ದಕ್ಷಿಣ ಭಾರತದ ಆಕ್ಷನ್ ಹೀರೋ ಕರಾಟೆ ಕಿಂಗ್ ಅರ್ಜುನ್ ಸರ್ಜಾ ಈಗ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಎಸ್.ಎಸ್. ಸಮೀರ್ ನಿರ್ದೇಶನದಲ್ಲಿ `ಕಾಂಟ್ರಾಕ್ಟ್' ಚಿತ್ರಕ್ಕೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಮತ್ತೊಬ್ಬ ತೆಲುಗು ನಟ ಜೆ.ಡಿ. ಚಕ್ರವರ್ತಿ ಸಹನಟನಾಗಿ ಸ್ಯಾಂಡಲ್ವುಡ್ಗೆ ಪ್ರಥಮ ಎಂಟ್ರಿ ಪಡೆದಿದ್ದಾರೆ. ಈಗಾಗಲೇ ಕನ್ನಡಿಗರ ಹೃದಯಕ್ಕೆ ಕಿಚ್ಚು ಹಚ್ಚಿ ಹೋಗಿರುವ ಬಾಲಿವುಡ್ ಸೆಕ್ಸಿ ನಟಿ ಮಲ್ಲಿಕಾ ಶೆರಾವತ್ ಹಾಗೂ ಮತ್ತೊಬ್ಬ ನಟಿ ಮಿನಿಷಾ ಲಂಬಾ ನಟಿಸಲಿದ್ದಾರೆ ಎಂದು ನಿರ್ಮಾಪಕ ರಾಮಚಂದ್ರ ರಾಜು ತಿಳಿಸಿದ್ದಾರೆ.
ಎಲ್ಲರೂ ಹೊರನಾಡಿನವರೇ ಇದ್ದಾಗ ಇನ್ನೂ ಕನ್ನಡ ಚಿತ್ರ ಏಕೆ ಮಾಡಬೇಕು ಎಂಬ ಮಾತು ಬರದಿರಲೀ ಅಂತಲೋ ಏನೋ ರಂಗಾಯಣ ರಘು, ರಮೇಶ್ ಭಟ್, ಸಾಧು ಕೋಕಿಲ, ಶರಣ್ ಮತ್ತಿತರ ಕಲಾವಿದರನ್ನು ಸಹ ಈ ಚಿತ್ರತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಚಿತ್ರತಂಡದಲ್ಲಿ ತೆಲುಗು, ತಮಿಳು ಹಾಗೂ ಕನ್ನಡದ ನಟನಟಿಯರ ಕಾಂಬಿನೇಷನ್ನಿಂದ ಕೂಡಿರುವುದರಿಂದ ದಕ್ಷಿಣ ಭಾರತದಲ್ಲಿ ಚಿತ್ರಕ್ಕೆ ಉತ್ತಮ ಮಾರುಕಟ್ಟೆ ದೊರೆಯಲಿದೆ. ಇದೊಂದು ಕನ್ನಡ ಚಿತ್ರರಂಗದ ಮತ್ತೊಂದು ಅದ್ದೂರಿ ವೆಚ್ಚದ ಚಿತ್ರವಾಗಲಿದೆ ಎಂಬುದು ನಿರ್ಮಾಪಕರ ಮಾತು.
ತೆಲುಗು ಚಿತ್ರ ನಿರ್ದೇಶಕ ಚಿತ್ರಬ್ರಹ್ಮ ಖ್ಯಾತಿಯ ಕೆ. ರಾಘವೇಂದ್ರರಾವ್ ಅವರು 2001ರಲ್ಲಿ ಅರ್ಜುನ್ ಸರ್ಜಾ ಅವರನ್ನು `ಶ್ರೀ ಮಂಜುನಾಥ' ಕನ್ನಡ ಚಿತ್ರಕ್ಕೆ ಆಯ್ಕೆ ಮಾಡಿ ಸಕ್ಸಸ್ ಕಂಡಿದ್ದರು. ಚಿತ್ರವನ್ನು ತೆಲುಗಿಗೂ ಡಬ್ಬಿಂಗ್ ಮಾಡಿ ಬಾಕ್ಸ್ ಆಫೀಸ್ ದಾಖಲೆ ನಿರ್ಮಿಸಿದ್ದರು ಎಂಬುದನ್ನು ರಾಮಚಂದ್ರ ರಾಜು ಮನದಲ್ಲಿ ಇಟ್ಟುಕೊಂಡು `ಕಾಂಟ್ರಾಕ್ಟ್' ಚಿತ್ರದ ಮಾರುಕಟ್ಟೆ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎನ್ನಬಹುದಲ್ಲವೆ?