ಸದ್ಯದಲ್ಲೇ ಬೆಂಗಳೂರಿನಲ್ಲಿ ಪುಣೆ ಫಿಲಮ್ ಇನ್ಸ್‌ಟಿಟ್ಯೂಟ್ ಶಾಖೆ
ಬೆಂಗಳೂರು, ಮಂಗಳವಾರ, 9 ನವೆಂಬರ್ 2010( 15:12 IST )
ಸದ್ಯದಲ್ಲೇ ನಗರದಲ್ಲಿ ಪುಣೆ ಫಿಲಮ್ ಇನ್ಸ್‌ಟಿಟ್ಯೂಟ್ ಶಾಖೆ ಆರಂಭವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನಿನ್ನೆ ಯುವನಿಕಾದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ಈ ಸುದ್ದಿಯನ್ನು ಬಹಿರಂಗಪಡಿಸಿದರು.
ಒಂದೆಡೆ ಕನ್ನಡ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿದ್ದು, ಮತ್ತೊಂದು ಸಾಲು ಸಾಲಾಗಿ ಸೋಲನ್ನಪ್ಪುತ್ತಿವೆ. ಆದರೆ, ಇತ್ತೀಚೆಗೆ ಕೆಲವು ಸದಭಿರುಚಿಯ ಚಿತ್ರಗಳು ಮಾತ್ರ ನಿರ್ಮಾಪಕರಿಗೆ ಚಿತ್ರರಂಗದಲ್ಲಿ ಉಳಿಯುವಂತೆ ಮಾಡುತ್ತಿವೆ. ಆದ್ದರಿಂದ ಕನ್ನಡ ಚಿತ್ರದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪುಣೆ ಫಿಲಂ ಇನ್ಸ್‌ಟಿಟ್ಯೂಟ್ ಸಹಕಾರಿಯಾಗಲಿದೆ ಎಂದಿದ್ದಾರೆ.
ಮಕ್ಕಳ ಚಿತ್ರೋತ್ಸವ ಹಾಗೂ ಇತರೆ ಚಿತ್ರೋತ್ಸವಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಮೂಲಕವೇ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಅರಸ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲೆಯಾಳಂ ಚಿತ್ರರಂಗದ ಶಾಜಿ ಕರುಣ್ ಮಾತನಾಡಿ ವಿಶ್ವದ ನಾನಾ ಮೂಲೆಯ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಸಿನಿಮಾ ಹೊರತುಪಡಿಸಿ ಮತ್ತೊಂದು ಮಾಧ್ಯಮ ಸಮರ್ಥವಾಗಿ ಮಾಡಿಕೊಡಲು ಸಾಧ್ಯವೇ ಇಲ್ಲ ಎಂದರು.
ಹಿರಿಯ ಕಲಾವಿದರಾದ ಜಯಂತಿ, ಭಾರತಿ ಮತ್ತು ಜಯಮಾಲ ಅವರು ಚಿತ್ರೋತ್ಸವ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ನಗರಾಭಿವೃದ್ದಿ ಸಚಿವ ಎಸ್. ಸುರೇಶ್‌ಕುಮಾರ್, ಅಕಾಡೆಮಿ ನಿರ್ದೇಶಕ ಟಿ.ಎಸ್. ನಾಗಾಭರಣ, ತೈವಾನ್ ಸಾಂಸ್ಕ್ರತಿಕ ರಾಯಭಾರಿ ಜಾಯ್ ಯಂಗ್ ಮತ್ತಿತರರು ಪಾಲ್ಗೊಂಡಿದ್ದರು.