ದೇವರ ಸ್ವಂತ ನಾಡಿನಿಂದ ಹೊರಟು ಮುಂಬೈ ತಲುಪಿರುವ ಆಸಿನ್‌ಗೀಗ ಬಾಯ್ ಫ್ರೆಂಡ್ ಬೇಕಂತೆ. ಸಿಂಪಲ್.. ಅವಳ ಬೇಡಿಕೆ ಪಟ್ಟಿಯೇನೂ ಉದ್ದವಿಲ್ಲ. ಅದರ ಬಗ್ಗೆ ಏನೂ ಹೇಳದೆ, 'ನಾನು ಸಿಂಪಲ್ ಹುಡುಗಿ, ಗಜನಿಯ ನಾಯಕಿಯಂತೆ' ಎಂದು ಹೇಳಿಕೊಂಡಿದ್ದಾಳೆ. ಹಾಗಾಗಿ ನೀವೂ ಒಂದು ಕೈ ನೋಡಬಹುದು.. ಏನಂತೀರಾ?
ಬಾಲಿವುಡ್ ಸೂಪರ್ ಡ್ಯೂಪರ್ ಹಿಟ್ 'ಗಜನಿ'ಯಲ್ಲಿ ಆಮೀರ್ ಖಾನ್‌ಗೆ ನಾಯಕಿಯಾದ ನಂತರ ಆಕೆಯ ಕಾಲುಗಳು ನೆಲದಲ್ಲಿಲ್ಲ. ಯಾರೂ ಮುಟ್ಟದಷ್ಟು ಎತ್ತರವನ್ನು ತಲುಪಿರುವ ಆಕೆಗಿನ್ನೂ ಥಳುಕು ಹಾಕಿಕೊಳ್ಳಲು ಯಾರೂ ಸಿಕ್ಕಿಲ್ಲವೆಂದರೆ ಆಶ್ಚರ್ಯ ಆಗದಿರುತ್ತದೆಯೇ? ಆಕೆ ಹೇಳಿದ್ದರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಬದಿಗಿಟ್ಟು ನೋಡಿದರೂ ಬೇಕಾದವರನ್ನು ಪಡೆಯಲು ಅವಳಿಗೇನೂ ಕಷ್ಟವೇನಿಲ್ಲ ಬಿಡಿ.. ಆದರೆ ಪ್ರೀತಿಯ ಹುಡುಕಾಟದಲ್ಲಿ ದಾರಿ ತಪ್ಪದಿದ್ದರಾಯಿತು.. ಅಷ್ಟೇ!
IFM
ಹೀಗೆ ಸಂದರ್ಶನಕಾರರೊಬ್ಬರು ಮಾತನಾಡಿಸುತ್ತಾ, ನಿಮಗೆ ಬಾಯ್‌ಫ್ರೆಂಡ್ ಇದ್ದಾರಾ ಎಂದು ಪ್ರಶ್ನಿಸಿದ್ದೇ ತಡ. ಉದ್ದುದ್ದ ಭಾಷಣ ಶುರುವಿಟ್ಟುಕೊಂಡ ಆಕೆ ತನ್ನ ಜವ್ವನದ ಜಾತಕವನ್ನೇ ತೆರೆದಿಟ್ಟಿದ್ದಾಳೆ. "ನಾನಿದುವರೆಗೆ ಪ್ರೀತಿಯಲ್ಲಿ ಬಿದ್ದಿಲ್ಲ. ನನಗೆ ಯಾವ ಬಾಯ್ ಫ್ರೆಂಡೂ ಇಲ್ಲ. ನಾನು ಇದುವರೆಗೂ ಯಾರ ಜತೆಗೂ ಥಳುಕು ಹಾಕಿಕೊಂಡಿಲ್ಲ. ಆದರೆ ಹುಡುಕುತ್ತಿದ್ದೇನೆ. ಆದರೆ ಕೆಲಸ ಬಿಟ್ಟು ಪ್ರೀತಿಯ ಹುಡುಕಾಟದಲ್ಲಿ ಮೈಮರೆಯಲಾಗದು. ಕೆಲಸದೊಂದಿಗೆ ಸಾಗುತ್ತಿರುವಾಗ ಯಾರಾದರೂ ಸಿಕ್ಕಿದರೆ ಓಕೆ. ಕೆಲಸಕ್ಕೆ ನನ್ನ ಮೊದಲ ಆದ್ಯತೆ" ಎಂದು ಹೇಳಿ ಬಾಯಿ ಮುಚ್ಚಿದ್ದಾಳೆ.
27ರ ಹರೆಯದ ಆಸಿನ್ ಪೂರ್ಣ ಹೆಸರು ಆಸಿನ್ ತೊಟ್ಟುಂಮ್ಕಲ್. 1981ರ ಅಕ್ಟೋಬರ್ 26ರಂದು ಕೊಚ್ಚಿಯಲ್ಲಿ ಜನಿಸಿದ ಈಕೆ ಮೊದಲು ನಟಿಸಿದ್ದು ಮಲಯಾಳಂ ಸಿನಿಮಾದಲ್ಲಿ. ಆದರೆ ಮಿಂಚಿದ್ದು ತಮಿಳು, ತೆಲುಗು ಚಿತ್ರಗಳಲ್ಲಿ. ಗಜನಿ ಮೂಲ ತಮಿಳು ಚಿತ್ರದಲ್ಲೂ ನಟಿಸಿದ್ದ ಆಕೆಗೆ ಬಾಲಿವುಡ್ ಬಾಗಿಲು ತೆರೆದಿದ್ದು ಸೋಜಿಗ. ತನ್ನ ಎಂಟು ವರ್ಷದ ಸಿನಿಮಾ ಜೀವನದ ಉತ್ತುಂಗ ಸ್ಥಿತಿಯಲ್ಲಿದ್ದಾಳೆ ಆಸಿನ್.