2006ರಲ್ಲಿ ಅನುಪಮ್ ಖೇರ್ ಹಾಗೂ ಬೋಮನ್ ಇರಾನಿ ಜೋಡಿಯಾಗಿ ಅಭಿನಯಿಸಿದ್ದ `ಖೋಸ್ಲಾ ಕಾ ಘೋಸ್ಲಾ ಚಿತ್ರ ಈಗ ಕನ್ನಡದಲ್ಲಿ `ರಾಮೇಗೌಡ ವರ್ಸಸ್ ಕೃಷ್ಣಾರೆಡ್ಡಿ ಎಂಬ ಹೆಸರಿನಲ್ಲಿ ಮೂಡಿಬರಲಿದೆ ಎಂದು ನಿರ್ದೇಶಕ ನಾಗೇಶ್ ಹೇಳಿದ್ದಾರೆ. ಆದರೆ, ಈ ಕಥೆ ಮಾತ್ರ ನನ್ನದಲ್ಲ ಇದು ನಿರ್ಮಾಪಕ ನರ್ಗಿಸ್ ಬಾಬು ಅವರದ್ದು ಎಂದು ಜಾರಿಕೊಂಡಿದ್ದಾರೆ.
ಇದು ರಾಷ್ಟ್ರ ಪ್ರಶಸ್ತಿ ವಿಜೇತ ಹಿಂದಿ ಚಿತ್ರ. ಕಥೆಯ ಸಾರಾಂಶ, ಅಮಾಯಕ ಜನರು ಹೇಗೆ ಅನ್ಯಾಯಕ್ಕೆ ಒಳಗಾಗುತ್ತಾರೆ ಎಂಬುದನ್ನು ರಿಯಲ್ ಎಸ್ಟೇಟ್ ಹಿನ್ನೆಲೆಯಲ್ಲಿ ತೋರಿಸಿದ್ದಾರೆ. ಈ ರೀಮೇಕ್ ಕನ್ನಡ ಚಿತ್ರವನ್ನು ರಿಯಲ್ ಎಸ್ಟೇಟ್ ಕುಳಗಳು ನಿರ್ಮಿಸಲು ಹೊರಟಿರುವುದು ಕಾಕತಾಳೀಯ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ರಿಯಲಿಸ್ಟಿಕ್ ದೃಶ್ಯಗಳು ಚಿತ್ರದಲ್ಲಿ ಮೂಡುತ್ತಿರುವುದು ಜನರಿಗೆ ಮನರಂಜನೆ ಹಾಗೂ ಎಚ್ಚರಿಕೆ ಸಂದೇಶ ನೀಡಬಹುದೇನೋ ಕಾದುನೋಡಬೇಕು.
ಚಿತ್ರದ ತಾರಾಗಣದಲ್ಲಿ ನಟ ಶಶಿಕುಮಾರ್, ಅನಂತನಾಗ್, ರಂಗಾಯಣ ರಘು ಮುಂತಾದವರು ಇದ್ದಾರೆ. ಗೌಡನ ಪಾತ್ರದಲ್ಲಿ ಶಶಿಕುಮಾರ್ ಕಾಣಿಕೊಳ್ಳಲಿದ್ದು, ರಂಗಾಯಣ ರಘು ರೆಡ್ಡಿ ಪಾತ್ರದಲ್ಲಿ ಮಿಂಚಲಿದ್ದಾರೆ.ಸೈಟ್ ಕಳೆದುಕೊಂಡು ವ್ಯಕ್ತಿಯಾಗಿ ಅನಂತನಾಗ್ ಅಭಿನಯಿಸುತ್ತಿದ್ದಾರೆ.
ಬೆಂಗಳೂರು ಸುತ್ತಮುತ್ತಲ ಭೂಕಬಳಿಕೆ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವವರೇ ರೆಡ್ಡಿ-ಗೌಡ ರಾದ್ದರಿಂದ ರಾಮೇಗೌಡ ವರ್ಸಸ್ ಕೃಷ್ಣೇಗೌಡ ಎಂಬ ಶೀರ್ಷಿಕೆ ಸೂಕ್ತ ಎನಿಸುತ್ತದೆ. ಆದರೆ, ಈ ಶೀರ್ಷಿಕೆಗೆ ಅನುಮತಿ ಸಿಗುವುದೇ ಕಷ್ಟವಾಗಿದೆ ಎನ್ನುವ ಮಾತು ಗಾಂಧಿನಗರದಲ್ಲಿದೆ.