ನನ್ಹೇ ಜೈಸಲ್ಮೇರ್, ಹೀರೋಸ್‌ನಂತಹ ಚಿತ್ರಗಳನ್ನು ನೀಡಿದ ಸಮೀರ್ ಕಾರ್ಣಿಕ್ ಈಗ ವಾದಾ ರಹಾದೊಂದಿಗೆ ಮತ್ತೆ ಬಂದಿದ್ದಾರೆ. ಚಿತ್ರ ಭಾವುಕತೆಯಿಂದ ಮೇಳೈಸಿದರೂ, ಪ್ರೇಕ್ಷಕನ ಮನ ಗೆಲ್ಲುವಲ್ಲಿ ಸಂಪೂರ್ಣ ಸೋಲುತ್ತದೆ.
'ವಾದಾ ರಹಾ- ಐ ಪ್ರಾಮಿಸ್' ಕಥೆ ರಷ್ಯಾದ ನೀತಿಕಥೆಯೊಂದರಿಂದ ಆಯ್ದುಕೊಂಡಿದ್ದು. ಇಬ್ಬರು ರೋಗಿಗಳ ನಡುವಿನ ಸಂಬಂಧ ಇಲ್ಲಿನ ಕಥಾ ಹಂದರ. ಇಬ್ಬ ಒಬ್ಬ ರೋಗಿ ಬೆಳೆದವನಾದರೆ ಇನ್ನೊಬ್ಬ ಪುಟ್ಟ ಹುಡುಗ. ಒಂದು ಇಂಟರೆಸ್ಟಿಂಗ್ ಕಥಾ ಹಂದರವಿದ್ದರೂ ಇಲ್ಲಿ ತೊಡಕೂ ಇದೆ. ಜನರನ್ನು ಮೋಡಿ ಮಾಡಬಲ್ಲ, ಸೆರೆಹಿಡಿಯಬಲ್ಲ ಚಿತ್ರಕಥೆ ಹೆಣೆದಿಲ್ಲ. ಆದರೂ ವಾದಾ ರಹಾ ನೋಡುವಂತೆ ಮಾಡುವುದು ಬಾಬ್ಬಿ ಡಿಯಾಲ್‌ರ ಅಭಿನಯ. ಈವರೆಗೆ ಅವರು ಮಾಡಿದ ಉತ್ತಮ ಅಭಿನಯಗಳಲ್ಲಿ ವಾದಾ ರಹಾ- ಐ ಪ್ರಾಮಿಸ್ ಕೂಡಾ ಒಂದು.
ಡ್ಯೂಕ್‌ನ (ಬಾಬ್ಬಿ ಡಿಯಾಲ್) ಜೀವನ ಸಮೃದ್ಧವೇ. ವೃತ್ತಿಯಲ್ಲಿ ಆತ ಯಶಸ್ವೀ ಡಾಕ್ಟರ್. ವೈಯಕ್ತಿಕವಾಗಿಯೂ ತುಂಬ ಪ್ರೀತಿಸುವ ಮನಸ್ಸುಳ್ಳ ಹಾಗೂ ನಾಯಿಗಳೆಂದರೆ ಮುದ್ದು ಮಾಡುವ ಮನಸ್ಸಿನವನು. ಇಂಥ ಡ್ಯೂಕ್ ನಳಿನಿಯನ್ನು (ಕಂಗನಾ ರಾಣಾವತ್) ಪ್ರೀತಿಸುತ್ತಾನೆ. ಹಾಗೂ ಸದ್ಯದಲ್ಲೇ ಮದುವೆಯಾಗಲೂ ಅವರು ಸಿದ್ಧರಾಗಿರುತ್ತಾರೆ. ಆದರೆ ಇಂಥ ಡ್ಯೂಕ್‌ನ ಸಮೃದ್ಧ ಜೀವನಕ್ಕೊಂದು ಇದ್ದಕ್ಕಿದ್ದಂತೆ ಪೂರ್ಣವಿರಾಮ ಬೀಳುತ್ತದೆ.
IFM
ಒಂದು ಆಕ್ಸಿಡೆಂಟ್‌ನಿಂದಾಗಿ ಪಾರ್ಶ್ವವಾಯು ಬಡಿಯುತ್ತದೆ. ನಳಿನಿ ಅವನ ಕೈಬಿಡುತ್ತಾಳೆ. ಆತನಿಗೆ ತನ್ನ ಬಗೆಗೇ ಸಿಟ್ಟು ಬಂದು ಆತ ವ್ಯಗ್ರನಾಗುತ್ತಾನೆ. ತನ್ನೆಲ್ಲ ಕನಸುಗಳನ್ನೂ ಬಿಟ್ಟು ಬಿಡುವ ಡ್ಯೂಕ್ ಇಂಥ ಜೀವನಕ್ಕಿಂತ ಸಾವಾದರೂ ಬಂದಿದ್ದರೆ ಎಂದು ಹಲುಬುತ್ತಾನೆ.
ಇಂಥ ಸಂದರ್ಭ ರೋಷನ್ (ದ್ವಿಜ್ ಯಾದವ್) ಎಂಬ ಪುಟ್ಟ ಬಾಲಕ ಡ್ಯೂಕ್ ಜೀವನದಲ್ಲಿ ಪ್ರವೇಶಿಸುತ್ತಾನೆ. ಡ್ಯೂಕ್ ರೋಷನ್‌ನ ಮೊದಲ ಭೇಟಿಯಲ್ಲಿ ಅವನನ್ನು ದ್ವೇಷಿಸುತ್ತಾನಾದರೂ ನಂತರ ರೋಷನ್ ಡ್ಯೂಕ್‌ನ ಮನಗೆಲ್ಲುತ್ತಾನೆ. ರೋಷನ್ ಡ್ಯೂಕ್‌ನ ಕನಸುಗಳಿಗೆ ನೀರೆರೆಯುತ್ತಾನೆ. ಇದೇ ಸಂದರ್ಭ ಪಾರ್ಶ್ವವಾಯ ಬಡಿದ ಆತನ ದೇಹದಲ್ಲಿ ಸಣ್ಣ ಚೇತರಿಕೆ ಕಾಣುತ್ತದೆ. ವೈದ್ಯರು ಕೊನೆಗೂ ಆತ ಆಧಾರ ಕೋಲಿನ ಮುಖಾಂತ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಇಂಥಹ ಸಂದರ್ಭ ಆತನಿಗೊಂದು ಶಾಕ್ ಕಾದಿರುತ್ತದೆ.
IFM
ನಿರ್ದೇಶಕ ಸಮೀರ್ ಕಾರ್ಣಿಕ್ ಭಾವುಕತೆಯನ್ನು ಚಿತ್ರದಲ್ಲಿ ಚೆನ್ನಾಗಿ ಬಿಂಬಿಸಿದ್ದರೂ, ಉತ್ತಮ ಚಿತ್ರಕಥೆಯಾಗಿಸುವಲ್ಲಿ ಸೋತಿದ್ದಾರೆ. ಡ್ಯೂಕ್‌ಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರುವಾಗ ಆತನನ್ನು ತುಂಬ ಪ್ರೀತಿಸುತ್ತಿದ್ದ ನಳಿನಿ ಆತನನ್ನು ಮದುವೆಯಾಗೋದಿರಲಿ, ಆತನನ್ನು ನೋಡಲು ಆಸ್ಪತ್ರೆಗೂ ಬರುವುದಿಲ್ಲ ಎಂಬುದು ಪ್ರೇಕ್ಷಕನಿಗೆ ಅರಗಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಅಂತ್ಯದಲ್ಲಿ ಡ್ಯೂಕ್ ಹುಷಾರಾಗಿ ನಡೆಯುವಂತಾಗುತ್ತಾನೆ ಎನ್ನುವಷ್ಟರಲ್ಲಿ ನಳಿನಿ ಮತ್ತೆ ಬರುತ್ತಾಳೆ, ಆತನ ಜತೆಗೆ ಆಕೆಗೆ ಮದುವೆಯಾಗುತ್ತದೆ ಎಂಬುದನ್ನು ಖಂಡಿತವಾಗಿಯೂ ಪ್ರೇಕ್ಷಕ ಕಲ್ಪಿಸಿಕೊಳ್ಳಲಾರ. ಇದನ್ನು ಸಿದ್ಧವಾಗಿಸುವ ಮೂಲಕ ವಿಚಿತ್ರ ಅಂತ್ಯವ್ನನು ನೀಡಿದ್ದಾರೆ ನಿರ್ದೇಶಕರು.
ರೋಷನ್ ಎಂಬ ಪುಟ್ಟ ಬಾಲಕ ಡ್ಯೂಕ್‌ಗೆ ಆಸ್ಪತ್ರೆಯಲ್ಲಿ ಜತೆಯಾಗಿ ಆತನ ಬದುಕಿನಲ್ಲಿ ಚೈತನ್ಯ ಮೂಡಿಸುತ್ತಾನೆ ನಿಜ. ಆದರೆ ಅಂಥ ಪುಟ್ಟ ಬಾಲಕನಲ್ಲಿ ಜಗತ್ತನ್ನೇ ಅರಿತ ಅನುಭವಿ ಹಿರಿಯನ ಬಾಯಲ್ಲಿ ಬರುವ ಮಾತುಗಳನ್ನು ಹೇಳಿಸಿದ್ದಾರೆ ನಿರ್ದೇಶಕರು. ಪುಟ್ಟ ಬಾಲಕ ಹೀಗೆ ಅನುಭವಿಯಂತೆ ಮಾತನಾಡುವುದು ಕೂಡಾ ವಿಚಿತ್ರ ಎನಿಸುತ್ತದೆ. ಪ್ರೇಕ್ಷಕ ಇದನ್ನೂ ಖಂಡಿತವಾಗಿ ಅರಗಿಸಲಾರ.
ತಾಂತ್ರಿಕವಾಗಿ ಹೇಳುವುದಾದರೆ ಎಷ್ಟೇ ತೊಡಕುಗಳಿದ್ದರೂ ಕೆಲವು ದೃಶ್ಯಗಳನ್ನು ನಿರ್ದೇಶಕ ಸಮೀರ್ ಉತ್ತಮವಾಗಿ ನಿಭಾಯಿಸಿದ್ದಾರೆ. ಬಾಬ್ಬಿ ಡಿಯಾಲ್ ಅಭಿನಯ ಅದ್ಬುತ. ಕಂಗನಾ ರಾಣಾವತ್ ಸುಮಾರು ಅಷ್ಟೆ. ದ್ವಿಜ್ ಚೆನ್ನಾಗಿಯೇ ಅಭಿನಯಿಸಿದ್ದಾನೆ. ಚಿತ್ರದ ಸಿನೆಮಾಟೋಗ್ರಫಿ ಅದ್ಭುತ. ಸಂಗೀತ ಒಕೆ. ಒಟ್ಟಾರೆ ವಾದಾ ರಹಾ ಕೂತು ನೋಡಬಲ್ಲ ಚಿತ್ರವಲ್ಲ. ಊಹೆ ಮಾಡಲಾಗದ, ನೈಜತೆಗೂ ಮೀರಿದ ವಿಚಿತ್ರ ಸನ್ನಿವೇಶಗಳು ಪ್ರೇಕ್ಷಕನನ್ನು ಕನ್‌ಫ್ಯೂಸ್ ಮಾಡುತ್ತದೆ ಎನ್ನದೆ ವಿಧಿಯಿಲ್ಲ.