ಗಾಂಧಿನಗರದ ಬ್ಯುಸಿ ತಾರೆ ಪೂಜಾ ಗಾಂಧಿ ಈಗ ಎರಡೆರಡು ಚಿತ್ರಗಳಿಗೆ ಜತೆಯಾಗಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಾ ಸಮಯ ಹೊಂದಿಸುತ್ತಿದ್ದಾಳೆ. ಗೋಕುಲ ಹಾಗೂ ಶ್ರೀಹರಿ ಎರಡೂ ಚಿತ್ರಗಳ ಶೂಟಿಂಗ್ ಈಗ ಆರಂಭಗೊಂಡಿದೆ. ಆದರೆ, ಪೂಜಾ ಈಗಾಗಲೇ ಗಾಂಧಿನಗರದಲ್ಲಿ ತನ್ನ ಭದ್ರಬುನಾದಿ ರೂಪಿಸಿಕೊಂಡರೂ ಅಹಂ ಅನ್ನು ಬೆಳೆಸಿಕೊಂಡಿಲ್ಲ ಎಂಬ ಮೆಚ್ಚುಗೆಯ ಮಾತುಗಳೂ ಆಕೆಯ ಬಗ್ಗೆ ಕೇಳಿ ಬರುವುದೂ ಹೌದು.
ಗಾಂಧಿನಗರದ ದೊಡ್ಡ ದೊಡ್ಡ ಹೀರೋಗಳ ಜತೆಗೆ ನಟಿಸಿದಷ್ಟೇ ಸುಲಭವಾಗಿ ಮಾರ್ಕೆಟ್ ಕುಸಿದು ಹೋದ ನಾಯಕ ನಟರ ಜತೆಗೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಾಮಾನ್ಯವಾಗಿ ಒಂದು ಹಂತಕ್ಕೆ ಬರೋ ಮೊದಲೇ ನಾಯಕಿಯರು ನನಗೆ ಆ ನಾಯಕ ಬೇಡ, ಈ ನಾಯಕನಾದರೆ ಮಾತ್ರ ನಟಿಸುತ್ತೇನೆ ಎಂದೆಲ್ಲ ರಾಗ ತೆಗೆಯುತ್ತಾರಾದರೂ, ಪೂಜಾ ಮಾತ್ರ ಯಾವತ್ತೂ ನಾಯಕ ಯಾರು ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸದ್ಯದ ಬಹುಬೇಡಿಕೆಯ ಪುನೀತ್ ರಾಜ್ ಕುಮಾರ್ ಜತೆ ನಟಿಸಿದಷ್ಟೇ ಸರಾಗವಾಗಿ ಮಾರ್ಕೆಟ್ ಕುಸಿದುಕೊಂಡ ಸುನಿಲ್ ರಾವ್ ಜತೆಗೆ ನಟಿಸಲು ಕೂಡಾ ಇವರು ಒಪ್ಪಿದ್ದಾರೆ.
ಇದಕ್ಕೆಲ್ಲ ಏನು ಕಾರಣ ಎಂದು ಪೂಜಾರನ್ನು ಕೇಳಿದರೆ, ನಾನು ಕೇವಲ ಚಿತ್ರದ ಕಥೆಯ ಮೇಲೆ ಈ ಚಿತ್ರದಲ್ಲಿ ನಟಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇನೆ. ನನಗಿನ್ನೂ ಕಲಿಯುವ ವಯಸ್ಸು. ಅಂಥ ಸಂದರ್ಭ ಈ ನಾಯಕ ಬೇಡ, ಆ ನಾಯಕ ಬೇಡ ಎಂದು ಹೇಳಲು ನಾನ್ಯಾರು? ಅಂಥ ಹಕ್ಕು ನನಗಿಲ್ಲ. ನಾಯಕ ಯಾರಾದರೂ ಸರಿ. ಚಿತ್ರ ಚೆನ್ನಾಗಿದ್ದರೆ ನನಗೆ ಒಕೆ ಎನ್ನುತ್ತಾಳೆ ದಿಟ್ಟತನದಿಂದ ಈ ಗಾಂಧಿ.
ಪ್ರತಿ ಬಾರಿಯೂ ತೆರೆಯ ಮೇಲೆ ನನ್ನನ್ನು ನೋಡಿದಾಗ ಛೆ, ನಾನಿನ್ನೂ ಚೆನ್ನಾಗಿ ನಟಿಸಬಹುದಿತ್ತು ಅನಿಸುತ್ತದೆ ಎಂದು ಸೌಮ್ಯವಾಗಿ ಹೇಳುವ ಪೂಜಾ, ತನ್ನನ್ನು ಮಾಲಾಶ್ರೀಗೆ ಹೋಲಿಸಿದರೆ ನಯವಾಗಿ ತಿರಸ್ಕರಿಸುತ್ತಾಳೆ. ಮಾಲಾಶ್ರೀಯಂತಹ ದೊಡ್ಡ ನಟಿಯರೊಂದಿಗೆ ನನ್ನನ್ನು ಹೋಲಿಸೋದಾ? ಸಾಧ್ಯವಿಲ್ಲ. ಅವರೊಬ್ಬ ಲೆಜೆಂಡ್. ಮಾಲಾಶ್ರೀ ಈಗಲೂ ಸ್ಯಾಂಡಲ್‌ವುಡ್ಡಿನ ರಾಣಿಯೇ. ನಾನು ಅವರ ಕೇವಲ ಶೇ.10ರಷ್ಟು ಭಾಗ ಮಾತ್ರ. ಅಷ್ಟು ದೊಡ್ಡ ಸಾಧಕಿಯ ಜತೆಗೆ ನನ್ನಂಥವರ ಹೋಲಿಕೆ ಬೇಡಪ್ಪಾ ಎನ್ನುತ್ತಾಳೆ ಪೂಜಾ.
ನಾನಿನ್ನು ಕೇವಲ ಐದೇ ವರ್ಷ ಚಿತ್ರರಂಗದಲ್ಲಿರುತ್ತೇನೆ ಎನ್ನುವ ಪೂಜಾ ತನ್ನ ತಂಗಿ ರಾಧಿಕಾ ಗಾಂಧಿಗೆ ಉತ್ತಮ ಮಾರ್ಗದರ್ಶನವನ್ನೂ ನೀಡುತ್ತಾರಂತೆ. ರಾಧಿಕಾಳ ಚಿತ್ರರಂಗದ ಜೀವನ ನನ್ನ ಜವಾಬ್ದಾರಿ ಎನ್ನುವ ಪೂಜಾ, ನಾನು ನನ್ನ ಕೆರಿಯರ್ ಜತೆಗೆ ಆಕೆಯ ಕೆರಿಯರ್ ಮೇಲೆಯೂ ನಿಗಾ ವಹಿಸುತ್ತೇನೆ. ಆಕೆಗೆ ಮಾರ್ಗದರ್ಶನ ನೀಡಲು ನನ್ನನ್ನು ಹೊರತು ಇನ್ಯಾರೂ ಇಲ್ಲ. ಆಕೆಗೆ ನನ್ನ ಅಗತ್ಯ ಬೇಕೇ ಬೇಕು. ಆಕೆ ಉತ್ತಮವಾಗಿ ನಟಿಸಲು ಹಾಗೂ ಆಕೆಯ ಚಿತ್ರಗಳ ಆಯ್ಕೆಯನ್ನೆಲ್ಲ ನಾನೇ ಮಾಡುತ್ತೇನೆ. ನನ್ನ ತಂಗಿಯೂ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡಬೇಕು. ಯಾಕೆಂದರೆ ನಾನು ಅವಳನ್ನು ತುಂಬ ಪ್ರೀತಿಸುತ್ತೇನೆ ಎನ್ನುತ್ತಾಳೆ ಈ ಬೆಂಗಾಲಿ ಹುಡುಗಿ ಪೂಜಾ.