ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಈ ಬಾರಿ 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ'ಯನ್ನು ಹೊತ್ತು ತಂದಿದ್ದಾರೆ. ಸಂತೋಷಿ ಒಂದು ಅತ್ಯುತ್ತಮ ಕೌಟುಂಬಿಕ ಮನರಂಜನೆಯನ್ನೂ ನೀಡಬಲ್ಲ ಸಿನಿಮಾ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿ ಈ ಅಜಬ್ ಪ್ರೇಮ್ ಕೀ ಗಜಬ್ ಕಹಾನಿ. ಸುಖಾಸುಮ್ಮನೆ ಇಷ್ಟವಾಗಿಬಿಡಬಲ್ಲ ಚಿತ್ರವಿದು. ಇದು ನಿಮ್ಮನ್ನು ಸುಮ್ಮನೆ ನಿರಾಳವಾಗಿ ನಗಿಸುತ್ತದೆ. ಉತ್ತಮ ಮನರಂಜನೆಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಚಿತ್ರ ಮುಗಿಯುವ ಹೊತ್ತಿಗೆ ನಿಮ್ಮ ಮನದಲ್ಲಿ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಜೋಡಿ ಅಚ್ಚಾಗಿ ಬಿಡುತ್ತದೆ. ಹಾಗೆ ಮೋಡಿ ಮಾಡಿಬಿಡುತ್ತದೆ ಈ ಜೋಡಿ!
ಚಿತ್ರದಲ್ಲಿ ನಿಮ್ಮನ್ನು ಇನ್ನೊಂದು ಮೋಡಿಮಾಡುವ ಅಂಶವೆಂದರೆ ಪ್ರೀತಂ ಅವರ ಸಂಗೀತ. ತಮ್ಮ ಅದ್ಭುತ ಟ್ರ್ಯಾಕ್‌ನಿಂದ ಪ್ರೀತಂ ಈ ಇಬ್ಬರು ಜೋಡಿಗಳನ್ನು ತೆರೆಯ ಮೇಲೆ ತನ್ಮಯರಾಗಿಸಿಬಿಡುತ್ತಾರೆ. ಅಷ್ಟೇ ಅಲ್ಲ, ಪ್ರೇಕ್ಷಕನನ್ನು ಕೂಡಾ.
ಪ್ರೇಮ್ (ರಣಬೀರ್ ಕಪೂರ್) ಲೈಫ್ ಒಂಥರಾ ಜಾಲಿ ಜೀವನ. ಸಂತೋಷವಾಗಿರೋದು, ತಾನೂ ನಗೋದು ಇನ್ನೊಬ್ಬರನ್ನೂ ನಗಿಸೋದು ಆತನ ಜಾಯಮಾನ. ತಪ್ಪು ತಿಳುವಳಿಕೆಯಿಂದಾಗಿ ಪ್ರೇಮ್ ಒಂದು ದಿನ ಜೆನ್ನಿಯನ್ನು (ಕತ್ರಿನಾ ಕೈಫ್) ಕಿಡ್ನಾಪ್ ಮಾಡಿ ಬಿಡುವ ಸ್ಥಿತಿಗೆ ತಲುಪಿರುತ್ತಾನೆ. ಜೆನ್ನಿ ತನ್ನ ಮಲ ಪೋಷಕರಿಂದ ತೊಂದರೆಯಾಗಿ ಪ್ರೀತಿಯಿಂದ ವಂಚಿತಳಾಗಿರುವ ಹುಡುಗಿ.
IFM
ಪ್ರೇಮ್ ಜೆನ್ನಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಪ್ರೇಮ್‌ಗೆ ನಿಧಾನವಾಗಿ ಗೊತ್ತಾಗುತ್ತದೆ ಜೆನ್ನಿ ಇನ್ಯಾರದೋ ಪ್ರೀತಿಯಲ್ಲಿ (ಉಪೇನ್ ಪಟೇಲ್) ಬಿದ್ದಿದ್ದಾಳೆ, ತನ್ನ ಪ್ರೀತಿಯಲ್ಲಲ್ಲ ಎಂಬುದು. ಜೆನ್ನಿ ಪ್ರೀತಿಸುತ್ತಿರುವ ಹುಡುಗ ರಾಜಕಾರಣಿಯೊಬ್ಬನ ಮಗ. ಹಾಗಾಗಿ ಪ್ರೇಮ್ ಕೊನೆಗೂ ತನ್ನ ಮನಸ್ಸು ಬದಲಾಯಿಸಿ, ಜೆನ್ನಿ ತಾನು ಪ್ರೀತಿಸುತ್ತಿರುವ ರಾಜಕಾರಣಿಯ ಹುಡುಗನ್ನೇ ಮದುವೆಯಾಗಲಿ ಎಂದು ನಿರ್ಧರಿಸುತ್ತಾನೆ. ಹೀಗೆ ಸಾಗಿದ ಕಥೆ ಮುಂದೆ ಹಲವು ತಿರುವುಗಳನ್ನು ಕಾಣುತ್ತದೆ. ಅದಕ್ಕೆ ಚಿತ್ರಮಂದಿರಕ್ಕೇ ಹೋಗಬೇಕು.
ಚಿತ್ರ ಆರಂಭದಲ್ಲಿ ತುಂಬ ವೇಗವಾಗಿ ಸಾಗಿದಂತಾದರೂ, ಎರಡನೇ ಗಂಟೆಯಲ್ಲಿ ಕುಂಟಿದಂತೆ ಅನಿಸುತ್ತದೆ. ಹಾಗಾಗಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದರೂ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ಕೆಲವೊಂದು ಸನ್ನಿವೇಶಗಳು ಧುತ್ತೆಂದು ಬಂದೆರಗಿದಂತೆ ಅನಿಸುತ್ತದೆ. ಉದಾಹರಣೆಗೆ ಕತ್ರಿನಾಳನ್ನು ವಿಲನ್‌ಗಳು ಅಪಹರಿಸುವ ಸನ್ನಿವೇಶ. ಎಲ್ಲಿ, ಹೇಗಾಯಿತು, ಯಾಕಾಯಿತು ಅಂತ ಗೊತ್ತೇ ಆಗೋದಿಲ್ಲ.
ಅದೆಲ್ಲ ಏನೇ ಇದ್ದರೂ ಚಿತ್ರವನ್ನು ಯೌವನೋತ್ಸಾಹದ ಹೊಳೆಯಲ್ಲಿಯೇ ತೇಲಿಸಿದ್ದಾರೆ ಸಂತೋಷಿ ಎಂಬುದರಲ್ಲಿ ಅನುಮಾನವೇ ಇಲ್ಲ. ಕೆಲವೊಂದು ಭಾಗಗಳು ಬಿಟ್ಟರೆ ಕಥೆ ಲೀಲಾಜಾಲವಾಗಿ ಮುಂದೆ ಸಾಗುತ್ತದೆ. ಆ ಮೂಲಕ ಸಂತೋಷಿ ತನಗೂ ಯುತ್‌ಫುಲ್ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ ಮಾಡಲು ಬರುತ್ತದೆ ಅಂತ ಸಾಬೀತುಗೊಳಿಸಿರೋದರಲ್ಲಿ ಸಂಶಯವೇ ಇಲ್ಲ.
IFM
ಉಳಿದಂತೆ ಚಿತ್ರದಲ್ಲಿ ಮಿಂಚುವುದು ಪ್ರೀತಂ ಸಂಗೀತ ಹಾಗೂ ಎಸ್. ತಿರು ಅವರ ಛಾಯಾಗ್ರಹಣ. ನಟೆಯ ಮಟ್ಟಿನಲ್ಲಿ ಹೇಳುವುದಾದರೆ ರಣಬೀರ್ ಕಪೂರ್ ಎಂಬ ಕಪೂರ್ ಕುಡಿ ಖಂಡಿತವಾಗಿಯೂ ಮುಂದಿನ ದಿನಗಳ ಒಬ್ಬ ಪ್ರತಿಭಾವಂತ ಮುಂಚೂಣಿಯ ನಟನಾಗುವುದರಲ್ಲಿ ಸಂದೇಹವೇ ಇಲ್ಲ. ತಮಾಷೆಯಲ್ಲಿ ತಮಾಷೆಯಾಗಿ ಭಾವುಕತೆಯಲ್ಲಿ ಕಮ್ಣೀರು ಸುರಿಸುವಂತೆ ನಟಿಸುವ ತಾಕತ್ತು ರಣಬೀರ್‌ಗಿದೆ. ಅಜಬ್ ಪ್ರೇಮ್ ಕೀ ಗಜಬ್ ಕಹಾನಿಯಲ್ಲಿ ರಣಬೀರ್ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕತ್ರಿನಾ ಕೈಫ್ ಕೂಡಾ ಅಷ್ಟೆ. ನಟನೆ ಬಾರದ ಮೇಣದ ಗೊಂಬೆ ಎಂಬ ಅನ್ವರ್ಥ ನಾಮ ಹೊಂದಿದ್ದ ಕತ್ರಿನಾ ಇತ್ತೀಚೆಗೆ ನ್ಯೂಯಾರ್ಕ್ ಸಿನಿಮಾದಲ್ಲಿ ಹಾಗೆ ಟೀಕೆ ಮಾಡಿದವರ ಬಾಯಿಯನ್ನು ಮುಚ್ಚಿಸಿದ್ದಳು. ತಾನೊಬ್ಬ ಗ್ಲ್ಯಾಮರ್ ಗೊಂಬೆ ಮಾತ್ರ ಅಲ್ಲ, ತನಗೂ ನಟನೆ ಬರುತ್ತದೆ ಎಂದು ತೋರಿಸಿಕೊಟ್ಟು ಎಲ್ಲರೂ ಬಾಯಲ್ಲಿ ಬೆರಳಿಡುವಂತೆ ಮಾಡಿದ ಕತ್ರಿನಾ ಈ ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಚಿತ್ರದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಕತ್ರಿನಾ ಭಾವುಕತೆಯನ್ನೂ, ನಗುವನ್ನೂ,. ಚಿನಗುರಳಿ ತಮಾಷೆಯ್ನನೂ ಸಮನಾಗಿ ತೂಗಿ ಉತ್ತಮವಾಗಿಯೇ ನಟಿ ಅಬ್ಬಾ ಕತ್ರಿನಾಳೇ..! ಅನ್ನುವಂಥ ಬೆರಗು ಮೂಡಿಸಿದ್ದಾರೆ. ಅದರಲ್ಲೂ ಕತ್ರಿನಾ- ರಣಬೀರ್ ಜೋಡಿಯಂತೂ ತೆರೆಯ ಮೇಲೆ ಅತ್ಯದ್ಭುತ!
IFM
ಇನ್ನುಳಿದಂತೆ ದರ್ಶನ್ ಜಾರಿವಾಲಾ ತನ್ನ ಪಾತ್ರಕ್ಕೆ ಜೀವ ನೀಡಿದ್ದರೆ, ಸ್ಮಿತಾ ಜಯ್‌ಕರ್ ತನ್ನಗೊಪ್ಪಿಸಿದ ಪಾತ್ರವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಉಪೇನ್ ಪಟೇಲ್ ಒಕೆ. ಒಟ್ಟಾರೆ ಒಂದು ಉತ್ತಮ ಸಮಯದಲ್ಲಿ ಬಿಡುಗಡೆಯಾದ ಅತ್ಯುತ್ತಮ ಮನರಂಜನೆ ಚಿತ್ರವೆಂದು ಧಾರಾಳವಾಗಿ ಸರ್ಟಿಫಿಕೆಟ್ ಕೊಡಬಹುದು. ಅತ್ಯುತ್ತಮ ಪ್ರಚಾರ, ಉತ್ತಮ ಸಂಗೀತ, ರಣಬೀರ್- ಕತ್ರಿನಾರ ಜೋಡಿ, ಯುತ್‌ಫುಲ್ ಅಪೀಲ್ ಇವಿಷ್ಟೆಲ್ಲವೂ ಚಿತ್ರ ಬಾಕ್ಸಾಫೀಸಿನಲ್ಲಿ ನಿರಾಳವಾಗಿ ಓಡಿಸಬಲ್ಲ ತಾಕತ್ತೆಂದರೆ ತಪ್ಪಲ್ಲ.