ಅಶೋಕ್ ಖೇಣಿ ಎಂದರೆ ಯಾರಿಗೆ ಗೊತ್ತಿದೆಯೋ ಇಲ್ಲವೋ? ರಾಜಕಾರಣಿಗಳಿಗಂತೂ ಅದರಲ್ಲೂ ಮುಖ್ಯವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೆ ದೇವರಿಗಿಂತ ಹೆಚ್ಚಾಗಿ ಖೇಣಿಯದ್ದೇ ಧ್ಯಾನ ಎನ್ನುತ್ತಾರೆ ನೈಸ್ ರಸ್ತೆಯ ಮಂದಿ.
ಖೇಣಿ ಒಬ್ಬ ಉದ್ಯಮಿಯಾದರೂ ಸಿನಿಮಾ ಹಾಗೂ ರಾಜಕಾರಣದ ಜಂಜಾಟದಲ್ಲಿ ಸದಾ ಸಿಲುಕಿರುತ್ತಾರೆ ಎನ್ನುವುದಂತೂ ನಿಜ. ಈವರೆಗೆ ಸಂಪೂರ್ಣ ರಾಜಕಾರಣಿಯಾಗದಿದ್ದರೂ ಮುಖ್ಯಮಂತ್ರಿ ಪದವಿ ಸಿಕ್ಕಿದೆ. ಈಗ ಗೃಹ ಮಂತ್ರಿಯಾಗಲು ಹೊರಟಿದ್ದಾರೆ.
ಏನಿದು...! ಎಂದು ಗಾಬರಿಯಾಗಬೇಡಿ. ನಟ ಸುದೀಪ್ ಅವರು ಅಭಿನಯಿಸುತ್ತಿರುವ `ಕೆಂಪೇಗೌಡ' ಚಿತ್ರದಲ್ಲಿ ಗೃಹ ಸಚಿವ ಪಾತ್ರ ನಿರ್ವಹಿಸಲಿದ್ದಾರೆ ಖೇಣಿ ಸಾಹೇಬ್ರು.
ಈಗಾಗಲೇ ಮಹಾರಾಜನಾಗಿ, ಪೊಲೀಸ್ ಕಮೀಷನರ್ ಆಗಿ ಕಾಣಿಸಿಕೊಂಡಿರುವ ಖೇಣಿ ಅವರು `ಐಶ್ವರ್ಯ', `ಮರುಜನ್ಮ' ಮತ್ತು `ಮಚ್ಚಾ' ಸಿನಿಮಾದಲ್ಲಿ ನಟಿಸಿ, ಉದ್ಯಮಿ ಜೊತೆ ಹವ್ಯಾಸಿ ಕಲಾವಿದ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಸುದೀಪ್ ಅವರ ಆಹ್ವಾನವನ್ನು ಅಲ್ಲಗೆಳೆಯಲಾಗದೆ ಕೆಂಪೇಗೌಡ ಚಿತ್ರದಲ್ಲಿ ಹೋಮ್ ಮಿನಿಸ್ಟರ್ ಆಗುತ್ತಿದ್ದೇನೆ. ಇದೇನು ನನಗೆ ಕಷ್ಟವಲ್ಲ. ಏಕೆಂದರೆ ಈಗಾಗಲೇ ಚೀಫ್ ಮಿನಿಸ್ಟರ್ ಆಗಿದ್ದೇನಲ್ಲಾ ಎಂದಿದ್ದಾರೆ. ಏನೇ ಆಗಲಿ ಮುಂದೊಂದು ದಿನ ನನ್ನನ್ನು ಜೆಡಿಎಸ್‌ನವರು ಮಂತ್ರಿ ಮಾಡುತ್ತಾರೆ ಎಂದು ಜೋರಾಗಿ ನಕ್ಕುಬಿಟ್ಟರು.
ಅಂತೂ ಇಂತೂ ರಾಜಕಾರಣಿಗಳ ಹಾವಳಿಯಿಂದ ನಾನು ಸಚಿವನಾದರೂ ಆಗಬಹುದು ಎಂಬ ರಾಜಕೀಯರಂಗ ಪ್ರವೇಶದ ಮುನ್ಸೂಚನೆ ನೀಡಿದಂತಿತ್ತು ಅವರ ಧಾಟಿ.