ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಭಾರತಕ್ಕೆ ಸಂಬಂಧಪಟ್ಟ ಅಮೂಲ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಇಸ್ಲಾಮಾಬಾದ್‌ನಲ್ಲಿ ಭಾರತ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ ದೇಶದ್ರೋಹಿ ಮಹಿಳಾ ಅಧಿಕಾರಿಯನ್ನು ಮಾಧುರಿ ಗುಪ್ತಾ ಎಂದು ಗುರುತಿಸಲಾಗಿದ್ದು, ಈಕೆ ಪಾಕಿಸ್ತಾನದ ರಾಜಧಾನಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಯಲ್ಲಿದ್ದಳು.
ಈಕೆ ಭಾರತದ ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಭಾರತದ ವಿದೇಶಾಂಗ ಇಲಾಖೆಯು, ಸಾರ್ಕ್ ಶೃಂಗಸಭೆಯ ಕುರಿತು ಮಾತುಕತೆ ನಡೆಸುವುದಿದೆ ಎಂಬ ಕಾರಣ ನೀಡಿ ಆಕೆಯನ್ನು ನಾಲ್ಕು ದಿನಗಳ ಹಿಂದೆಯೇ ನವದೆಹಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಬಂಧಿಸಿದೆ.
ದೆಹಲಿಯ ಉರ್ದು ಪರಿಣತೆಯೀಕೆ... ಕಳೆದ ಎರಡು ವರ್ಷದಿಂದ ಈಕೆ ಪಾಕಿಸ್ತಾನಕ್ಕೆ ನಿರಂತರ ಮಾಹಿತಿ ರವಾನೆ ಮಾಡುತ್ತಿದ್ದಳು ಎಂಬ ಆರೋಪದ ಮೇಲೆ ಗುಪ್ತಾಳನ್ನು ಸೋಮವಾರ ರಾತ್ರಿಯೇ ಬಂಧಿಸಲಾಗಿದೆ. ಉರ್ದು ಭಾಷೆಯಲ್ಲಿ ಪರಿಣತಿ ಹೊಂದಿರುವ ಈಕೆ 53ರ ಅವಿವಾಹಿತೆ ಮತ್ತು ಐಎಫ್‌ಎಸ್ ಬಿ ಗ್ರೇಡ್ ಅಧಿಕಾರಿಯಾಗಿದ್ದು, ದೆಹಲಿ ನಿವಾಸಿ.
ಗುಪ್ತಾ ಪಾಕಿಸ್ತಾನದ ಗುಪ್ತಚರೆಯಾಗಿ ಭಾರತೀಯ ದೂತವಾಸ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದು ಕಳೆದ ಕೆಲವು ಸಮಯದ ಹಿಂದೆಯೇ ಭಾರತದ ಗಮನಕ್ಕೆ ಬಂದಿತ್ತು. 8-9 ತಿಂಗಳುಗಳ ಹಿಂದೆಯೇ ಆಕೆಯ ವಿರುದ್ಧ ಬಂದ ದೂರು ಮತ್ತು ಸಂಶಯಗಳ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಾ ಬಂದಿದ್ದ ದೇಶವು, ಕೊನೆಗೂ ಆಕೆಯನ್ನು ಸೆರೆ ಹಿಡಿದಿದೆ ಎಂದು ಮೂಲಗಳು ಹೇಳಿವೆ.
ಪೂರ್ವ ದೆಹಲಿ ನಿವಾಸಿಯಾಗಿರುವ ಗುಪ್ತಾಳನ್ನು ನಿನ್ನೆ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುಪ್ತಾ ವಿರುದ್ಧ ಸರಕಾರಿ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
'ರಾ' ವಿಭಾಗವೂ ಭಾಗಿ? ಇದುವರೆಗೂ ಈ ಸುದ್ದಿ ಖಚಿತವಾಗಿಲ್ಲ. ಆದರೆ ಮೂಲಗಳ ಪ್ರಕಾರ ಭಾರತದ ಬೇಹುಗಾರಿಕಾ ಸಂಸ್ಥೆ 'ರಾ' ಅಥವಾ 'ಸಂಶೋಧನಾ ಮತ್ತು ವಿಶ್ಲೇಷಣಾ ಸಂಸ್ಥೆ'ಯ ಇಸ್ಲಾಮಾಬಾದ್ ಘಟಕದ ಮುಖ್ಯಸ್ಥ ಆರ್.ಕೆ. ಶರ್ಮಾ ಕೂಡ ದೇಶದ್ರೋಹದ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಇದೀಗ ಬಂಧಿತಳಾಗಿರುವ ಮಾಧುರಿ ಗುಪ್ತಾ ಇಸ್ಲಾಮಾಬಾದ್‌ನ 'ರಾ' ಕಚೇರಿಯಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಳು. ಆದರೆ 'ರಾ' ಕಚೇರಿಯ ಮುಖ್ಯಸ್ಥ ಶರ್ಮಾರಿಗೆ ಮಾಧುರಿ ಪಾಕಿಸ್ತಾನದ ಮೂಲಗಳಿಗೆ ಮಾಹಿತಿ ಹಸ್ತಾಂತರಿಸುತ್ತಾಳೆ ಎಂಬುದು ತಿಳಿದಿತ್ತೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ.
ಇನ್ನೂ ಹಲವರಿರಬಹುದು... ಮೂಲಗಳ ಪ್ರಕಾರ ಈಗ ಸಿಕ್ಕಿಬಿದ್ದಿರುವುದು ಮಾಧುರಿ ಗುಪ್ತಾ ಮಾತ್ರ. ಆದರೆ ಈಕೆಗೆ ಸಹಕರಿಸಿದ ಇನ್ನೂ ಕೆಲವು ಅಧಿಕಾರಿಗಳು ಇಸ್ಲಾಮಾಬಾದ್ ರಾಯಭಾರ ಕಚೇರಿ ಅಥವಾ ಇನ್ನಿತರ ಕಡೆ ಇರಬಹುದು ಎಂದು ಶಂಕಿಸಲಾಗುತ್ತಿದೆ.
ಈ ಹಿಂದೆ ದೆಹಲಿ, ಕೌಲಾಲಂಪುರಗಳಲ್ಲೂ ಕೆಲಸ ಮಾಡಿರುವ ಗುಪ್ತಾ 30 ವರ್ಷಗಳಿಂದ ಭಾರತ ಸರಕಾರದ ಸೇವೆಯಲ್ಲಿದ್ದಾಳೆ. ಹಾಗಾಗಿ ಸಾಕಷ್ಟು ಅಧಿಕಾರಿಗಳ ಸಂಪರ್ಕ ಈಕೆಗೆ ಇರುವ ಸಾಧ್ಯತೆಗಳಿವೆ. ಆದರೆ ಇತರ ಯಾವುದೇ ಅಧಿಕಾರಿಗಳ ವಿಚಾರಣೆ ಅಥವಾ ಬಂಧನದ ಕುರಿತು ಮಾಹಿತಿಗಳು ಲಭ್ಯವಾಗಿಲ್ಲ.
ಮಾಧುರಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಜತೆ ನೇರವಾಗಿ ಸಂಬಂಧ ಹೊಂದಿದ್ದಳೇ ಎಂಬ ಕುರಿತೂ ಖಚಿತ ಮಾಹಿತಿಗಳಿಲ್ಲ.
ಪಾಕಿಸ್ತಾನದಲ್ಲಿ ಇದೇ ಮೊದಲು... ವಿಶ್ವದಾದ್ಯಂತ ರಾಯಭಾರ ಕಚೇರಿಗಳನ್ನು ಭಾರತದ ರಾಯಭಾರ ಕಚೇರಿಯಲ್ಲಿ ಈ ರೀತಿ ಗೂಢಚರ್ಯೆ ನಡೆಸುತ್ತಿರುವುದು ಇದೇ ಮೊದಲ ಬಾರಿಯಲ್ಲವಾದರೂ, ಪಾಕಿಸ್ತಾನದಲ್ಲಿ ಭಾರತದ ಅಧಿಕಾರಿಯೊಬ್ಬರು ಬೇಹುಗಾರಿಕೆ ನಡೆಸಿರುವುದು ಇದೇ ಮೊದಲು.
ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ ಕೆ.ಸಿ. ಸಿಂಗ್ ಅವರ ಪ್ರಕಾರ ಈಕೆ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಮಹತ್ವದ ದಾಖಲೆಗಳ ವಿಚಾರ ಈಕೆಗೆ ತಿಳಿದಿರುವ ಸಾಧ್ಯತೆ ಕಡಿಮೆ. ಈ ಅಧಿಕಾರಿಗಳನ್ನು ರಾಜಕೀಯ ವಿಭಾಗದಿಂದ ದೂರ ಇಡಲಾಗಿರುತ್ತದೆ ಎನ್ನುತ್ತಾರೆ.
ಪಾಕ್ ರಾಯಭಾರ ಕಚೇರಿಯ ವಿವರ... ಇಸ್ಲಾಮಾಬಾದ್‌ನ ಡಿಪ್ಲೋಮ್ಯಾಟಿಕ್ ಎನ್‌ಕ್ಲೇವ್ ಕಟ್ಟಡದಲ್ಲಿ ಭಾರತೀಯ ರಾಯಭಾರ ಕಚೇರಿಯಿದ್ದು, ಇಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿಗಳು ಭಾರತ ಸರಕಾರದ ಆಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು, ಪಾಸ್‌ಪೋರ್ಟ್-ವೀಸಾ ಮುಂತಾದ ಹಲವು ಪ್ರಮುಖ ವಿಚಾರಗಳನ್ನು ಈ ಅಧಿಕಾರಿಗಳು ನಿರ್ವಹಿಸುತ್ತಾರೆ.
ಈ ರಾಯಭಾರ ಕಚೇರಿಯ ಮುಖ್ಯ ರಾಜತಾಂತ್ರಿಕರಾಗಿ ಶರತ್ ಸಬರ್ವಾಲ್ ಮತ್ತು ಉಪ ರಾಯಭಾರಿಯಾಗಿ ರಾಹುಲ್ ಕುಲ್‌ಶ್ರೇಥ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದರ ರಾಜಕೀಯ ವಿಭಾಗದಲ್ಲಿ ಕಾನೂನು ಸಲಹೆಗಾರರಾಗಿ ಜಿ.ವಿ. ಶ್ರೀನಿವಾಸ್, ಪ್ರಥಮ ಕಾರ್ಯದರ್ಶಿಯಾಗಿ ಬಿ.ಎಸ್. ಪ್ರಧಾನ್, ಆರ್ಥಿಕ ಮತ್ತು ಹಣಕಾಸು ವಿಭಾಗದ ಸಲಹೆಗಾರರಾಗಿ ರಾಜಿಂದರ್ ಕುಮಾರ್ ಶರ್ಮಾ, ಕಾನ್ಸ್ಯುಲರ್ ಮತ್ತು ವೀಸಾ ವಿಭಾಗದ ಸಲಹೆಗಾರರಾಗಿ ಸುಹೇಲ್ ಆಜಾದ್ ಖಾನ್, ಎರಡನೇ ಕಾರ್ಯದರ್ಶಿಯಾಗಿ ಎಂ. ಸುಬ್ರಮಣ್ಯನ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಮೊದಲ ಕಾರ್ಯದರ್ಶಿಯಾಗಿ ಸಿದ್ಧಾರ್ಥ್ ಝುತ್ಸಿ ಇದ್ದರೆ, ಎರಡನೇ ಕಾರ್ಯದರ್ಶಿಯಾಗಿ ಇದೀಗ ಬಂಧಿತಳಾಗಿರುವ ಮಾಧುರಿ ಗುಪ್ತಾ ಕೆಲಸ ಮಾಡುತ್ತಿದ್ದಳು.
ಉಳಿದಂತೆ ಸಾಂಸ್ಕೃತಿಕ ವಿಭಾಗದ ಪ್ರಥಮ ಕಾರ್ಯದರ್ಶಿಯಾಗಿ ಜನಾರ್ದನ್ ಸಿಂಗ್, ರಕ್ಷಣಾ ಸಲಹೆಗಾರನಾಗಿ ಬ್ರಿಗೇಡಿಯರ್ ಶ್ರವಣ್ ಕುಮಾರ್ ಪತ್ಯಾಲ್, ವಾಯುದಳದ ಸಲಹೆಗಾರ ಕ್ಯಾಪ್ಟನ್ ಪಿ.ಎನ್. ಕೌಶಿಕ್, ನೌಕಾದಳದ ಸಲಹೆಗಾರನಾಗಿ ಕ್ಯಾಪ್ಟನ್ ರಾಹುಲ್ ವಿಲಾಸ್ ಗೋಖಲೆ, ಆಡಳಿತ ವಿಭಾಗದಲ್ಲಿ ಭಿಮಾಲ್ ಸೈಗಲ್, ಸಿ.ಎಸ್. ಶರ್ಮಾ ಮತ್ತು ಆರ್.ಕೆ. ಅಹೆರ್ವಾರ್ ಕೆಲಸ ಮಾಡುತ್ತಿದ್ದಾರೆ.