ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಇಬ್ಬರು ಸಂತ ಕವಿಗಳ ಪ್ರತಿಮೆ ಅನಾವರಣವು ಉಭಯ ರಾಜ್ಯಗಳ ನಡುವಣ ಜಲ ವಿವಾದ ಪರಿಹಾರಕ್ಕೆ ಚೌಕಾಶಿ ಅಲ್ಲ ಎಂದು ಸ್ಪಷ್ಟಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಚೆನ್ನೈಯ ಅಯನಾವರಂನಲ್ಲಿ ಪ್ರತಿಮೆ ಸ್ಥಾಪಿಸಲಾಗಿರುವ ಪ್ರದೇಶದಲ್ಲಿ ಸ್ಥಳಾವಕಾಶದ ಕೊರತೆಯಿಂದ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಘೋಷಿಸಿದ್ದಾರೆ.
ಆದರೆ, ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳ ಬದಲಾವಣೆಗೆ ಯಾವುದೇ ಬೆದರಿಕೆಗಳು ಕಾರಣ ಅಲ್ಲ ಎಂದೂ ಕರುಣಾನಿಧಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಭಾನುವಾರ ತಿರುವಳ್ಳುವರ್ ಪ್ರತಿಮೆ ಅನಾವರಣ ಬಳಿಕ ಚೆನ್ನೈಗೆ ಮರಳಿದ ಅವರು ಸೋಮವಾರ ಸರ್ವಜ್ಞ ಮೂರ್ತಿ ಪ್ರತಿಷ್ಠಾಪಿಸಿರುವ ಅಯನಾವರಂ ಜೀವಾ ಉದ್ಯಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜೀವಾ ಪಾರ್ಕ್ ಸುತ್ತಮುತ್ತ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಸಾಲದು. ಈ ಕಾರಣಕ್ಕೆ, ಪ್ರತಿಮೆ ಅಲ್ಲೇ ಸ್ಥಾಪಿಸಲಾಗುತ್ತದೆಯಾದರೂ ಅನಾವರಣದ ಸಭಾ ಕಾರ್ಯಕ್ರಮವನ್ನು ಸಮೀಪದ ವಿಳ್ಳಿವಾಕ್ಕಂನ ಐಸಿಎಫ್ ಮೈದಾನದಲ್ಲಿ ಏರ್ಪಡಿಸಲಾಗುತ್ತಿದೆ ಎಂದರು.
ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆ ಇರುವುದರಿಂದ ಈ ಏರ್ಪಾಡು ಮಾಡಲಾಗುತ್ತಿದೆ ಎಂದ ಕರುಣಾನಿಧಿ, ಪ್ರತಿಮೆ ಸ್ಥಾಪನೆ ಕುರಿತಾಗಿ ಯಾವುದೇ "ಚೌಕಾಶಿ" ಇಲ್ಲ, ಉತ್ತಮ ಮತ್ತು ಶಾಶ್ವತ ಸೌಹಾರ್ದ ಸಂಬಂಧ ಸ್ಥಾಪನೆಯೇ ಇದರ ಹಿಂದಿನ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಜಯಲಲಿತಾಗೂ ಆಹ್ವಾನ: ಆಗಸ್ಟ್ 13ರಂದು ಚೆನ್ನೈಯ ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬದ್ಧ ರಾಜಕೀಯ ವೈರಿ, ಮಾಜಿ ಮುಖ್ಯಮಂತ್ರಿ, ಪ್ರತಿ ಪಕ್ಷ ನಾಯಕಿ ಜೆ.ಜಯಲಲಿತಾರನ್ನು ಆಹ್ವಾನಿಸುತ್ತೀರೇ ಎಂದು ಕೇಳಿದಾಗ, ನಮ್ಮ ಸರಕಾರ ಆಹ್ವಾನಿಸುತ್ತದೆ ಎಂದುತ್ತರಿಸಿದರು.
ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶವುಳ್ಳ ಹೊಗೇನಕಲ್ ಯೋಜನೆ ಕುರಿತು ಕರ್ನಾಟಕ ವಿರೋಧ ಹೊಂದಿದ್ದು, ಈ ಬಗ್ಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.