ಬರೋಬ್ಬರಿ ಒಂಬತ್ತು ವರ್ಷಗಳ ನಂತರ ಕೊನೆಗೂ ಗೋದ್ರಾ ಹತ್ಯಾಕಾಂಡದ ತೀರ್ಪು ಹೊರ ಬಿದ್ದಿದೆ. ಈ ಪ್ರಕರಣದಲ್ಲಿ ನ್ಯಾಯಾಂಗವು ನಡೆದು ಬಂದ ದಾರಿ ಹೇಗಿತ್ತು? ವಿಚಾರಣೆ-ತೀರ್ಪು ವಿಳಂಬದ ಬೆಳವಣಿಗೆಗಳು ಏನೇನು ಎಂಬ ಪಕ್ಷಿನೋಟ ಇಲ್ಲಿದೆ.
ಪ್ರಕರಣದಲ್ಲಿ ಒಟ್ಟು 134 ಆರೋಪಿಗಳು. ಅವರಲ್ಲಿ 16 ಮಂದಿ ಇನ್ನೂ ಭೂಗತರು. 13 ಮಂದಿಯನ್ನು ಈ ಮೊದಲೇ ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. 15 ಮಂದಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಐವರು ಆರೋಪಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ. 85 ಮಂದಿ ಪ್ರಸಕ್ತ ಹೊರ ಬಂದಿರುವ ತೀರ್ಪಿಗೆ ತಕ್ಷಣದ 'ಫಲಾನುಭವಿ'ಗಳು.
ಫೆಬ್ರವರಿ 27, 2002: ಬಿಹಾರದ ದರ್ಭಾಂಗಾದಿಂದ ಗುಜರಾತಿನ ಅಹಮದಾಬಾದ್‌ಗೆ ತೆರಳುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್6 ಬೋಗಿಗೆ ಗೋದ್ರಾ ರೈಲ್ವೆ ನಿಲ್ದಾಣ ಸಮೀಪ ಬೆಂಕಿ. 59 ಕರಸೇವಕರ ಸಜೀವ ದಹನ.
ಫೆಬ್ರವರಿ-ಮಾರ್ಚ್, 2002: ಗುಜರಾತ್ ಪೊಲೀಸರಿಂದ ಅಪ್ರಾಪ್ತರು ಸೇರಿದಂತೆ ನೂರಾರು ಮಂದಿಯ ಬಂಧನ, ಚಿತ್ರಹಿಂಸೆ ಆರೋಪ. 1,500 ಮಂದಿಯ ವಿರುದ್ಧ ಎಫ್ಐಆರ್.
ಫೆಬ್ರವರಿ-ಮಾರ್ಚ್, 2002: ಗುಜರಾತಿನಾದ್ಯಂತ ಕೋಮು ಹಿಂಸಾಚಾರ. 1,200ಕ್ಕೂ ಹೆಚ್ಚು ಮಂದಿ ಬಲಿ. ಬಲಿಯಾದ ಬಹುತೇಕ ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು.
ಮಾರ್ಚ್ 3, 2003: ಪ್ರಕರಣದ 134 ಆರೋಪಿಗಳ ಮೇಲೆ ಪೋಟಾ ಜಾರಿ.
ಮಾರ್ಚ್ 6, 2002: ಗೋದ್ರಾ ಮತ್ತು ಗೋದ್ರೋತ್ತರ ಗಲಭೆಗಳ ಕುರಿತು ನ್ಯಾಯಾಂಗ ತನಿಖೆಗೆ ಗುಜರಾತ್ ಸರಕಾರ ಆದೇಶ.
ಮಾರ್ಚ್ 25, 2002: ಕೇಂದ್ರ ಸರಕಾರದ ಒತ್ತಡದ ಮೇರೆಗೆ ಎಲ್ಲಾ ಆರೋಪಿಗಳ ವಿರುದ್ಧದ ಪೋಟಾ ಅಮಾನತು.
ಮೇ 27, 2002: ಪ್ರಕರಣ ಸಂಬಂಧ 54 ಮಂದಿಯ ಮೇಲೆ ಪೋಟಾ ಹೊರತುಪಡಿಸಿದ ಆರೋಪಪಟ್ಟಿ. ಇದಕ್ಕೆ ಮತ್ತಷ್ಟು ಸೇರ್ಪಡೆ. ಆರೋಪಪಟ್ಟಿಯಲ್ಲಿನ ಸಂಖ್ಯೆ 134ಕ್ಕೆ ಏರಿಕೆ.
ಫೆಬ್ರವರಿ 18, 2003: ಬಿಜೆಪಿಯು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಆರೋಪಿಗಳ ವಿರದು್ಧ ಉಗ್ರ ನಿಗ್ರಹ ಕಾಯ್ದೆ ಮರು ಜಾರಿ.
ಏಪ್ರಿಲ್ 2003: ಗೋದ್ರಾ ಹತ್ಯಾಕಾಂಡದ ಪಿತೂರಿ ನಡೆದದ್ದು ಇಲ್ಲಿನ ಅಮಾನ್ ಅತಿಥಿ ಗೃಹದಲ್ಲಿ. 2002ರ ಫೆಬ್ರವರಿ 26ರಂದು ಮೌಲಾನಾ ಹುಸೇನ್ ಉಮರ್ಜಿ ನೇತೃತ್ವದಲ್ಲಿ ಈ ಕೃತ್ಯವನ್ನು ನಡೆಸಲಾಗಿತ್ತು ಎಂದು ಜಬೀರ್ ಬಿನ್ಯಾಮಿನ್ ಬೆಹ್ರಾ ಎಂಬಾತನಿಂದ ಗುಜರಾತ್ ಪೊಲೀಸರಿಗೆ ತಪ್ಪೊಪ್ಪಿಗೆ.
ಮಾರ್ಚ್ 2003: ಆರೋಪಿಗಳ ವಿರುದ್ಧ ಪೋಟಾ ವಿರೋಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಂದ ಸುಪ್ರೀಂ ಕೋರ್ಟಿಗೆ ದೂರು. ಪ್ರಕರಣವನ್ನು ಗುಜರಾತ್ ಹೈಕೋರ್ಟ್‌ಗೆ ವಹಿಸಿದ ಸುಪ್ರೀಂ.
ನವೆಂಬರ್ 2003: ಪೋಟಾ ವಿಚಾರವು ಬಗೆಹರಿಯುವವರೆಗೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ.
ಸೆಪ್ಟೆಂಬರ್ 4, 2004: ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಕೇಂದ್ರ ಸಂಪುಟದಿಂದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಅವರ ನೇತೃತ್ವದ ಆಯೋಗವೊಂದನ್ನು ರಚಿಸಲು ನಿರ್ಧಾರ.
ಸೆಪ್ಟೆಂಬರ್ 21, 2004: ನೂತನ ಚುನಾಯಿತ ಯುಪಿಎ ಸರಕಾರವು ಪೋಟಾವನ್ನು ಹಿಂತೆಗೆದುಕೊಂಡಿದ್ದರಿಂದ, ಆರೋಪಿಗಳ ವಿರುದ್ಧದ ಪೋಟಾ ಮರು ಪರಿಶೀಲನೆಗೆ ಕೇಂದ್ರ ನಿರ್ಧಾರ.
ಜನವರಿ 17, 2005: ಯುಸಿ ಬ್ಯಾನರ್ಜಿ ಪ್ರಾಥಮಿಕ ವರದಿ ಸಲ್ಲಿಕೆ. ಎಸ್6 ಬೋಗಿಯಲ್ಲಿ ಘಟಿಸಿದ ಅಗ್ನಿ ಅನಾಹುತ 'ಆಕಸ್ಮಿಕ'ವಾಗಿರಬಹುದು. ಹೊರಗಿನಿಂದ ನಡೆದ ದಾಳಿಯಿಂದ ಬೆಂಕಿ ಉಂಟಾಗಿದೆ ಎಂಬ ಸಾಧ್ಯತೆಗಳನ್ನು ತಳ್ಳಿ ಹಾಕಿದ ಸಮಿತಿ.
ಮೇ 16, 2005: ಪೋಟಾ ಕಾಯ್ದೆಯಡಿ ಆರೋಪಿಗಳ ಮೇಲೆ ಆರೋಪ ಹೊರಿಸದಂತೆ ಪೋಟಾ ಪರಿಶೀಲನಾ ಸಮಿತಿ ಸಲಹೆ.
ಅಕ್ಟೋಬರ್ 13, 2006: ಯುಸಿ ಬ್ಯಾನರ್ಜಿ ಸಮಿತಿಯ ರಚನೆಯೇ ಕಾನೂನು ಬಾಹಿರವಾದದ್ದು ಮತ್ತು ಅಸಂವಿಧಾನಿಕ ಎಂದ ಗುಜರಾತ್ ಹೈಕೋರ್ಟ್. ನಾನಾವತಿ-ಶಾ ಆಯೋಗ ಈಗಾಗಲೇ ಗಲಭೆ ಸಂಬಂಧಿ ಪ್ರಕರಣಗಳ ತನಿಖೆ ನಡೆಸುತ್ತಿರುವುದರಿಂದ ಬ್ಯಾನರ್ಜಿ ತನಿಖೆಯ ಫಲಿತಾಂಶಗಳು ಅನೂರ್ಜಿತ ತೀರ್ಪು.
ಮೇ 26, 2008: ಗೋದ್ರಾ ಕರಸೇವಕರ ಹತ್ಯಾಕಾಂಡ ಮತ್ತು ಎಂಟು ಗೋದ್ರೋತ್ತರ ಹಿಂಸಾಚಾರ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ದಳವನ್ನು (ಸಿಟ್) ರಚಿಸಿದ ಸುಪ್ರೀಂ ಕೋರ್ಟ್.
ಸೆಪ್ಟೆಂಬರ್ 18, 2008: ಗೋದ್ರಾ ರೈಲು ದುರಂತದ ತನಿಖಾ ವರದಿಯನ್ನು ಸಲ್ಲಿಸಿದ ನಾನಾವತಿ ಆಯೋಗ. ಕರಸೇವಕರ ಹತ್ಯೆ ವ್ಯವಸ್ಥಿತ ಸಂಚು, ಗುಂಪೊಂದು ಎಸ್6 ಬೋಗಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿತ್ತು ಎಂದು ವರದಿ ನೀಡಿದ ಆಯೋಗ.
ಫೆಬ್ರವರಿ 12, 2009: ಈ ಪ್ರಕರಣದಲ್ಲಿ ಪೋಟಾ ಅನ್ವಯವಾಗದು ಎಂದ ಪೋಟಾ ಪರಿಶೀಲನೆ ಸಮಿತಿ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್.
ಫೆಬ್ರವರಿ 20, 2009: ಆರೋಪಿಗಳ ವಿರುದ್ಧದ ಪೋಟಾ ಆರೋಪಗಳನ್ನು ಕೈ ಬಿಟ್ಟಿರುವ ಹೈಕೋರ್ಟ್ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಗೋದ್ರಾ ರೈಲು ದುರಂತದ ಬಲಿಪಶುವಿನ ಕುಟುಂಬ. ಪ್ರಕರಣವಿನ್ನೂ ಇತ್ಯರ್ಥವಾಗಿಲ್ಲ.
ಮೇ 1, 2009: ಗೋದ್ರಾ ವಿಚಾರಣೆ ಮೇಲಿನ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ.
ಮೇ 2009: ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಅಸ್ತಿತ್ವಕ್ಕೆ ತಂದ ಸುಪ್ರೀಂ ಕೋರ್ಟ್. ನ್ಯಾಯಮೂರ್ತಿ ಪಿ.ಆರ್. ಪಟೇಲ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಿರ್ಧಾರ.
ಜೂನ್ 1, 2009: ಗೋದ್ರಾ ರೈಲು ದುರಂತ ಪ್ರಕರಣ ವಿಚಾರಣೆ ಅಹಮದಾಬಾದಿನ ಸಾಬರಮತಿ ಸೆಂಟ್ರಲ್ ಜೈಲಿನಲ್ಲಿ ಆರಂಭ.
ಮೇ 6, 2010: ಗೋದ್ರಾ ರೈಲು ಹತ್ಯಾಕಾಂಡ ಸೇರಿದಂತೆ ಗುಜರಾತಿಗೆ ಸಂಬಂಧಪಟ್ಟ ಒಂಬತ್ತು ಪ್ರಕರಣಗಳ ತೀರ್ಪು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ.
ಸೆಪ್ಟೆಂಬರ್ 28, 2010: ವಿಚಾರಣೆ ಮುಗಿಸಿದ ನ್ಯಾಯಮೂರ್ತಿ. ಸುಪ್ರೀಂ ತಡೆಯಾಜ್ಞೆ ಇರುವುದರಿಂದ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ.
ಜನವರಿ 18, 2011: ತೀರ್ಪಿನ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್.
ಫೆಬ್ರವರಿ 22, 2011: ಗೋದ್ರಾ ಹತ್ಯಾಕಾಂಡ ಆಕಸ್ಮಿಕ ಘಟನೆಯಲ್ಲ, ಇದು ವ್ಯವಸ್ಥಿತ ಪಿತೂರಿ. 31 ಮಂದಿ ತಪ್ಪಿತಸ್ಥರು, 63 ಮಂದಿ ದೋಷಮುಕ್ತರು - ವಿಶೇಷ ನ್ಯಾಯಾಲಯ ತೀರ್ಪು.