ಮುಂದುವರಿದ ಜಾತಿಯ ಪುರುಷ ಮತ್ತು ಪರಿಶಿಷ್ಟ ಬುಡಕಟ್ಟಿನ ಮಹಿಳೆ ನಡುವೆ ಮದುವೆಯಾಗದೆ ಹುಟ್ಟಿದ ಮಗು ಮೀಸಲಾತಿಗೆ ಅರ್ಹವಲ್ಲ ಎಂದು ಗುಜರಾತ್ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ.
ರಮೇಶ್ ನಾಯ್ಕ ಎಂಬವರು ಮೇಲ್ಜಾತಿಯ ತಂದೆಗೆ ಹುಟ್ಟಿದವರು ಎಂಬುದನ್ನು ತಿಳಿದುಕೊಂಡ ಇಲ್ಲಿನ ಪಂಚಮಹಲ್ ಜಿಲ್ಲೆಯ ಅಧಿಕಾರಿಗಳು ಅವರ ಜಾತಿ ಪ್ರಮಾಣಪತ್ರವನ್ನು ರದ್ದು ಮಾಡಿದ್ದರು. ಇದನ್ನು ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಇದೀಗ ವಿಭಾಗೀಯ ಪೀಠವೂ ನಾಯ್ಕ ಅವರ ವಿರುದ್ಧ ತೀರ್ಪು ನೀಡಿದೆ.
ಮುಂದುವರಿದ ಸಮುದಾಯದಲ್ಲಿ ಹುಟ್ಟಿ, ಬೆಳೆದ ಅನುಕೂಲವನ್ನು ಅನುಭವಿಸಿದ ವ್ಯಕ್ತಿಯೊಬ್ಬ ಮದುವೆ ಅಥವಾ ಮತಾಂತರ ಮೂಲಕ ಹಿಂದುಳಿದ ಜಾತಿಗೆ ವರ್ಗಾವಣೆಗೊಂಡರೆ ಭಾರತೀಯ ಸಂವಿಧಾನದ ಪ್ರಕಾರ ಆತ ಮೀಸಲಾತಿ ಪಡೆಯಲು ಅರ್ಹನಾಗುವುದಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಅರ್ಜಿದಾರ ನಾಯ್ಕ ಅವರು ಮುಂದುವರಿದ ಜಾತಿಯ ತಂದೆಗೆ ಹುಟ್ಟಿದವರು. ಹಿಂದೂ ಅಧಿನಿಯಮದ ಪ್ರಕಾರ ಜಾತಿಯು ತಂದೆಯಿಂದ ಬರುತ್ತದೆಯೇ ಹೊರತು ಬುಡಕಟ್ಟು ಜನಾಂಗದ ಆತನ ತಾಯಿಯಿಂದಲ್ಲ. ಹಾಗಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳು ಪಡೆದುಕೊಳ್ಳುವ ಸವಲತ್ತುಗಳನ್ನು ಪಡೆಯಲು ಕಾನೂನಿನ ಪ್ರಕಾರ ಅರ್ಜಿದಾರ ಅರ್ಹನಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಬುಡಕಟ್ಟು ಯುವತಿಯನ್ನು ಮದುವೆಯಾದ ನಂತರ ತನ್ನ ತಂದೆಯನ್ನು ಅವರ ಸಮಾಜ ತ್ಯಜಿಸಿದ ಕಾರಣ ನಾನು ಬುಡಕಟ್ಟು ಸಮಾಜದಲ್ಲೇ ಹುಟ್ಟಿದವನು ಮತ್ತು ಬೆಳೆದವನು ಎಂದು ನಾಯ್ಕ ವಾದಿಸಿದ್ದರು.