ಮದಕರಿ ನಾಯಕನ ಭದ್ರಕೋಟೆ, ಕನ್ನಡ ನಾಡಿನ ಹೆಮ್ಮೆಯ ಚಿತ್ರದುರ್ಗದಲ್ಲಿ ಅಂದು ನಿರ್ದೇಶಕ ಪ್ರೇಮ್ `ಜೋಗಿ' ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಸಕ್ಸಸ್ ಕಂಡಿದ್ದರು.
ಈಗ ಅದೇ ಹಾದಿಯಲ್ಲಿ ನಟ ಶಿವರಾಜ್ ಕುಮಾರ್ ಅಭಿನಯದ `ಮೈಲಾರಿ' ಚಿತ್ರದ ಹಾಡುಗಳ ಕ್ಯಾಸೆಟ್ ಹಾಗೂ ಸಿಡಿ ಬಿಡುಗಡೆ ಕಾರ್ಯಕ್ರಮವೂ ಸಹ ಚಿತ್ರದುರ್ಗದಲ್ಲೇ ಭರ್ಜರಿಯಾಗಿ ಜರುಗಿದೆ. ಇಲ್ಲಿನ ಹಳೇ ಮಾಧ್ಯಮಿಕ ಶಾಲೆಯ ಬೃಹತ್ ಮೈದಾನದಲ್ಲಿ ನಿರ್ಮಿಸಿದ್ದ ಭಾರೀ ವೇದಿಕೆಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅದ್ದೂರಿಯಾಗಿ ನೆರವೇರಿಸಿದರು.
ಈಗಾಗಲೇ ಸ್ಯಾಂಡಲ್‌ವುಡ್‌ನ ಇತ್ತೀಚಿನ ಚಿತ್ರಗಳಾದ `ಜಾಕಿ' ಹಾಗೂ `ಪಂಚರಂಗಿ' ಚಿತ್ರದ ಹಾಡುಗಳನ್ನು ಮೀರಿಸಿದೆ ಈ `ಮೈಲಾರಿ' ಚಿತ್ರ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಧ್ವನಿಸುರುಳಿ ಬಿಡುಗಡೆ ದಿನವೇ 24 ಸಾವಿರಕ್ಕೂ ಹೆಚ್ಚು ಕ್ಯಾಸೆಟ್-ಸಿಡಿಗಳು ಮಾರಾಟವಾಗಿರುವ ಸುದ್ದಿಯನ್ನು ಆನಂದ್ ಆಡಿಯೋ ಸಂಸ್ಥೆ ಹೆಮ್ಮೆಯಿಂದ ಪ್ರಕಟಿಸಿದೆ.
NRB
ಬಿಡುಗಡೆ ಸಮಾರಂಭದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ನಟ, ನಟಿಯರನ್ನು ನೋಡುವ ಸದವಕಾಶ. ವೇದಿಕೆ ಮೇಲೆ ಶಿವರಾಜ್ಕುಮಾರ್ ಪತ್ನಿ ಗೀತಾ ಅವರು ಧ್ವನಿ ಸುರುಳಿ ಬಿಡುಗಡೆ ಮಾಡುತ್ತಿದ್ದಂತೆ ಪ್ರೇಕ್ಷಕರಿಂದ ಕರತಾಡನ. ರಾಘವೇಂದ್ರ ರಾಜ್ಕುಮಾರ್, ನಟ ಪುನೀತ್ ರಾಜ್ಕುಮಾರ್ ತಮ್ಮ ಪತ್ನಿಯರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ.
ಇದು ಶಿವಣ್ಣ ಅವರ 99ನೇ ಚಿತ್ರ ಎನ್ನುತ್ತಾರೆ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಆರ್. ಚಂದ್ರು. ಈ ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ನಡೆಸಿಕೊಟ್ಟ ಸಂಗೀತ ಹಾಗೂ ಡ್ಯಾನ್ಸ್ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು.
ಮೈಲಾರಿ ಚಿತ್ರದ ಹಾಡುಗಳಿಗೆ ಶಿವಣ್ಣ ಹೆಜ್ಜೆ ಹಾಕಿದರೆ, ಜಾಕಿ ಚಿತ್ರ ಹಾಡಿಗೆ ಪುನೀತ್ ಕುಣಿದು ಕುಪ್ಪಳಿಸಿದರು. ಚಿತ್ರದ ನಟಿಯರಾದ ಸದಾ, ಸಂಜನಾ, ಛಾಯಾಗ್ರಾಹಕ ಚಂದ್ರು ಹಾಜರಿದ್ದರು.