'ಜಾಕಿ' ಚಿತ್ರದ ಸಕ್ಸಸ್ ನಂತರ ಕನ್ನಡ ಚಿತ್ರ ನಿರ್ದೇಶಕ ಸೂರಿ ಅವರು ತಮ್ಮ ಸಂಭಾವನೆಯನ್ನು 1 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೋ ಅಥವಾ ಅವರಿಗೆ ನಿರ್ಮಾಪಕರಿಂದಲೇ ಈ ಮಟ್ಟದ ಹಣ ನೀಡುವ ಆಫರ್ ಬಂದಿದೆಯೋ ಎನ್ನುವುದು ಗುಪ್ತ ಸಮಾಚಾರವಾಗಿದೆ.
ಕನ್ನಡದ ಮತ್ತೊಂದು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ `ಗಾಳಿಪಟ' ಚಿತ್ರಕ್ಕೆ ಇಷ್ಟು ಹಣ ನೀಡಲಾಗಿತ್ತು ಎಂದು ಗಾಂಧಿನಗರ ಸುದ್ದಿ. ಅದೇ ರೀತಿ ಸೂರಿ ಅವರು ತಾವೇ ರಚಿಸಿರುವ ಕಥೆ `ಕೆಂಡ ಸಂಪಿಗೆ'ಯ ಹಕ್ಕನ್ನು ಈಗಾಗಲೇ ರಿಜಿಸ್ಟರ್ ಸಹ ಮಾಡಿಸಿದ್ದಾರೆ.
ಈ ಚಿತ್ರದ ಹಕ್ಕನ್ನು ಸ್ಯಾಂಡಲ್‌ವುಡ್‌ನಲ್ಲಿ ಬಾರಿ ಬಜೆಟ್ ಚಿತ್ರ ನಿರ್ಮಾಪಕ ಎಂದೇ ಖ್ಯಾತರಾಗಿರುವ ರಾಮು ಅವರು ಸೂರಿಯವರಿಗೆ ಒಂದು ಕೋಟಿ ನೀಡಲು ತಯಾರಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಈ ಕೆಂಡಸಂಪಿಗೆಗೆ ನಾಯಕ ನಟನಾಗಿ ದರ್ಶನ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ನಿರ್ದೇಶಕ ಸೂರಿ ಅವರೇ ಹೇಳುವಂತೆ ಈ ಚಿತ್ರದ ನಾಯಕನ ಪಾತ್ರ ರಫ್ ಕ್ಯಾರೆಕ್ಟರ್. ಉಳಿದ ತಾರಾಗಣದ ಆಯ್ಕೆಗಾಗಿ ರಾಜ್ಯಾದ್ಯಂತ ಸುತ್ತಿ ಹಲವಾರು ಕಾಲೇಜ್‌ಗಳಲ್ಲಿ ಹೊಸ ಮುಖಗಳನ್ನು ಸ್ಕ್ರೀನ್ ಟೆಸ್ಟ್ ಮಾಡಲಾಗಿದೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.
ಹಿಂದೆ ಸಾಧುಕೋಕಿಲ ಅವರ ನಿರ್ದೇಶನದ `ಸುಂಟರಗಾಳಿ' ಚಿತ್ರಕ್ಕೆ ಸಹನಿರ್ದೇಶಕನಾಗಿ ದರ್ಶನ್ ಜೊತೆ ಕೆಲಸ ಮಾಡಿರುವುದಾಗಿ ಹಾಗೂ ಎಲ್ಲವೂ ಸರಿಹೋದಲ್ಲಿ ಬಹುಶಃ 2011ರ ಮಾರ್ಚ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದು ಎಂಬುದನ್ನು ಸೂರಿ ಹೇಳಿದ್ದಾರೆ.