ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರ ಉರುಳಿಸುವ ತಂತ್ರದಲ್ಲಿ ಕುಮಾರಸ್ವಾಮಿ? (HD Kumaraswamy | HD Deve Gowda | JDS | Congress)
Bookmark and Share Feedback Print
 
ಕಳೆದ ಕೆಲವು ದಿನಗಳಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲಿಸಿ ನೀಡುತ್ತಿರುವ ಹೇಳಿಕೆಗಳ ಹಿಂದಿನ ಮರ್ಮ ನಿಧಾನವಾಗಿ ಬಹಿರಂಗವಾಗುತ್ತಿದೆ. ಕಾಂಗ್ರೆಸ್ ಜತೆ ಕೈ ಜೋಡಿಸಿ, ಬಿಜೆಪಿಯ ಅತೃಪ್ತರನ್ನು ಸೆಳೆದುಕೊಂಡು ಹೊಸ ಮೈತ್ರಿ ಸರಕಾರ ರಚಿಸುವ ಸ್ಕೆಚ್ ಕುಮಾರಣ್ಣನ ಕೈಯಲ್ಲಿದೆ!

ಆದರೆ ಜೆಡಿಎಸ್ ಇತಿಹಾಸ ತಿಳಿದಿರುವ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಯಾವ ಕಾರಣಕ್ಕೂ ಆತುರದ ನಿರ್ಧಾಗಳಿಗೆ ಮುಂದಾಗದೆ ನಿಧಾನವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ರೆಸಾರ್ಟ್ ರಾಜಕೀಯ ಆರಂಭವಾಗಿರುವುದನ್ನು ಮನಗಂಡಿರುವ ಜೆಡಿಎಸ್, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗುವುದಾದರೆ ನಾವು ಬೆಂಬಲಿಸಲು ಸಿದ್ಧ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು.

ಇದರ ಬೆನ್ನಿಗೆ ಸಂಸತ್ ಅಧಿವೇಶನ ನೆಪದಲ್ಲಿ ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಮಂಗಳವಾರ ರಾತ್ರಿ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗುಲಾಂ ನಭಿ ಅಜಾದ್ ಅವರನ್ನೂ ಭೇಟಿ ಮಾಡಬೇಕಿತ್ತಾದರೂ, ಅವರು ದೆಹಲಿಯಲ್ಲಿಲ್ಲದ ಕಾರಣ ಸಾಧ್ಯವಾಗಿಲ್ಲ. ಆದರೂ ಮುಂದಿನ ಕೆಲವು ದಿನಗಳಲ್ಲಿ ಮತ್ತೆ ಮಾತುಕತೆ ಮುಂದುವರಿಯಲಿದೆ.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಅತೃಪ್ತ ಬಣವನ್ನು ಸೆಳೆದುಕೊಂಡು ಸರಕಾರ ರಚಿಸುವುದು ಕುಮಾರಸ್ವಾಮಿ ಯೋಜನೆ. ಇಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಸಿದ್ಧರಾಮಯ್ಯನವರಿಗೆ ಕೊಟ್ಟು, ಕೇಂದ್ರದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ಪ್ರಭಾವಶಾಲಿಯಾಗುವ ಯತ್ನ ಅವರದ್ದು ಎನ್ನಲಾಗಿದೆ.

ಆದರೆ ಈ ಹಿಂದೆ ಹಲವಾರು ಬಾರಿ ಜೆಡಿಎಸ್‌ನ ಅಸ್ಥಿರ ನಿಲುವುಗಳಿಂದ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ತೆಲಂಗಾಣ ಕುರಿತ ಆಂಧ್ರಪ್ರದೇಶ ಸಮಸ್ಯೆಯನ್ನು ತಲೆ ಮೇಲೆ ಹೊತ್ತಿರುವ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಪ್ರಸ್ತಾಪಕ್ಕೆ ಹೆಚ್ಚಿನ ಆಸಕ್ತಿ ತೋರಿಸದೆ, ಎರಡನೇ ಹಂತದ ನಾಯಕರ ಚರ್ಚೆಗಷ್ಟೇ ಮೀಸಲಿರಿಸಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಗೇ ಆಪರೇಷನ್?
ಇಂತದ್ದೊಂದು ಆಲೋಚನೆ ಕುಮಾರಸ್ವಾಮಿಯವರದ್ದು. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಂದ ಮಂದೆಯಂತೆ ಶಾಸಕರನ್ನು ನುಂಗಿದ ಬಿಜೆಪಿಗೆ ಆಪರೇಷನ್ ರುಚಿ ತೋರಿಸಬೇಕೆಂದು ಹೊರಟಿರುವ ಅವರು ಅದಕ್ಕಾಗಿ ಹಲವು ಯೋಜನೆಗಳನ್ನೂ ರೂಪಿಸಿದ್ದಾರೆ.

ಮೂಲಗಳ ಪ್ರಕಾರ ಅವರು ಅತೃಪ್ತ ಶಾಸಕರ ಜತೆ ಸಂಪರ್ಕದಲ್ಲಿದ್ದಾರೆ. ಅತ್ತ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಬೇಡದವರಾಗಿ, ಇತ್ತ ರೆಡ್ಡಿ ಪಾಳಯದಿಂದಲೂ ನಿರ್ಲಕ್ಷ್ಯಕ್ಕೊಳಗಾಗಿರುವ ಶಾಸಕರ ಮನಸ್ಥಿತಿಯನ್ನು ಅರಿತುಕೊಂಡಿರುವ ಕುಮಾರಸ್ವಾಮಿ, ಅದರ ಸದುಪಯೋಗಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಜೆಡಿಎಸ್ ತಂತ್ರಕ್ಕೆ ಆಡಳಿತ ಪಕ್ಷದ ಎಂಟು ಸಚಿವರು ಕೂಡ ಪರೋಕ್ಷ ಬೆಂಬಲ ಸೂಚಿಸಿದ್ದಾರೆ. ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಗೂಳಿಹಟ್ಟಿ ಚಂದ್ರಶೇಖರ್, ಶಿವನಗೌಡ ನೌಯಕ, ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ಡಿ. ಸುಧಾಕರ, ವೆಂಕಟರಮಣಪ್ಪ, ಬೇಳೂರು ಗೋಪಾಲಕೃಷ್ಣ, ಎಸ್.ಕೆ. ಬೆಳ್ಳುಬ್ಬಿ, ಸಾರ್ವಭೌಮ ಬಗಲಿ, ನೆಲಮಂಗಲ ನಾಗರಾಜ್, ವೈ. ಸಂಪಂಗಿ, ಕೊಳ್ಳೇಗಾಲ ನಂಜುಂಡಸ್ವಾಮಿ, ಜೆ. ನರಸಿಂಹ ಸ್ವಾಮಿ, ಚಂದ್ರಶೇಖರ ರೇವೂ, ವರ್ತೂರ್ ಪ್ರಕಾಶ್ ಮುಂತಾದ ಆಡಳಿತ ಪಕ್ಷದ ಶಾಸಕ-ಸಚಿವರು ಹೊಸ ವೇದಿಕೆಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ