ಮುಖ್ಯ ಪುಟಮನರಂಜನೆ » ಬಾಲಿವುಡ್ » ಸಿನಿಮಾ ವಿಮರ್ಶೆ » ಧಾರಾಳವಾಗಿ ನೋಡಿ 'ವೇಕ್ ಅಪ್ ಸಿದ್'! (Movie Review | Wake Up Sid | Ayan Mukerji | Ranbir Kapoor | Konkona Sen Sharma)
ಕಾಲೇಜು ದಿನಗಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆಯೇ ಇಲ್ಲದೆ ಮಜಾ ಮಾಡುತ್ತಿದ್ ದಿನಗಳು, ಗಂಟೆಗಟ್ಟಲೆ ಮೊಬೈಲ್ ಫೋನಿನಲ್ಲಿ ಗೆಳೆಯರೊಂದಿಗೆ ವಟಗುಟ್ಟುತ್ತಿದ್ದುದು, ಪರೀಕ್ಷೆ ಹತ್ತಿರ ಬರುವವರೆಗೂ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ತಿರುಗಾಡುತ್ತಿದ್ದುದು, ಕಾಲೇಜು ಕ್ಯಾಂಪಸ್ಸಿನಲ್ಲಿ ಮಾಡುವ ತರಲೆ ಕಿತಾಪತಿಗಳು... ಒಂದೇ, ಎರಡೇ... ಇಂತಹ ಹಲವು ವಿಚಾರಗಳು ಈಗ ಧುತ್ತನೆ ನೆನಪಿಗೆ ಬರುವುದು ವೇಕ್ ಅಪ್ ಸಿದ್ ಚಿತ್ರದ ಮೂಲಕ.
ಹೌದು. ಕರಣ್ ಜೋಹರ್ ನಿರ್ಮಾಣದ ನಿರೀಕ್ಷೆ ಹುಟ್ಟಿಸಿದ್ದ ವೇಕ್ ಅಪ್ ಸಿದ್ ಬಿಡುಗಡೆ ಕಂಡಿದೆ. ಈ ಚಿತ್ರ ಜೀವನದ ಒಂದು ಪುಟ್ಟ ತುಂಡು ಇದ್ದಂತೆ. ಆ ತುಂಡಿನಲ್ಲಿ ಜೀವನದ ಸಿಹಿ, ಕಹಿ, ಮಜಾ, ತಮಾಷೆ, ಪರಿಶ್ರಮ ಎಲ್ಲ ಇದೆ. ಹಾಗೆಯೇ ವೇಕ್ ಅಪ್ ಸಿದ್ ಕೂಡಾ. ನಿರ್ದೇಶಕ ಆಯನ್ ಮುಖರ್ಜಿ ತಮ್ಮ ಚೊಚ್ಚಲ ಚಿತ್ರದಲ್ಲೇ ಸಾಕಷ್ಟು ರಿಯಲಿಸ್ಟಿಕ್ ಆಗಿ ಕಥೆಯನ್ನು ಹೇಳಹೊರಟಿದ್ದಾರೆ. ರಣಬೀರ್ ಕಪೂರ್ ತಮ್ಮ ಅಭಿನಯದ ಮೂಲಕ ತಕ್ಷಣ ತಮ್ಮ ಪ್ರಪಂಚಕ್ಕೆ ನಮ್ಮನ್ನು ಎಳೆದುಬಿಡುತ್ತಾರೆ.
ಈ ಚಿತ್ರ ಸಿದ್ದಾರ್ಥ್ ಮೆಹ್ರಾ (ರಣಬೀರ್ ಕಪೂರ್)ನ ಕಥೆ. ತುಂಬ ಉಡಾಫೆಯ, ಉದಾಸೀನದ ಪರಮಾವಧಿಯ, ಯಾವುದರಲ್ಲೂ ಆಸಕ್ತಿಯೇ ಇರದ ಮುಂಬೈಯ್ಲಲಿರುವ ಯುವಕ ಈತ. ಯಾವುದೇ ಜವಾಬ್ದಾರಿಗಳನ್ನೂ ಹೊತ್ತುಕೊಳ್ಳಲು ಸಿದ್ಧನಿಲ್ಲದ ಈ ಸಿದ್‌ನ ಸಂಗಾತಿಗಳೆಂದರೆ, ಆತನ ಕಾರು, ಕ್ಯಾಮರಾ, ಫ್ರೆಂಡ್ಸ್. ಅಪ್ಪ-ಅಮ್ಮನ ಬಳಿ ಮಾತುಕತೆ ಕಡಿಮೆಯೇ ಇರುವ ಸಿದ್‌ಗೆ ತನ್ನ ಗೆಳೆಯರಾದ ಲಕ್ಷ್ಮಿ ಹಾಗೂ ರಿಶಿ ಜತೆ ಸುತ್ತಾಡುವುದೇ ಪರಮ ಉದ್ದೇಶ. ಅಪ್ಪ ಮಾಡಿಟ್ಟ ಆಸ್ತಿ ಕರಗಿಸೋದಷ್ಟೆ ಈತನ ಕೆಲಸ ಅಂದರೂ ಉತ್ಪ್ರೇಕ್ಷೆಯಲ್ಲ. ಹೀಗಿದ್ದರೂ ಸಿದ್ ತುಂಬ ಪ್ರಾಮಾಣಿಕ, ತಮಾಷೆಯ ಚೆಂದದ ಯುವಕ. ಹೀಗಿರುವಾಗ ಕೋಲ್ಕತ್ತಾದಿಂದ ತುಂಬ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು ಬರುವ ಆಯಿಷಾ ಬ್ಯಾನರ್ಜಿ (ಕೊಂಕಣಾ ಸೇನ್ ಶರ್ಮಾ)ಗೆ ಮುಂಬೈಯಲ್ಲಿ ಮೊದಲ ಬಾರಿಗೆ ಪರಿಚಯವಾಗುವುದು ಸಿದ್ ಜತೆ.
IFM
ಮುಂಬೈಯಲ್ಲಿ ಮನೆ ಹುಡುಕಿಕೊಂಡು ತನ್ನದೇ ಕಾಲ ಮೇಲೆ ತಾನು ನಿಂತು ಬರಹಗಾರ್ತಿಯಾಗಬೇಕೆಂದು ಕನಸು ಕಾಣುವ ಆಯಿಷಾಗೆ ಮನೆ ಹುಡುಕಿಕೊಳ್ಳಲು ಸಹಕಾರ ನೀಡುವುದು ಸಿದ್ ಹಾಗೂ ಆತನ ಗೆಳೆಯರ ಗ್ಯಾಂಗ್. ಹೀಗೇ ಆಯಿಷಾ, ಸಿದ್ ಫ್ರೆಂಡ್ ಆಗುತ್ತಾರೆ. ತುಂಬ ಧೈರ್ಯಶಾಲಿಯಾದ ಆಯಿಷಾ ತನ್ನ ಕೆಲಸ, ಕನಸುಗಳ ಜತೆಜತೆಗೆ ಸಿದ್ ಫ್ರೆಂಡ್‌ಶಿಪ್ ಮುಂದುವರಿಸುತ್ತಾಳೆ. ಆದರೆ ಇತ್ತ ಸಿದ್ ಮಾತ್ರ ತನಗಿರುವ ಅಪಾರ ಆಸ್ತಿಯ ನೆಪದಲ್ಲಿ ಯಾವ ಜವಾಬ್ದಾರಿಯೂ ಇಲ್ಲದೆ ಉಂಡಾಡಿ ಗುಂಡನ ಹಾಗೆ ಸಮಯ ವೇಸ್ಟ್ ಮಾಡುತ್ತಿರುವುತ್ತಾನೆ. ಯಾರಿಂದಲೂ ಬದಲಾಯಿಸಲಾಗದ ಇಂತಿಪ್ಪ ಸಿದ್ ಕೊನೆಗೂ ಬದಲಾಗುತ್ತಾನಾ? ಜೀವನದಲ್ಲಿ ಜವಾಬ್ದಾರಿ ಹೊತ್ತುಕೊಳ್ಳುತ್ತಾನಾ? ಹೇಗೆ ಎಂಬುದೇ ವೇಕ್ ಅಪ್ ಸಿದ್ ಚಿತ್ರದ ಸಾರಾಂಶ.
ವೇಕ್ ಅಪ್ ಸಿದ್ ಚಿತ್ರವನ್ನು 'ದಿಲ್ ಚಾಹ್ತಾ ಹೇ'ಗೋ, 'ಲಕ್ಷ್ಯ'ಕ್ಕೋ ಹೋಲಿಸಲು ಸಾಧ್ಯವಾಗದು. ಅವೆಲ್ಲವುಗಳಿಂದಲೂ ಭಿನ್ನವಾಗಿ ವಿಶಿಷ್ಟವಾಗಿ ನಿಲ್ಲುತ್ತದೆ ವೇಕ್ ಅಪ್ ಸಿದ್. ನಿರ್ದೇಶಕ ಆಯನ್ ಮುಖರ್ಜಿ ಚಿತ್ರವನ್ನು ನಿರೂಪಿಸುವುದರಲ್ಲೇ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.
IFM
ಮೊದಲ ಒಂದು ಗಂಟೆ ನಮ್ಮನ್ನು ಕ್ಷಣದಲ್ಲೇ ಅದರ ಜಗತ್ತಿಗೆ ಜಾರಿಸಿ ಎಳೆದು ಬಿಡುತ್ತದೆ. ನಮಗರಿವೇ ಆಗದೆ ನಾವು ಸಿದ್‌ನ ಜಗತ್ತಿಗೆ ಪ್ರವೇಶಿಸಿರುತ್ತೇವೆ. ಆತ ನಕ್ಕರೆ ನಾವೂ ನಗುತ್ತೇವೆ. ಒಂದು ಗೊತ್ತೇ ಆಗದ ಪ್ರತಿಕ್ರಿಯೆ ನಾವು ಸಿದ್‌ನನ್ನು ನೋಡುತ್ತಾ ಕೊಡುತ್ತಾ ಇರುತ್ತೇವೆ. ಅಷ್ಟರಲ್ಲಿ ಮೊದಲರ್ಧ ಮುಗಿದಿರುತ್ತದೆ. ಇಷ್ಟು ಬೇಗ ಮೊದಲರ್ಧ ಮುಗಿಯಿತೇ ಅಂತನಿಸಿದರೆ ಉತ್ಪ್ರೇಕ್ಷೆಯಲ್ಲ. ಆದರೆ ದ್ವಿತೀಯಾರ್ಧ ಮೊದಲರ್ಧದಷ್ಟು ವೇಗ ಪಡೆಯುವುದಿಲ್ಲ. ಇದ್ದಕ್ಕಿದ್ದಂತೆ ಚಿತ್ರಕ್ಕೆ ಬೇರೆ ಆಯಾಮ ದೊರಕುತ್ತದೆ. ನಿಧಾನಗತಿಯ್ಲಲಿ ಸಾಗುತ್ತದೆ. ಇಲ್ಲಿ ಸ್ವಲ್ಪ ಕತ್ತರಿ ಪ್ರಯೋಗ ಮಾಡಿದ್ದರೂ ನಡೆಯುತ್ತಿತ್ತೇನೋ.
ಆದರೂ, ನಿರ್ದೇಶಕ ಆಯನ್ ಮುಖರ್ಜಿ ಚಿತ್ರದ ಹಲವು ದೃಶ್ಯಗಳಿಗೆ ಉತ್ತಮ ಪಂಚನ್ನೇ ನೀಡಿದ್ದಾರೆ. ಭಾವುಕ ಸನ್ನಿವೇಶಗಳು ನಿಜಕ್ಕೂ ನಮ್ಮ ಕಣ್ಣುಗಳಲ್ಲೂ ನೀರು ತರಿಸುವಷ್ಟು ಮನೋಜ್ಞವಾಗಿ ಮೂಡಿಬಂದಿದೆ. ಶಂಕರ್-ಇಶಾನ್-ಲಾಯ್ ಸಂಗೀತ ಮಧುರವಾಗಿದೆ. ಅನಿಲ್ ಮೆಹ್ತಾರ ಸಿನೆಮ್ಯಾಟೋಗ್ರಫಿ ಚಿತ್ರದ ಪ್ರಮುಖ ಹೈಲೈಟ್. ನಿರಂಜನ್ ಅಯ್ಯಂಗಾರ್ ಅವರ ಸಂಭಾಷಣೆ ರುಚಿಕಟ್ಟಾಗಿದೆ.
ರಣಬೀರ್ ಕಪೂರ್ ತಾನೊಬ್ಬ ಅದ್ಭುತ ಪ್ರತಿಭೆಯಿರುವ ನಟ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಆ ಪಾತ್ರಕ್ಕೆ ಅವರೇ ಸೂಕ್ತ, ಅವರಿಲ್ಲದೆ ಪಾತ್ರ ಅಷ್ಟೊಂದು ಚೆನ್ನಾಗಿ ಮೂಡಿಬರುತ್ತಿರಲಿಲ್ಲವೇನೋ ಎಂಬಷ್ಟು ಅದ್ಭುತವಾಗಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ರಣಬೀರ್. ಕೊಂಕಣಾ ಬಗ್ಗೆಯೂ ಎರಡು ಮಾತೇ ಇಲ್ಲ. ಯಾವುದೇ ಪರಿಶ್ರಮವೇ ಇಲ್ಲದೇ ಲೀಲಾಜಾಲವಾಗಿ ನಟಿಸಿದಂತೆ ಸಲೀಸಾಗಿ ನಟಿಸಿದ್ದಾರೆ ಕೊಂಕಣಾ. ರಣಬೀರ್ ಅಪ್ಪನ ಪಾತ್ರದಲ್ಲಿ ಅನುಪಮ್ ಖೇರ್ ವಂಡರ್‌ಫುಲ್. ಅಮ್ಮನಾಗಿ ಸುಪ್ರಿಯಾ ಪಾಥಕ್ ಕೂಡಾ ಅಷ್ಟೇ ವಂಡರ್‌ಫುಲ್.
ಒಟ್ಟಾರೆ ವೇಕ್ ಅಪ್ ಸಿದ್ ಯುವ ಮನಸ್ಸುಗಳನ್ನು ಆವರಿಸಿಬಿಡುವ ಒಂದು ಮುದ್ದಾದ ಚಿತ್ರ ಎಂದು ಧಾರಾಳವಾಗಿ ಹೇಳಬಹುದು. ನಗರ ಕೇಂದ್ರೀಕೃತವಾಗಿರುವ ಚಿತ್ರ ನಗರವಾಸಿಗಳನ್ನು ಸೆಳೆಯುವುದರಲ್ಲಿ ಆಶ್ಚರ್ಯವಿಲ್ಲ.