ಕನ್ನಡ ಚಿತ್ರರಂಗದಲ್ಲಿ ತೀರಾ ಕಡಿಮೆ ಬಂಡವಾಳದಲ್ಲೂ ಚಿತ್ರ ಮಾಡಿ ಜನಮನ್ನಣೆ ಗಳಿಸಬಹುದು ಎಂಬ ಸೂತ್ರಕ್ಕೆ ಬದ್ಧನಾಗಿರುವ ನಿರ್ದೇಶಕ ಗುರುಪ್ರಸಾದ್. ಅವರು ಈಗ ಮತ್ತೊಂದು ಸಾಮಾಜಿಕ ಚಿತ್ರಕ್ಕೆ ಕೈಹಾಕಿದ್ದಾರೆ. ವಿಶೇಷತೆ ಏನೆಂದರೆ, `ಎದ್ದೇಳು ಮಂಜುನಾಥ' ಚಿತ್ರದಲ್ಲಿ ಕೋಮಲ್ ಅಣ್ಣ ನವರಸ ನಟ ಜಗ್ಗೇಶ್ ಅವರನ್ನು ಮಂಜುನಾಥನನ್ನು ಮಾಡಿ ಮಿಂಚಿದ್ದರು. ಆ ಚಿತ್ರದ ಸಂಭಾಷಣೆಯಲ್ಲಿ ಚುರುಕುತನವನ್ನು ಮೆರೆದಿದ್ದಲ್ಲದೆ, ಸಮಾಜಕ್ಕೆ ಸಂದೇಶವನ್ನು ರವಾನಿಸಿದ್ದರು.
ಈ ಬಾರಿ ಜಗ್ಗೇಶ್ ಅವರ ತಮ್ಮ ಹಾಸ್ಯ ನಟ ಕೋಮಲ್‌ರನ್ನು ಅವರ ಮುಂದಿನ ಚಿತ್ರ `ಡೈರೆಕ್ಟರ್ ಸ್ಪೆಷಲ್' ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಗಾಂಧಿನಗರದ ಎಡರುತೊಡರುಗಳನ್ನು ವಿಡಂಬಾತ್ಮಕವಾಗಿ ಬಿಂಬಿಸಲು ಹೊರಟಿದ್ದಾರೆ ಗುರುಪ್ರಸಾದ್.
ಈಗಾಗಲೇ `ಯಾರಿಗೆ ಬೇಡ ದುಡ್ಡು `ಮಠ' `ಎದ್ದೇಳು ಮಂಜುನಾಥ' ಹಾಗೂ `ಜುಗಲ್ಬಂದಿ' ಚಿತ್ರಗಳಲ್ಲಿ ಹಾಸ್ಯ, ವಿಡಂಬನೆಯನ್ನು ಚಿತ್ರರಸಿಕರಿಗೆ ಉಣಬಡಿಸಿರುವ ಗುರು `ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ, ಕೋಮಲ್ ಅವರನ್ನು ನಿರ್ದೇಶಕ ಹಾಗೂ ಕಥೆಗಾರನ ಪಾತ್ರದಲ್ಲಿ ಬಿಂಬಿಸಲಿದ್ದಾರೆ.
ಪ್ರಾರಂಭದಲ್ಲಿ ನಾಯಕ ನಟನಾಗಿ ಅಭಿನಯಿಸಲು ಹಿಂಜರಿಯುತ್ತಿದ್ದ ಕೋಮಲ್ ನಂತರ ಒಪ್ಪಿಕೊಂಡಿರುವುದು ಖುಷಿ ತಂದಿದೆ ಎಂದಿದ್ದಾರೆ ನಿರ್ದೇಶಕ ಗುರುಪ್ರಸಾದ್. ಉಳಿದ ತಾರಾಗಣದಲ್ಲಿ ಬಹಳಷ್ಟು ಮಂದಿ ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾತನ್ನು ಆಡಿದ್ದಾರೆ.