1973ರ ಪುಟ್ಟಣ್ಣ ಕಣಗಾಲರ ಯಶಸ್ವೀ ಚಿತ್ರ ಎಡಕಲು ಗುಡ್ಡದ ಮೇಲೆ ಎಂದು ಚಿತ್ರದ ಹೆಸರು ಕೇಳಿದರೆ ಸಾಕು, ಥಟ್ಟನೆ ನೆನಪಾಗುವುದು ಚಂದ್ರಶೇಖರ್. ನಂಜುಂಡನಾಗಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಚಂದ್ರಶೇಖರ್ ಕೆಲ ವರ್ಷ ಚಿತ್ರರಂಗದಿಂದ ದೂರ ಉಳಿದು ವಿದೇಶದಲ್ಲಿ ನೆಲೆಸಿದ್ದರು. ಈಗ್ಗೆ, ಕೆಲವೇ ವರ್ಷದ ಹಿಂದಷ್ಟೆ ಅವರು ಮತ್ತೆ ಕನ್ನಡ ಚಿತ್ರರಂಗದತ್ತ ಮರಳಿದ್ದರು.
ಇತ್ತೀಚೆಗಷ್ಟೆ ಬಿಡುಗಡೆಯಾದ ಕಾರಂಜಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ಪಾಠ ಹೇಳಿಕೊಡುವ ಗುರುವಿನ ಪಾತ್ರದಲ್ಲಿ. ಹಲವು ವರ್ಷ ಚಿತ್ರರಂಗದಿಂದ ದೂರ ಉಳಿದ ಇವರು ತಮ್ಮ ನಟನೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಚಂದ್ರಶೇಖರ್ ಹಿಂದೆ ಹೆಚ್ಚಾಗಿ ರಾಜ್‌ಕುಮಾರ್ ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ನಟಿಸಿದ್ದರು.
ಚಂದ್ರಶೇಖರ್ ಪೂರ್ವಾಪರ ಎಂಬ ಚಿತ್ರ ನಿರ್ದೇಶನ ಕೂಡ ಮಾಡಿದ್ದಾರೆ. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಅಲ್ಲಿಂದ ಮತ್ತೆ ನಟನೆ ಕಡೆ ಗಮನವಹಿಸಿದ್ದಾರೆ. ಒಂದು ವರ್ಷದ ಹಿಂದೆ ಬಿಡುಗಡೆಯಾದ ಹಾಗೆ ಸುಮ್ಮನೆ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಇವರು ರಘುರಾಮ್ ನಿರ್ದೇಶನ ಮಾಡುತ್ತಿರುವ ಚೆಲುವೆಯೇ ನಿನ್ನ ನೋಡಲು ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮಲ್ಲಿರೋ ಪ್ರತಿಭೆ ಎಂದೂ ಕುಗ್ಗೋದಿಲ್ಲ ಎಂಬುದಕ್ಕೆ ಚಂದ್ರಶೇಖರ್ ಒಂದು ಜೀವಂತ ನಿದರ್ಶನವಾಗಿದ್ದಾರೆ.