ಅರುಣಾಚಲ ಪ್ರದೇಶದ ವಿಷಯದಲ್ಲಿ ಚೀನಾ ನಡೆಸುತ್ತಿರುವ ಕಿತಾಪತಿಯನ್ನು ಮುಖ್ಯಮಂತ್ರಿ ದೋರ್ಜಿ ಖಾಂಡು ತೀವ್ರವಾಗಿ ಖಂಡಿಸಿದ್ದಾರೆ. ಎರಡನೇ ಬಾರಿಗೆ ಭಾನುವಾರ ಸಿಎಂ ಗದ್ದುಗೆಗೆ ಏರಿರುವ ಕಾಂಗ್ರೆಸ್ ಮುಖಂಡ ದೋರ್ಜಿ ಅವರು, ಅರುಣಾಚಲವು ಭಾರತದ ಅವಿಭಾಜ್ಯ ಅಂಗ ಎಂದು ಒತ್ತಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಭಾಗಗಳು ತನಗೆ ಸೇರಿದ್ದು ಎಂದು ಹೇಳಿಕೊಂಡು ಬರುತ್ತಿರುವ ಚೀನಾದ ವಾದವನ್ನು ಬಾಲಿಶ ಎಂದು ಕಿಡಿಕಾರಿದ್ದಾರೆ.
ನವೆಂಬರ್ 8ರಂದು ಅರುಣಾಚಲಕ್ಕೆ ದಲೈಲಾಮಾ ನೀಡಲಿರುವ ಭೇಟಿಯ ಬಗ್ಗೆ ಚೀನಾ ಎತ್ತಿರುವ ಆಕ್ಷೇಪಣೆಗೆ ದೋರ್ಜಿ ಯಾವುದೇ ಬೆಲೆ ನೀಡದೆ, ಲಾಮಾ ಅವರು ಅರುಣಾಚಲಕ್ಕೆ ಬರಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಅವರನ್ನು ಸ್ವಾಗತಿಸಲು ತಾವೆಲ್ಲರೂ ಸಜ್ಜಾಗಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಿ ಬಹುಮತ ಪಡೆದಿತ್ತು. ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ದೋರ್ಜಿ ಖಾಂಡು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದರು.