'ನಾನು ನನ್ನ ಖಾತೆಯನ್ನು ಹೊರತುಪಡಿಸಿ ಇತರೆ ಯಾವುದೇ ಇಲಾಖೆಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಕುರಿತು ಎದ್ದಿರುವ ಊಹಾಪೋಹಗಳಿಗೆ ಯಾವುದೇ ಆಧಾರ ಇಲ್ಲ'ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ವರದಿಗಾರರ ಜೊತೆ ಮಾತನಾಡಿದ ಅವರು, ನನ್ನ ಇಲಾಖೆ ತುಂಬಾ ದೊಡ್ಡದು. ಅಲ್ಲಿನ ಎಲ್ಲಾ ಕೆಲಸ ಪೂರ್ಣಗೊಳಿಸಲು ಸಮಯ ಸಾಕಾಗುತ್ತಿಲ್ಲ. ಇನ್ನು ಇತರೆ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವೇ ಯೋಚಿಸಿ ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ರೀತಿಯ ಆರೋಪಗಳನ್ನು ಪದೇಪದೇ ಕೇಳಿ ಅಭ್ಯಾಸವಾಗಿದೆ. ಇನ್ನು ಯಾವುದೇ ಪ್ರತಿಕ್ರಿಯೆನ್ನೂ ನೀಡುವುದಿಲ್ಲ. ನನ್ನ ಇಲಾಖೆಯ ಕೆಲಸಗಳಲ್ಲಿ ಲೋಪ ಉಂಟಾಗಿದ್ದರೆ ನೇರವಾಗಿ ಹೇಳಬಹುದು. ಅದನ್ನು ತಿದ್ದಿಕೊಳ್ಳಲು ನಾನು ಸಿದ್ಧ ಎಂದು ಹೇಳಿದ್ದಾರೆ.
ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿಯವರೆಗೆ ನಾನು ಬೇರೆ ಖಾತೆಗಳಲ್ಲಿ ಮಧ್ಯಪ್ರವೇಶ ಮಾಡಿರುವ ಕುರಿತು ಒಂದೇ ಒಂದು ಪ್ರಕರಣವನ್ನು ಉದಾಹರಣೆ ನೀಡಲಿ. ಅಷ್ಟೇ ಅಲ್ಲ ಯಾವುದೇ ಸಚಿವರೂ ನನ್ನ ವಿರುದ್ಧ ಆರೋಪ ಮಾಡಿಲ್ಲ ಎಂಬುದು ಗಮನಾರ್ಹ ಎಂದರು.