ರಂಗಭೂಮಿ, ಚಲನಚಿತ್ರ, ಕಿರುತೆರೆ, ರಾಜಕಾರಣ, ಸಾಮಾಜಿಕ ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿರುವ ಕನ್ನಡದ ಪುಟ್ನಂಜಿ ಉಮಾಶ್ರೀ ಈಗ ಮತ್ತೆ ಟಿ.ವಿ. ಧಾರಾವಾಹಿ ಮೂಲಕ ನಿಮ್ಮ ಮನೆಯಂಗಳಕ್ಕೆ ಬರಲಿದ್ದಾರೆ.
ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಅಮ್ಮ ನಿನಗಾಗಿ' ಧಾರಾವಾಹಿಯಲ್ಲಿ ಮುದ್ದುಮೊಗ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಯಲ್ಲಿ ನಟನೆಗೆ ಹಲವು ವರ್ಷಗಳ ಬಿಡುವು ನೀಡಿದ್ದ ನಾಯಕಿ ಮಾಧುರಿ ಹಾಗೂ ಮಂಜುಭಾಷಿಣಿ ಸಹ ಮರುಪ್ರವೇಶ ಪಡೆದಿದ್ದಾರೆ.
ಉಮಾಶ್ರೀ ತಮ್ಮ ಮಗಳ ಮದುವೆಗಾಗಿ ಚಿತ್ರರಂಗದಿಂದ ಕೆಲ ಕಾಲ ದೂರ ಉಳಿದಿದ್ದರು. ಮಾಧುರಿ ಹಾಗೂ ಮಂಜುಭಾಷಿಣಿ ಸಂಸಾರದ ಕಾರಣಗಳಿಂದಾಗಿ ಇಷ್ಟು ವರ್ಷ ಅಭಿನಯಕ್ಕೆ ಒತ್ತು ಕೊಟ್ಟಿರಲಿಲ್ಲ. ಈಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಉಮಾಶ್ರೀ ಈಗಾಗಲೇ ಟಿ.ಎಸ್. ರಂಗಾ ನಿರ್ದೇಶನದ ಕುಷ್ಠರೋಗಿಗಳ ಬಗ್ಗೆ 'ನೊಂದವರ ಹಾಡು' ಡಾಕ್ಯುಮೆಂಟರಿ, ಡಾ. ಎಚ್. ಗಿರಿಜಮ್ಮ ನಿರ್ದೇಶನದ ಟೆಲಿಫಿಲಂ 'ಹತ್ಯೆ', ಟಿ.ಎಸ್. ನಾಗಾಭರಣ ನಿರ್ದೇಶನದ 'ಮುಸ್ಸಂಜೆ', ಪ್ರಕಾಶ್ ಬೆಳವಾಡಿ ಅವರ 'ಮುಸ್ಸಂಜೆ ಕಥಾ ಪ್ರಸಂಗ' ಹಾಗೂ ನಿರ್ದೇಶಕ ಚೈತನ್ಯ ಅವರ 'ಕಿಚ್ಚು' ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದಾರೆ.
ಮಂಜುಭಾಷಿಣಿ ದಶಕ ಹಿಂದೆ 'ಭೂಮಿಗೀತ' ಚಿತ್ರದಲ್ಲಿ ನಾಯಕಿಯಾಗಿದ್ದವರು. ಮಾಧುರಿಯವರು ಕಾಶೀನಾಥ್ ಚಿತ್ರದಲ್ಲಿ ಕಾಣಿಸಿಕೊಂಡವರು. ನವೆಂಬರ್ 22ರಿಂದ ಪ್ರಸಾರವಾಗಲಿರುವ 'ಅಮ್ಮ ನಿನಗಾಗಿ' ಧಾರಾವಾಹಿಯನ್ನು ಶ್ರೀನಿವಾಸ್ ಸಂಕಲಾಪುರ ನಿರ್ದೇಶಿಸುತ್ತಿದ್ದು, ಗುಣಶೇಖರ್ ಇದರ ನಿರ್ಮಾಪಕರು.