ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಗಲ್ಲು ಖಾಯಂ; ಬಾಂಬೆ ಹೈಕೋರ್ಟ್ ತೀರ್ಪು (Ujjwal Nikam | Ajmal Kasab | Bombay High Court | Mumbai attack)
ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ವಿಶೇಷ ನ್ಯಾಯಾಲಯವು ಪ್ರಕಟಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಇಂದು ಎತ್ತಿ ಹಿಡಿದಿದ್ದು, ಗಲ್ಲು ಶಿಕ್ಷೆಯನ್ನು ಖಚಿತಪಡಿಸಿದೆ. ಆದರೆ ಇಬ್ಬರು ಭಾರತೀಯರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ಖುಲಾಸೆಗೊಳಿಸಿದೆ.

ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಕಸಬ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದ್ದು, ಮರಣ ದಂಡನೆ ಖಚಿತಪಡಿಸುವ ಸರಕಾರದ ಅರ್ಜಿಯನ್ನು ಪುರಸ್ಕರಿಸಿದೆ.

ಏಳು ಮಂದಿ ಸಾವಿಗೆ ಕಸಬ್ ಕಾರಣ...
ಮುಂಬೈ ದಾಳಿಯ ಸಂದರ್ಭದಲ್ಲಿ ಏಳು ಮಂದಿಯ ಸಾವಿಗೆ ಕಸಬ್ ನೇರ ಜವಾಬ್ದಾರನಾಗಿದ್ದಾನೆ ಎಂದು ಬಾಂಬೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಮುಂಬೈ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್ ಸೇರಿದಂತೆ ಏಳು ಮಂದಿಯನ್ನು ಕೊಂದಿರುವುದು ಕಸಬ್ ಎನ್ನುವುದು ಸಾಬೀತಾಗಿದೆ. ಕಸಬ್ ಮತ್ತು ಅಬೂ ಇಸ್ಮಾಯಿಲ್ ಇಬ್ಬರು ಸೇರಿಕೊಂಡು 56 ಮಂದಿಯನ್ನು ಕೊಂದು ಹಾಕಿದ್ದಾರೆ. ಇದಕ್ಕೆ ಮರಣ ದಂಡನೆಯೇ ಸೂಕ್ತ ಶಿಕ್ಷೆ ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
PTI

ನ್ಯಾಯಾಲಯದ ಮುಂದೆ ಇದ್ದ ಅರ್ಜಿಗಳು:
1) ವಿಶೇಷ ನ್ಯಾಯಾಲಯವು ಕಸಬ್‌ಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಖಚಿತಪಡಿಸಬೇಕು. ಇದನ್ನು ಮಹಾರಾಷ್ಟ್ರ ಸರಕಾರವು ತನ್ನ ವಕೀಲ ಉಜ್ವಲ್ ನಿಕ್ಕಂ ಮೂಲಕ ಸಲ್ಲಿಸಿತ್ತು.
2) ವಿಶೇಷ ನ್ಯಾಯಾಲಯವು ಪ್ರಕಟಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕಸಬ್ ತನ್ನ ವಕೀಲರ ಮೂಲಕ ಸಲ್ಲಿಸಿದ್ದ ಮೇಲ್ಮನವಿ.
3) ಶಂಕಿತ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ಮಹಾರಾಷ್ಟ್ರ ಸರಕಾರವು ಸಲ್ಲಿಸಿದ್ದ ಮೇಲ್ಮನವಿ.

ಇದರಲ್ಲಿ ಮೊದಲನೆ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಕಸಬ್ ದೇಶದ ವಿರುದ್ಧ ಯುದ್ಧ ಸಾರಿದ್ದಾನೆ. ನೂರಾರು ಅಮಾಯಕರ ಸಾವಿಗೆ ಕಾರಣನಾಗಿದ್ದಾನೆ ಎಂಬ ನಿಕ್ಕಂ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ಎರಡನೇ ಅರ್ಜಿ ಉಗ್ರ ಕಸಬ್‌ನದ್ದು. ಆತನ ಪರವಾಗಿ ಅಮೀನ್ ಸೋಲ್ಕರ್, ಸಂತೋಷ್ ದೇಶಪಾಂಡೆ ಮತ್ತು ಫರ್ಹಾನಾ ಶಾ ವಾದಿಸಿದ್ದರು. ಕಸಬ್ ಒಬ್ಬ ಸುಪಾರಿ ಹಂತಕನೇ ಹೊರತು, ಪಿತೂರಿದಾರನಲ್ಲ. ಆತ ತಪ್ಪೊಪ್ಪಿಗೆ ನೀಡಿರುವುದು ಪೊಲೀಸರ ಬಲವಂತದಿಂದ ಎಂದು ಅವರು ಪ್ರತಿಪಾದಿಸಲು ಯತ್ನಿಸಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಮೂರನೇ ಅರ್ಜಿ ಅನ್ಸಾರಿ ಮತ್ತು ಸಬಾವುದ್ದೀನ್‌ಗೆ ಸಂಬಂಧಪಟ್ಟದ್ದು. ಇವರು ಮುಂಬೈ ದಾಳಿಕೋರರಿಗೆ ನಗದ ನಕ್ಷೆ ಮತ್ತಿತರ ಸಹಕಾರ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಪೂರಕ ಸಾಕ್ಷ್ಯಗಳ ಕೊರತೆ ಇದೆ ಎಂದು ಹೇಳಿದ್ದ ವಿಶೇಷ ನ್ಯಾಯಾಲಯ, ಇಬ್ಬರನ್ನೂ ಖುಲಾಸೆಗೊಳಿಸಿತ್ತು. ಆ ತೀರ್ಪನ್ನು ಬಾಂಬೆ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.

ಕಸಬ್‌ ಮುಂದಿನ ಹೆಜ್ಜೆಯೇನು?
ಕಸಬ್ ಮತ್ತು ಮಹಾರಾಷ್ಟ್ರ ಸರಕಾರಗಳ ಮುಂದಿನ ಹೆಜ್ಜೆ ಸರ್ವೋಚ್ಚ ನ್ಯಾಯಾಲಯ. ಮರಣ ದಂಡನೆಯನ್ನು ಖಚಿತಪಡಿಸಬೇಕು ಎಂದು ಮಹಾರಾಷ್ಟ್ರ ಸರಕಾರ ಹಾಗೂ ಮರಣ ದಂಡನೆಯನ್ನು ರದ್ದು ಮಾಡಬೇಕು ಎಂದು ಕಸಬ್ ಸುಪ್ರೀಂ ಕೋರ್ಟಿಗೆ ಹೋಗಬಹುದು.

ಪ್ರಕರಣದ ಕೂಲಂಕಷ ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡುತ್ತದೆ. ಇದೇ ಅಂತಿಮ. ಸುಪ್ರೀಂ ತೀರ್ಪಿನ ಬಳಿಕ ಕಸಬ್ ಅಥವಾ ಸರಕಾರಕ್ಕೆ ಅದನ್ನು ಪ್ರಶ್ನಿಸುವ ಯಾವುದೇ ಹಂತಗಳು ಬಾಕಿ ಉಳಿದಿರುವುದಿಲ್ಲ. ಅಲ್ಲೂ ಗಲ್ಲು ಖಚಿತವಾದರೆ, ಕಸಬ್‌ಗೆ ಉಳಿಯುವ ಕೊನೆಯ ಆಯ್ಕೆ ರಾಷ್ಟ್ರಪತಿಗಳ ಕ್ಷಮಾದಾನದ್ದು.
ಇವನ್ನೂ ಓದಿ