ಮುಖ್ಯ ಪುಟಮನರಂಜನೆ » ಬಾಲಿವುಡ್ » ಸಂದರ್ಶನ » ಜಗತ್ತಿನಲ್ಲೇ ಅತ್ಯುತ್ತಮ ಗಂಡ ನನ್ನ ಅಭಿಷೇಕ್: ಐಶ್! (Aishwarya Rai | Abhishek Bachchan | Guru | Bollywood | Padmashri)
ಮದುವೆಗಿಂತಲೂ ಮೊದಲು ನಾನು ಅಭಿಷೇಕ್ ಇಬ್ಬರೂ ಕೆಲವು ಚಿತ್ರಗಳನ್ನು ಜತೆಯಾಗಿ ನಟಿಸಿದ್ದೆವು. ಆದರೆ ಗುರು ಚಿತ್ರದ ಚಿತ್ರೀಕರಣ ಸಂದರ್ಭ ಅಭಿಷೇಕ್ ನನಗೆ ಪ್ರೊಪೋಸ್ ಮಾಡಿದ್ರು. ತಕ್ಷಣವೇ ನಾನು ಯಸ್ ಅಂದು ಬಿಟ್ಟೆ.
ಹೀಗೆ ಹೇಳಿದ್ದು ಮಾಜಿ ವಿಶ್ವಸುಂದರಿ, ಬಾಲಿವುಡ್‌ನ ಅತಿ ಬೇಡಿಕೆಯ ನಟಿ, ಭಾರತದ ಅಂತಾರಾಷ್ಟ್ರೀಯ ಮುಖವಾಣಿ, ನಮ್ಮ ಕರಾವಳಿಯ ಬೆಡಗಿ, ಅತಿ ಹೆಚ್ಚು ಸಂಭಾವನೆ ಪಡೆವ ಭಾರತೀಯ ನಟಿ ಐಶ್ವರ್ಯಾ ರೈ. ತಮ್ಮ ಹಳೆಯ ದಿನಗಳನ್ನು ಐಶ್ವರ್ಯಾ ರೈ ನೆನಪಿಸಿಕೊಳ್ಳುವ ಸಂದರ್ಭ ತನ್ನ ಹಾಗೂ ಅಭಿಷೇಕ್ ವಿವಾಹವಾದ ಸುಂದರ ಘಳಿಗೆಗಳನ್ನು ನೆನಪಿಸಲು ಮರೆಯಲಿಲ್ಲ. ಅಷ್ಟೇ ಅಲ್ಲ, ಅಭಿಷೇಕ್ ಜಗತ್ತಿನ ಅತ್ಯುತ್ತಮ ಗಂಡ. ಪತ್ನಿಯ ಸಾರ್ವಜನಿಕ ಯಶಸ್ಸಿನಲ್ಲಿ ತಾನೂ ಭಾಗಿಯಾಗಿ ಬೆನ್ನುತಟ್ಟುವ ಹೃದಯವುಳ್ಳ ಅಭಿಷೇಕ್ ಅತ್ಯುತ್ತಮನಲ್ಲದೆ ಮತ್ತಿನ್ನೇನು ಎನ್ನುತ್ತಾಳೆ ಐಶ್ವರ್ಯಾ ರೈ ಬಚ್ಚನ್.
ನ್ಯೂಯಾರ್ಕ್‌ನಲ್ಲಿ ಗುರು ಚಿತ್ರದ ಪತ್ರಿಕಾಗೋಷ್ಠಿಗೆ ಹೋಗಿದ್ದ ಸಂದರ್ಭ. ನಾವಿಬ್ಬರೂ ಜತೆಯಾಗಿ ನಟಿಸಿದ ಮದುವೆಗೆ ಮೊದಲಿನ ಕೊನೆಯ ಚಿತ್ರ ಅದು. ಪತ್ರಿಕಾಗೋಷ್ಠಿ ಮುಗಿಸಿ ನಾನು ತಕ್ಷಣ ಭಾರತಕ್ಕೆ ಹೊರಟು ಬರಬೇಕಿತ್ತು. ಅಭಿಷೇಕ್ ಕೂಡಾ ಯಾವುದೋ ಕಾರಣಕ್ಕೆ ಭಾರತಕ್ಕೆ ಬರುವವರಿದ್ದರು. ಇಬ್ಬರೂ ಒಂದೇ ವಿಮಾನದಲ್ಲಿ ನ್ಯೂಯಾರ್ಕ್‌ನಿಂದ ಹೊರಟೆವು. ಆಗ ಅಭಿಷೇಕ್ ನನಗೆ ಪ್ರೊಪೋಸ್ ಮಾಡಿದರು. ನಾನು ಹಿಂದೆ ಮುಂದೆ ಯೋಚಿಸದೆ ಯಸ್ ಅಂದುಬಿಟ್ಟೆ. ನ್ಯೂಯಾರ್ಕ್‌ಗೆ ಹೋಗಿದ್ದಾಗ ಅಭಿಷೇಕ್ ನಮಗಿಬ್ಬರಿಗೂ ಉತ್ತಮ ಗೆಳೆತನವಿದೆ. ನಾವ್ಯಾಕೆ ಮದುವೆಯಾಗಬಾರದು ಅಂದುಕೊಂಡರಂತೆ. ಆದರೆ ಆತ ನನಗೆ ಪ್ರೊಪೋಸ್ ಮಾಡುವಾಗ ನಿಜವಾಗಿಯೂ ತುಂಬ ಸಮಯದಿಂದ ಪ್ರೀತಿಸುವಂತೆ, ಭಾವುಕರಾಗಿ ನನ್ನ ಬಳಿ ಹೇಳಿಕೊಂಡರು. ನಾನು ಕರಗಿಬಿಟ್ಟೆ ಎನ್ನುತ್ತಾರೆ ಐಶ್.
ನಂತರ ನಡೆದ ಘಟನೆಗಳೆಲ್ಲ ಮರೆಯಲೇ ಸಾಧ್ಯವಿಲ್ಲ. ಎಷ್ಟು ಶೀಘ್ರವಾಗಿ ನಡೆದುಹೋದವು ಎಂದು ಯೋಚಿಸುವಾಗಲೆಲ್ಲ ಆಶ್ಚರ್ಯವಾಗುತ್ತದೆ. ನಾನು ಯಾವತ್ತೂ ಗುರು ಚಿತ್ರದ ನಡುವಿನಲ್ಲೇ ಮದುವೆಯಾಗಬಹುದೆಂದು ಅಂದುಕೊಂಡಿರಲೇ ಇಲ್ಲ. ಸಿನಿಮಾದಲ್ಲೆಲ್ಲ ಮದುವೆಯ ತಯಾರಿ ಅದ್ಭುತವಾಗಿರುತ್ತದೆ. ಆದರೆ ನ್ನ ಮದುವೆಗೆ ಅಷ್ಟೊಂದು ತಯಾರಿ ಮಾಡಲು ಸಮಯವೇ ಇರಲಿಲ್ಲ. ಶೀಘ್ರವಾಗಿ ನಡೆದುಹೊಯಿತು ಎಂದು ನಗುತ್ತಾರೆ ನೀಲಿ ಕಣ್ಣ ಬೆಡಗಿ ಐಶ್.
ಅಭಿಷೇಕ್ ಹಾಗೂ ನಾನು ಅತ್ಯುತ್ತಮ ಗೆಳೆಯರು. ನಾವ್ಯಾವಾಗಲೂ ನಮ್ಮೊಳಗೇ ಏನನ್ನೂ ಮುಚ್ಚಿಟ್ಟಿಲ್ಲ, ಬಚ್ಚಿಟ್ಟಿಲ್ಲ. ನಮ್ಮಿಬ್ಬರದು ಒಂದು ನಿಷ್ಕಲ್ಮಶವಾದ ಪ್ರೀತಿ. ಅದಕ್ಕೂ ಮಿಗಿಲಾದ ಗೆಳೆತನ ನಮ್ಮಲ್ಲಿದೆ. ನಮ್ಮ ಜೀವನದ ಎಲ್ಲ ಸಂಗತಿಗಳೂ ಇಬ್ಬರಿಗೂ ಪರಸ್ಪರ ಗೊತ್ತು. ಹಾಗಾಗಿ ಹಲವು ಬಾರಿ ನಾವಿಬ್ಬರೂ ಪರಸ್ಪರ ನಮ್ಮಿಬ್ಬರನ್ನೇ ಆಡಿಕೊಂಡು ನಗುತ್ತಿರುತ್ತೇವೆ. ಅಂತಹ ಗಳಿಗೆಗಳು ನಿಜವಾಗಿಯೂ ಅದ್ಭುತ ಎನ್ನುತ್ತಾಳೆ ಕರಾವಳಿ ಬೆಡಗಿ ಐಶ್ವರ್ಯಾ.
IFM
ನಾನೊಬ್ಬ ನಟಿಯಾಗಿ ನಾನು ಮಾಡುವ ಕೆಲಸಗಳನ್ನು ಖಂಡಿತವಾಗಿಯೂ ಮಾಡಲೇಬೇಕು. ಮಾಡದಿದ್ದರೆ, ನಾನು ನನ್ನ ಕೆಲಸಕ್ಕೇ ದ್ರೋಹ ಬಗೆದಂತೆ ಅಂತ ನಾನು ಭಾವಿಸುತ್ತೇನೆ. ನಾನು ಮಾಡುವ ಕೆಲಸದಲ್ಲಿ ನಾನು ಕಂಫರ್ಟ್ ಅನಿಸದಿದ್ದರೆ ನಾನು ಮಾಡುವುದಿಲ್ಲ. ಕ್ಯಾಮರಾ ನಮ್ಮ ಎಲ್ಲ ತಪ್ಪುಗಳನ್ನೂ ತೆಗೆದುಕೊಳ್ಳುತ್ತದೆ. ಹಾಗಾಗಿ ಕ್ಯಾಮರಾ ಎದುರು ನಾವು ತುಂಬ ಜಾಗೃತರಾಗಿರಬೇಕು ಎನ್ನುತ್ತಾಳೆ ಈ ತೌಳವ ಸುಂದರಿ.
ನಾನು ನಿಜಕ್ಕೂ ಹಾಲಿವುಡ್ ಹೋಗೋದೇ ಇಲ್ಲ ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ದೇವ್‌ದಾಸ್ ಚಿತ್ರದ ಚಿತ್ರೀಕರಣ ಸಂದರ್ಭ ನನಗೆ ಹಾಲಿವುಡ್ ಆಸಕ್ತಿ ಬರತೊಡಗಿತು. ದೇವ್‌ದಾಸ್ ಚಿತ್ರಕ್ಕಾಗಿ ಕ್ಯಾನ್‌ಗೆ ಹೋಗಿದ್ದಾಗ ಅಲ್ಲಿ ನನಗೆ ಹಾಲಿವುಡ್ ಆಫರ್ ಬಂತು. ಕೊನೆಗೂ ನಾನು ಹಾಲಿವುಡ್ಡಿಗೂ ಹಾರಲು ನಿರ್ಧರಿಸಿಯೇ ಬಿಟ್ಟೆ. ದೇವರ ಕೃಪಾಕಟಾಕ್ಷವೋ ಏನೋ, ಹಾಗೆ ನಿರ್ಧರಿಸಿದ ಮೇಲೆ ನನಗೆ ಹಲವು ಆಫರ್‌ಗಳು ಬಂದುವು. ಆದರೆ ಮೊದಲು ಹಾಲಿವುಡ್‌ನ ವಿಲ್ ಸ್ಮಿತ್, ಮೈಕೆಲ್ ಡಗ್ಲಾಸ್, ರಶ್ ಅವರ್ 3, ಟ್ರಾಯ್ ಮತ್ತಿತರ ಆಫರ್‌ಗಳಿಗೆ ಯಾಕೆ ನಾನು ನೋ ಹೇಳಿದೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಆದರೆ, ಆಗ ನಾನು ಭಾರತೀಯ ಸಿನಿಮಾಗಳಿಗೆ ಹೆಚ್ಚು ಓತ್ತು ನೀಡುತ್ತಿದ್ದೆ ಎಂದು ಐಶ್ ಹೇಳುತ್ತಾಳೆ.
ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ವಾರದಲ್ಲಿ ಒಂದು ದಿನ ಕುಟುಂಬಕ್ಕೆಂದೇ ಐಶ್ ಮೀಸಲಿರಿಸಿದ್ದಾಳಂತೆ. ವಾರದಲ್ಲಿ ಒಂದು ದಿನ ಪೂರ್ತಿ ಗಂಡನೊಂದಿಗೆ ಹಾಗೂ ಕುಟುಂಬದ ಜತೆಗೆ ಕಳೆಯುತ್ತೇನೆ. ನಗೂ ಅಭಿಷೇಕ್‌ಗೂ ಹಲವು ಸಾಮ್ಯತೆಗಳಿವೆ. ಇಬ್ಬರಿಗೂ ಮ್ಯೂಸಿಕ್ ಅಂದರೆ ಬಹು ಇಷ್ಟ. ಇಂಗ್ಲೀಷ್ ಹಾಡುಗಳ ಜತೆಗೆ ನಾವಿಬ್ಬರೂ ಶಾಸ್ತ್ರೀಯ ಸಂಗೀತ ಹಾಗೂ ಹಳೆಯ ಹಿಂದಿ ಗೀತೆಗಳನ್ನು ಕೇಳುತ್ತೇವೆ. ನನ್ನ ಐಪಾಡ್ ತುಂಬ ಸಾಕಷ್ಟ ನನ್ನಿಚ್ಛೆಯ ಗೀತೆಗಳಿವೆ. ಅದೆಲ್ಲವನ್ನೂ ಮಾಡಿಕೊಟ್ಟದ್ದು ಅಭಿಷೇಕ್ ಎಂದು ನಗುತ್ತಾಳೆ.
ನಾನು, ಅಭಿಷೇಕ್ ಇಬ್ಬರೂ ಭಾರೀ ಮಾತುಗಾರರು. ಆದರೆ ನಾವಿಬ್ಬರೇ ಜತೆ ಸೇರಿದಾಗ ಹರಟೆ ಹೊಡೆಯದೆ ಸುಮ್ಮನೆ ಜತೆಗೆ ಕಾಲ ಕಳೆಯುವುದೆಂರೆ ಇಬ್ಬರಿಗೂ ಇಷ್ಟ. ಜತೆಗೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತೇವೆ. ಹಾಗೆಯೇ ಪರಸ್ಪರ ಕಾಲೆಳೆಯುವುದೂ ನಮಗಿಷ್ಟ ಎನ್ನುತ್ತಾಳೆ ಐಶ್.
ನನಗೆ ಪದ್ಮಶ್ರೀ ದೊರಕಿದ್ದು ನನಗೆ ಇತ್ತೀಚೆಗೆ ಅತೀವ ಸಂತಸದ ಕ್ಷಣಗಳಲ್ಲೊಂದು ಎಂದು ಸಂತಸದ ಕ್ಷಣವನ್ನು ಮೆಲುಕು ಹಾಕುತ್ತಾಳೆ. ನನ್ನ ಮಾವ ಅತ್ತೆ ಇಬ್ಬರೂ ನಮ್ಮ ಮನೆಯ ಐದನೇ ಪದ್ಮಶ್ರೀ ಎಂದು ನನಗೆ ಸ್ವಾಗತ ಕೋರಿದ್ದು ಈ ಸಂತಸದ ಗಳಿಗೆಗೊಂದು ವಜ್ರದ ಕಿರೀಟವಿಟ್ಟಂತೆ. ಈ ಪದ್ಮಶ್ರೀ ಪಡೆಯಲು ಕಾರಣ ನನ್ನ ಎಲ್ಲ ತಪ್ಪು ಒಪ್ಪುಗಳಿಗೂ ನನ್ನ ಜತೆಯಾಗಿ ಬೆಂಬಲವಾಗಿ ನಿಂತ ನನ್ನ ಹೆತ್ತವರು. ಇದರ ಶ್ರೇಯಸ್ಸು ಅವರಿಗೇ ಸಲ್ಲಬೇಕು ಎನ್ನುತ್ತಾಳೆ.
ಜಗತ್ತಿನ ಅತ್ಯುತ್ತಮ ಗಂಡ ನನಗೆ ದಕ್ಕಿದ್ದಕ್ಕೆ ನಾನು ಅತ್ಯಂತ ಖುಷಿಪಡುತ್ತೇನೆ. ಇದು ನನ್ನ ಪುಣ್ಯವೇ ಸರಿ ಎನ್ನುವ ಐಶ್ವರ್ಯಾ, ಜಗತ್ತಿನ ಅತ್ಯುತ್ತಮ ಗಂಡನೆಂದು ಯಾಕೆ ತಾನು ಹೇಳುತ್ತಿದ್ದೇನೆ ಎನ್ನುವುದಕ್ಕೆ ಕಾರಣವನ್ನೂ ನೀಡುತ್ತಾಳೆ. ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ಮಹಿಳೆಯೊಂದಿಗೆ ಆಕೆಯ ಗಂಡನೂ ನಿಂತು ಆಕೆಯ ಸ್ಪೂರ್ತಿಯ ಸೆಲೆಯಾಗುವುದು ನಿಜಕ್ಕೂ ದೊಡ್ಡ ಗುಣವೇ ಸರಿ. ಎಲ್ಲರೂ ಹೀಗಿರುವುದಿಲ್ಲ. ಅಭಿಷೇಕ್ ನನ್ನ ಎಲ್ಲ ಯಶಸ್ಸಿಗೂ ನನ್ನ ಜತೆ ನಿಂತಿದ್ದಾನೆ. ನನ್ನ ಕೆಲಸದ ವಿಷಯದಲ್ಲೂ ಆತ ನನಗೆ ಸ್ಪೂರ್ತಿಯ ಸೆಲೆ. ಹಾಗಾಗಿ ಜಗತ್ತಿನ ಅತ್ಯುತ್ತಮ ಗಂಡ ಎಂದು ಹಾಡಿ ಹೊಗಳುತ್ತಾಳೆ ಐಶ್ವರ್ಯಾ.