ಕೆಂಪೇಗೌಡರ ಕೈ ಹಿಡಿಯುವ ಆತುರದಲ್ಲಿರುವ ನಟಿ ರಾಗಿಣಿ ಕೋಟೆಯಿಂದ ಓಡಿ ಹೊರಬಿದ್ದಿದ್ದಾರೆ. ಹೌದು, ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದಲ್ಲಿ ಆಫರ್ ಸಿಕ್ಕಿದ್ದೇ, ಪ್ರಜ್ವಲ್ ದೇವರಾಜ್ ಅಭಿನಯದ ಕೋಟೆ ಚಿತ್ರ ಯಾವ ಲೆಕ್ಕ ಅಂತ ಮಾಡ್ ನಟಿ ರಾಗಿಣಿ ನಿವಾಳಿಸಿ ಎಸೆದು ಚಿತ್ರತಂಡದಿಂದ ಹೊರ ಬಿದ್ದಿದ್ದಾರೆ ಎನ್ನುವ ಸುದ್ದಿ ಇಂದು ಗಾಂಧಿ ನಗರದ ತುಂಬಾ ಗುಲ್ಲೆದ್ದಿದ್ದು ಬಹಳ ಚರ್ಚಿತವಾಗುತ್ತಿದೆ.
ಕೋಟೆ ಚಿತ್ರದಲ್ಲಿ ಇವರ ಅಭಿನಯದ ಶೂಟಿಂಗ್ ಇದೇ ತಿಂಗಳ 25ರಿಂದ ಆರಂಭವಾಗಬೇಕಿತ್ತು. ಅಲ್ಲಿಂದ 20 ದಿನಗಳ ಕಾಲ್ ಶೀಟ್ ರಾಗಿಣಿ ಕೋಟೆ ಚಿತ್ರಕ್ಕೆ ನೀಡಿದ್ದರು. ಈ ನಡುವೆ ಸುದೀಪ್ ತಂಡದಿಂದ ಬೇಡಿಕೆ ಬಂದಿದ್ದೇ ತಟ್ಟಂತೆ ಓಡಿ ಹೋಗಿದ್ದಾರಂತೆ ರಾಗಿಣಿ. ಇನ್ನೊಂದು ಅಂದರೆ ಈ ಚಿತ್ರದ ನಿರ್ಮಾಪಕ ಮಂಜುನಾಥ್ ಈ ವಿಷಯವನ್ನು ಸಹಿಸಲಾಗದೇ ನೇರವಾಗಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲ, ರಾಗಿಣಿ ಇಲ್ಲದಿದ್ದರೇನು, ಮತ್ತೊಬ್ಬಳು ಸಿಗುತ್ತಾಳೆ ಅನ್ನುತ್ತಾ ಥಟ್ಟನೆ ರಾಗಿಣಿ ಬದಲು ಡಿಂಪಲ್ ಎಂಬ ನಟಿಯನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಹೇಳದೇ ಕೇಳದೇ ಕೈಕೊಟ್ಟ ರಾಗಿಣಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಇಲ್ಲಿ ತಮಗೆ ನ್ಯಾಯ ಸಿಗುವ ಸಂಪೂರ್ಣ ನಂಬಿಕೆ ಇದೆ. ಒಂದೊಮ್ಮೆ ಸಿಗದಿದ್ದ ಪಕ್ಷದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ರಾಗಿಣಿ ಕೆಂಪೇಗೌಡ ಪಾಳಯ ಸೇರಿ ಶೂಟಿಂಗ್‌ನಲ್ಲೂ ಬ್ಯುಸಿ ಆಗಿ ಬಿಟ್ಟಿದ್ದಾರೆ. ಈ ಎಲ್ಲ ಗದ್ದಲ ಗೊಂದಲಗಳ ನಡುವೆ ಕೋಟೆ ಚಿತ್ರದ ಚಿತ್ರೀಕರಣ ಸೆ.17ರಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ.