ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಕನ್ನಡ ಚಿತ್ರರಂಗದ ಸಹ ನಿರ್ದೇಶಕ ಶಶಿಕಾಂತ್ ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊರ್ಕಿ ಮತ್ತು ಕೃಷ್ಣ ಮುಂತಾದ ಚಿತ್ರಗಳ ಸಹ ನಿರ್ದೇಶನ ಕಾರ್ಯ ನಿರ್ವಹಿಸಿದ್ದ ಶಶಿಕಾಂತ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಮದುವೆಯ ದಿನ ಪಾದಪೂಜೆ ಮಾಡಲಿಲ್ಲ ಎಂಬ ಕಾರಣಕ್ಕೆ ಅವರು ಕುಪಿತಗೊಂಡಿದ್ದರು. ಮದುವೆ ಸಂದರ್ಭದಲ್ಲೇ ಲಕ್ಷಾಂತರ ರೂಪಾಯಿ ವರದಕ್ಷಿಣೆ ಪಡೆದ ನಂತರವೂ ಹೆಚ್ಚುವರಿ ವರದಕ್ಷಿಣೆ ತರುವಂತೆಯೂ ಪತ್ನಿಗೆ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿ ಶಶಿಕಾಂತ್, ಕಮಲನಗರದ ನಿವಾಸಿಯಾಗಿದ್ದ ನೇತ್ರಾವತಿಯನ್ನು ವಿವಾಹವಾಗಿದ್ದರು. ವರದಕ್ಷಿಣೆಗಾಗಿ ನಿರಂತರವಾಗಿ ಪೀಡಿಸುವುದಲ್ಲದೇ ಪತ್ನಿಯ ಮೇಲೆ ದೈಹಿಕ ಹಲ್ಲೆ ನಡೆಸಿ, ಮದುವೆಯಾದ ಕೇವಲ ಎರಡೇ ದಿನದಲ್ಲಿ ಮನೆಯಲ್ಲಿ ಕೂಡಿಹಾಕಿದ್ದರು ಎಂದು ನೇತ್ರಾವತಿ ಕುಟುಂಬದವರು ಆರೋಪಿಸಿದ್ದಾರೆ.
ನೇತ್ರಾವತಿಗೆ ಮನೆಯಲ್ಲಿ ದಿಗ್ಬಂಧನ ವಿಧಿಸಿ, ಉಟವನ್ನೂ ಸರಿಯಾಗಿ ಕೊಡುತ್ತಿರಲಿಲ್ಲ. ಸತತ ಮೂರು ವರ್ಷಗಳ ನಿರಂತರ ಪೀಡನೆಯಿಂದಾಗಿ ಬೇಸತ್ತ ನೇತ್ರಾವತಿ, ಹಲಸೂರು ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ.
ಆರೋಪಿ ಶಶಿಕಾಂತ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಲಸೂರು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.