ಕನ್ನಡಿಗರೆಂಬ ಹೆಮ್ಮೆಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಪ್ರಕಾಶ್ ರಾಜ್(ರೈ) ಕನ್ನಡದಲ್ಲೊಂದು ಚಿತ್ರ ಮಾಡ ಹೊರಟಿರುವ ಕಥೆ ಎಲ್ಲರಿಗೂ ಗೊತ್ತು. ತಮಿಳಿನಲ್ಲಿ ತಾನೇ ನಿರ್ಮಾಣ ಮಾಡಿದ್ದ 'ಅಭಿಯುಂ ನಾನುಂ' ಚಿತ್ರವನ್ನು ಮತ್ತೆ ಕನ್ನಡದಲ್ಲಿ ತಾನೇ ಸ್ವತಃ ನಿರ್ದೇಶಿಸಲು ಹೊರಟಿದ್ದಾರೆ ರೈ.
'ಅಭಿಯುಂ ನಾನುಂ' ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಶತದಿನೋತ್ಸವ ಆಚರಿಸಿತ್ತು. ಈಗ ಅದೇ ಕಥೆ 'ನಾನು ನನ್ನ ಕನಸು' ಹೆಸರಿನಲ್ಲಿ ಕನ್ನಡದಲ್ಲಿ ಬರುತ್ತಿದೆ. ಆ ಮೂಲಕ ಪ್ರಕಾಶ್ ರೈ ತಾನು ನಿರ್ದೇಶಿಸುವ ಮೊದಲ ಚಿತ್ರ ಕನ್ನಡದಲ್ಲೇ ಆಗಬೇಕೆಂಬ ಕನಸನ್ನೂ ನನಸು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತವೂ ನಡೆಯಿತು.
ಕನ್ನಡದಲ್ಲೂ ಸ್ವತಃ ಪ್ರಕಾಶ್ ರೈ ನಟಿಸಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ತಂದೆ ಮಗಳ ಬಾಂಧವ್ಯಕ್ಕೆ ಸಂಬಂಧಪಟ್ಟಿದ್ದು, ಚಿಕ್ಕವಳಿದ್ದಾಗ ಅಪ್ಪನೊಡನೆ ಹೇಗಿರುತ್ತಾಳೆ ಬೆಳೆಬೆಳೆಯುತ್ತಾ ಆಕೆ ಹೇಗೆ ಬದಲಾಗುತ್ತಾಳೆ ಎಂಬುದು ಚಿತ್ರದ ಕಥೆಯ ತಿರುಳು.
ಮುಹೂರ್ತ ಸಮಾರಂಭಕ್ಕೆ ರವಿ ಬೆಳೆಗೆರೆ, ವಿಶ್ವೇಶ್ವರ ಭಟ್, ರವಿಚಂದ್ರನ್, ಹಂಸಲೇಖ, ಯೋಗರಾಜ್ ಭಟ್, ರಮೇಶ್, ಗಣೇಶ್, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ರಮ್ಯಾ ಸೇರಿದಂತೆ ಹಲವು ಗಣ್ಯರು ಆಗಮಿಸಿ ರೈಗೆ ಶುಭ ಹಾರೈಸಿದರು. ಅಂದಹಾಗೆ, ಪ್ರಕಾಶ್ ರೈ ಮಗಳಾಗಿ ರಮ್ಯಾ ನಟಿಸುತ್ತಿದ್ದಾರೆ.