ್ಲಿ ತನ್ನ ಪ್ರಜೆಗಳ ಕೈವಾಡ ಇದೆ ಎಂಬುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ ಎಂದು ಅವರು ನುಡಿದರು.

"ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಯು ಭಾರತದಲ್ಲಿ ನಡೆಸಿರುವ ವಿಧ್ವಂಸಕಾರಿ ಕೃತ್ಯದಲ್ಲಿ ತನ್ನ ಪ್ರಜೆಗಳು ಪಾಲ್ಗೊಂಡಿರುವ ಕುರಿತು ಮೊತ್ತಮೊದಲ ಬಾರಿಗೆ ಪಾಕಿಸ್ತಾನ ಒಪ್ಪಿಕೊಂಡಿದೆ" ಎಂದು ಅವರು ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಾ ನುಡಿದರು.

ತಾನು ಫ್ರಾನ್ಸ್ ಹಾಗೂ ಈಜಿಪ್ಟ್ ಭೇಟಿಗೆ ತೆರಳುವ ಮುಂಚಿತವಾಗಿಯಷ್ಟೆ ಪಾಕಿಸ್ತಾನ ಈ ಹೇಳಿಕೆ ನೀಡಿದೆ. ಅಲ್ಲದೆ ದಾಳಿಯ ಕುರಿತು ಪಾಕಿಸ್ತಾನವು ಯಾವುದೇ ದಾಳಿಯ ಕುರಿತು ಔಪಚಾರಿಕವಾಗಿ ಮಾಹಿತಿ ನೀಡಿರುವುದೂ ಸಹ ಇದೇ ಮೊದಲನೆ ಸಲವಾಗಿದೆ" ಎಂದವರು ನುಡಿದರು.

ಪಾಕಿಸ್ತಾನವು ಭಾರತಕ್ಕೆ 34 ಪುಟಗಳ ಮಾಹಿತಿ ಕಡತವನ್ನು ನೀಡಿದ್ದು, ಇದರಲ್ಲಿ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಸಂಸ್ಥೆಯ ತನಿಖಾ ಪ್ರಕ್ರಿಯೆಯ ವಿಸ್ತೃತ ಯೋಜನೆ ಹಾಗೂ ಕ್ರಮಾಗತಿಯನ್ನು ನೀಡಲಾಗಿದೆ. ಅಲ್ಲದೆ, ಬಂಧಿತ ವ್ಯಕ್ತಿಗಳ ಚಿತ್ರಗಳು ಸೇರಿದಂತೆ ಪ್ರಥಮ ಮಾಹಿತಿ ವರದಿಯ ಪ್ರತಿಯೂ ಸೇರಿದೆ. ಅಲ್ಲದೆ ಮುಂಬೈದಾಳಿಗೆ ಸಂಬಂಧಿಸಿದಂತೆ ಭಾರತ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಪಾಕಿಸ್ತಾನ ಉತ್ತರಿಸಿದೆ ಎಂದವರು ಸದನಕ್ಕೆ ತಿಳಿಸಿದರು.

ಸದನದಲ್ಲಿ ಬಿಜೆಪಿ ಮಾಡಿದ ದಾಳಿಗೆ ಉತ್ತರಿಸಿದ ಅವರು "ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಯುಪಿಎ ಸರ್ಕಾರವು ಎನ್‌ಡಿಎಯಿಂದ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ. ನಾವು ಎನ್‌ಡಿಎ ಸರ್ಕಾರ ಸಾಧಿಸಿದ್ದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಿದ್ದೇವೆ. ಯುಪಿಎ ಪ್ರಯತ್ನದ ಫಲವಾಗಿಯೇ ಪಾಕಿಸ್ತಾನವು ಮೊದಲ ಬಾರಿಗೆ ದಾಳಿಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದೆ" ಎಂದವರು ನುಡಿದರು.

ಭಾರತವು ಸಾಧ್ಯವಿರುವಷ್ಟೂ ಕಠಿಣ ಭಾಷೆಯಲ್ಲಿ ತನ್ನ ಕಳವಳವನ್ನು ಪಾಕಿಸ್ತಾನಕ್ಕೆ ವ್ಯಕ್ತಪಡಿಸಿದೆ ಎಂದು ಪ್ರಧಾನಿ ನುಡಿದರು. ಅಲ್ಲದೆ ಉಗ್ರವಾದಕ್ಕೆ ಸಂಬಂಧಿಸಿದಂತೆ ನಾವು ಶೂನ್ಯಸಹನೆಯನ್ನು ಹೊಂದಿರವುದಾಗಿಯೂ ಅವರು ಹೇಳಿದರು.

ಇದಕ್ಕೂ ಮುಂಚಿತವಾಗಿ, ಚರ್ಚೆಯನ್ನು ಆರಂಭಿಸಿದ ಬಿಜೆಪಿಯ ಯಶವಂತ್ ಸಿನ್ಹಾ ಅವರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿಯವರು ಬಲೂಚಿಸ್ಥಾನದಲ್ಲಿ ಭಾರತದ ಕೈವಾಡದ ಕುರಿತು ಪಾಕಿಸ್ತಾನ ಭಾರತಕ್ಕೆ ಮಾಹಿತಿ ಕಡತ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನದೊಂದಿಗೆ ಸಮಗ್ರ ಮಾತುಕತೆ ವಿಚಾರದಲ್ಲಿ ಭಾರತದ ನಿಲುವಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದ ಅವರು ಭಾರತದ ವಿರುದ್ಧ ಪಾಕ್‌ ನೆಲದಿಂದ ಉಗ್ರವಾದಿ ಚಟುವಟಿಕೆಗಳು ನಿಲ್ಲುವ ತನಕ ಅದರೊಂದಿಗೆ ಮಾತುಕತೆ ಇಲ್ಲ ಎಂದೂ ಅವರು ಸದನದಲ್ಲಿ ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ